ಬೆಂಗಳೂರು, ಜುಲೈ31 : ಮಾಜಿ ಸಚಿವ ಮತ್ತು ಕಾಂಗ್ರೆಸ್ ಮುಖಂಡ ವಿನಯ್ ಕುಲಕರ್ಣಿಗೆ ಕೊನೆಗೂ ಕರ್ನಾಟಕ ಹೈಕೋರ್ಟ್ ಕೊನೆಗೂ ಜಾಮೀನು ಮಂಜೂರು ಮಾಡಿದೆ. ಇದರಿಂದಾಗಿ ಕಳೆದ ಕೆಲ ಸಮಯದಿಂದ ಜೈಲುವಾಸ ಅನುಭವಿಸುತ್ತಿದ್ದ ವಿನಯ್ ಕುಲಕರ್ಣಿ ಅವರಿಗೆ ದೊಡ್ಡ ನೆಮ್ಮದಿ ಸಿಕ್ಕಂತಾಗಿದೆ. ಧಾರವಾಡದ ಬಿಜೆಪಿ ಮುಖಂಡ ಯೋಗೇಶ್ ಗೌಡ ಕೊಲೆ ಪ್ರಕರಣದಲ್ಲಿ ವಿನಯ್ ಕುಲಕರ್ಣಿ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದರು. ಇದೀಗ ಕರ್ನಾಟಕ ಹೈಕೋರ್ಟ್ ಬಿಗ್ ರಿಲೀಫ್ ನೀಡಿದೆ. ವಿನಯ್ ಕುಲಕರ್ಣಿ ಅವರು ಸಲ್ಲಿಸಿದ್ದ ಜಾಮೀನು ಹಾಗೂ ಶಿಕ್ಷೆಗೆ ತಡೆ ಕೋರಿದ ಅರ್ಜಿಯ ಸುದೀರ್ಘ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಮೊಹಮ್ಮದ್ ನವಾಜ್ ಅವರಿದ್ದ ಪೀಠ, ಅವರ ಶಿಕ್ಷೆಯನ್ನು ಅಮಾನತಿನಲ್ಲಿಟ್ಟು ಜಾಮೀನು ಮಂಜೂರು ಮಾಡಿ ತೀರ್ಪು ಪ್ರಕಟಿಸಿದೆ.
ಬೆಳ್ತಂಗಡಿ ಪೊಲೀಸರ ಡ್ರಗ್ ಬೇಟೆ,ಇಂದು ದುಬೈಗೆ ಹಾರಬೇಕಿದ್ದ ಹಕ್ಕಿ ಖಾಕಿ ಪಂಜರದಲ್ಲಿ..!
ಹೈಕೋರ್ಟ್ ತೀರ್ಪಿನ ಪ್ರಕಾರ , ವಿನಯ್ ಕುಲಕರ್ಣಿ ಸೇರಿದಂತೆ ಒಟ್ಟು 10 ಆರೋಪಿಗಳಿಗೆ ನ್ಯಾಯಾಲಯ ಜಾಮೀನು ನೀಡಿ ಆದೇಶಿಸಿದೆ. ಪ್ರಕರಣದ ಮತ್ತೊಬ್ಬ ಪ್ರಮುಖ ಆರೋಪಿ ಚನ್ನಕೇಶವ ಟಿಂಗರಿಕರ್ ಅವರಿಗೂ ಜಾಮೀನು ಲಭಿಸಿದೆ. ಜಾಮೀನು ಮಂಜೂರು ಮಾಡುವ ವೇಳೆ ಹೈಕೋರ್ಟ್ ಕೆಲವು ಕಠಿಣ ಷರತ್ತುಗಳನ್ನು ವಿಧಿಸಿದೆ. ಅರ್ಜಿದಾರರು 5 ಲಕ್ಷ ರೂಪಾಯಿ ಮೌಲ್ಯದ ವೈಯಕ್ತಿಕ ಬಾಂಡ್ ಹಾಗೂ ಇಬ್ಬರ ಶೂರಿಟಿ ಒದಗಿಸಬೇಕು ಎಂದು ಸೂಚಿಸಿದೆ. ಜೊತೆಗೆ, ನ್ಯಾಯಾಲಯದ ಪೂರ್ವಾನುಮತಿ ಇಲ್ಲದೆ ದೇಶ ತೊರೆಯುವಂತಿಲ್ಲ ಎಂದು ಸ್ಪಷ್ಟಪಡಿಸಿದೆ.