ಉಡುಪಿ, ಜುಲೈ 29 : ಕಾಂಗ್ರೆಸ್ ಹಾಗೂ ಸಿಜೆಪಿ ವಿರುದ್ಧ ಉಡುಪಿ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಪ್ರತಿಭಟನಾ ಕಾರ್ಯಕ್ರಮದ ವೇಳೆ ಉಡುಪಿ ಬಿಜೆಪಿ ಶಾಸಕ ಯಶ್‌ಪಾಲ್ ಸುವರ್ಣ ಅವರು ಪ್ರಚೋದನಕಾರಿ ಹಾಗೂ ದ್ವೇಷ ಭಾಷಣ ಮಾಡಿದ್ದಾರೆ ಎಂಬ ಆರೋಪದಡಿ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ.
ಉಡುಪಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಅವರು ನೀಡಿದ ದೂರಿನ ಆಧಾರದ ಮೇಲೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ಸಂಖ್ಯೆ 103/2026 ದಾಖಲಿಸಲಾಗಿದೆ.
ಪ್ರಕರಣದಲ್ಲಿ ಭಾರತೀಯ ನ್ಯಾಯ ಸಂಹಿತೆ (BNS)ಯ ಸೆಕ್ಷನ್ 57, 192, 196(2), 352, 353(2) ಹಾಗೂ 351(2)ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಮುಂದಿನ ಕಾನೂನು ಪ್ರಕ್ರಿಯೆಯನ್ನು ಪೊಲೀಸರು ಕೈಗೊಳ್ಳಲಿದ್ದಾರೆ ಎಂದು ತಿಳಿದುಬಂದಿದೆ.
ಉಡುಪಿಯಲ್ಲಿ ಮೊನ್ನೆ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಬಿಜೆಪಿ ಕಾರ್ಯಕರ್ತರು ಕಾಂಗ್ರೆಸ್, ರಾಹುಲ್ ಗಾಂಧಿ ಹಾಗೂ ಕಾಕ್ರೋಚ್' ಪಾರ್ಟಿ ವಿರುದ್ಧ ಘೋಷಣೆ ಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದರು. ಪ್ರತಿಭಟನೆಯಲ್ಲಿ ಮಾತನಾಡಿದ್ದ ಶಾಸಕ ಯಶ್‌ಪಾಲ್ ಸುವರ್ಣ ಕಾಂಗ್ರೆಸ್, ಕಾಕ್ರೋಚ್ ಹಾಗೂ ಎಸ್‌ಡಿಪಿಐ ಸಹಿತ ರಾಷ್ಟ್ರವಿರೋಧಿ ಶಕ್ತಿಗಳ ಬೆಂಬಲದಿಂದ ವಿದ್ಯಾರ್ಥಿಗಳ ಹಿತಾಸಕ್ತಿಕ್ಕಾಗಿ ಪ್ರತಿಭಟನೆ ನಡೆದಿಲ್ಲ. ದೇಶದಲ್ಲಿ ಅರಾಜಕತೆ ಸೃಷ್ಟಿಸುವ ಉದ್ದೇಶದಿಂದ ನಡೆದಿದೆ. ಸದಾ ನಶೆಯಲ್ಲಿ ತೇಲುತ್ತಿರುವ ರಾಹುಲ್ ಗಾಂಧಿ, ವಿದ್ಯಾರ್ಥಿಗಳ ತಲೆಯಲ್ಲಿ ವಿಷಬೀಜ ಬಿತ್ತುವ ಮೂಲಕ ರಾಜಕೀಯ ಬೆಳೆ ಬೇಯಿಸಿಕೊಳ್ಳುತ್ತಿದ್ದಾರೆ.ಹೀಗೇ ಮುಂದುವರೆದರೆ ರಾಹುಲ್ ಗಾಂಧಿ ಮತ್ತುಕಾಂಗ್ರೆಸ್ ವಂಶವನ್ನು ಧ್ವಂಸ ಮಾಡುವ ಕಾರ್ಯ ಮಾಡಲಿದ್ದೇವೆ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದರು.
