ಉಡುಪಿ, ಜುಲೈ 07: ಸಹಕಾರಿ ಸಂಘಗಳ ಒಕ್ಕೂಟಕ್ಕೆ ಲಕ್ಷಾಂತ ರೂಪಾಯಿಗಳ ವಂಚನೆ ಮಾಡಿದ ಆರೋಪದಡಿ ದಂಪತಿಯನ್ನು ಉಡುಪಿ ಪೊಲೀಸರು ಬಂಧಿಸಿದ್ದಾರೆ.
ಪೆರ್ಡೂರು ಪದ್ಮಕಮಲ ಸಂಜೀವಿನಿ ಗ್ರಾಮ ಪಂಚಾಯಿತಿ ಮಟ್ಟದ ಒಕ್ಕೂಟದಲ್ಲಿ ಮುಖ್ಯ ಪುಸ್ತಕ ಬರಹಗಾರರಾಗಿದ್ದ ಸುಗಂಧಿ ಹಾಗೂ ಅವರ ಪತಿ ಸಂತೋಷ ಬಂಧಿತ ಆರೋಪಿಗಳಾಗಿದ್ದಾರೆ.
ಒಕ್ಕೂಟದಲ್ಲಿ ₹23 ಲಕ್ಷ ಹಣ ದುರ್ಬಳಕೆ ಹಾಗೂ ವಂಚನೆ ನಡೆಸಿದ ಆರೋಪದಡಿ ಇಬ್ಬರನ್ನು ಹಿರಿಯಡಕ ಪೊಲೀಸರು ಬಂಧಿಸಿದ್ದಾರೆ.
ಪೊಲೀಸರ ಮಾಹಿತಿ ಪ್ರಕಾರ, ಸುಗಂಧಿ ಅವರು 2023ರಿಂದ 2025ರ ಅವಧಿಯಲ್ಲಿ ಸದಸ್ಯರಿಂದ ಸಂಗ್ರಹಿಸಿದ ಸಾಲ ಮರುಪಾವತಿ ಹಣವನ್ನು ರಿಜಿಸ್ಟರ್‌ನಲ್ಲಿ ದಾಖಲಿಸಿದರೂ, ಅದನ್ನು ಒಕ್ಕೂಟದ ಬ್ಯಾಂಕ್ ಖಾತೆಗೆ ಜಮೆ ಮಾಡದೆ ದುರ್ಬಳಕೆ ಮಾಡಿಕೊಂಡಿದ್ದಾರೆ.
ಅಲ್ಲದೆ, ವಿವಿಧ ಸಂಘಗಳ ಹೆಸರಿನಲ್ಲಿ ಒಕ್ಕೂಟದ ಚೆಕ್‌ಗಳಿಗೆ ಅಧ್ಯಕ್ಷರು ಹಾಗೂ ಕಾರ್ಯದರ್ಶಿಯ ನಕಲಿ ಸಹಿ ಮಾಡಿ ಬ್ಯಾಂಕ್‌ನಿಂದ ಹಣ ಪಡೆದಿರುವ ಆರೋಪವೂ ಇದೆ.
ಲೆಕ್ಕಪರಿಶೋಧನೆ ವೇಳೆ ಈ ವಂಚನೆ ಬೆಳಕಿಗೆ ಬಾರದಂತೆ ಬೇರೆ ಬೇರೆ ಸಾಲದ ಖಾತೆ ಪುಸ್ತಕಗಳನ್ನು ನಿರ್ವಹಿಸಿ ಕಾರ್ಯಕಾರಿ ಸಮಿತಿಗೆ ಅನುಮಾನ ಬಾರದ ರೀತಿಯಲ್ಲಿ ದಾಖಲೆಗಳನ್ನು ಸೃಷ್ಟಿಸಿರುವುದಾಗಿ ತನಿಖೆಯಲ್ಲಿ ತಿಳಿದುಬಂದಿದೆ.
ಈ ಮೂಲಕ ಒಟ್ಟು ₹23 ಲಕ್ಷವನ್ನು ದುರುಪಯೋಗಪಡಿಸಿಕೊಂಡಿರುವ ಆರೋಪ ಕೇಳಿಬಂದಿದೆ. ಈ ಸಂಬಂಧ ಹಿರಿಯಡಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಉಡುಪಿ ಉಪವಿಭಾಗದ DYSP ಬೆಳ್ಳಿಯಪ್ಪ ಕೆ.ಯು. ಅವರ ನಿರ್ದೇಶನ ಹಾಗೂ ವೃತ್ತ ನಿರೀಕ್ಷಕ ಗೋಪೀಕೃಷ್ಣ ಅವರ ಮಾರ್ಗದರ್ಶನದಲ್ಲಿ ಪಿಎಸ್‌ಐ ಪುನೀತ್ ಕುಮಾರ್ ಬಿ.ಇ. ಮತ್ತು ತನಿಖಾ ಪಿಎಸ್‌ಐ ವಿಠ್ಠಲ ಮಲವಡಕರ ನೇತೃತ್ವದ ತಂಡ ಜುಲೈ 6ರಂದು ಆರೋಪಿಗಳನ್ನು ವಶಕ್ಕೆ ಪಡೆದು ಬಂಧಿಸಿದೆ. ಪ್ರಾಥಮಿಕ ತನಿಖೆಯಲ್ಲಿ ಸುಗಂಧಿ ಹಾಗೂ ಅವರ ಪತಿ ಸಂತೋಷ ಸೇರಿಕೊಂಡು ವಿವಿಧ ಸದಸ್ಯರ ಹೆಸರಿನಲ್ಲಿ ನಕಲಿ ಸಹಿ ಮತ್ತು ದಾಖಲೆಗಳನ್ನು ಸೃಷ್ಟಿಸಿರುವುದು ಕಂಡುಬಂದಿದ್ದು, ಪ್ರಕರಣದ ತನಿಖೆ ಮುಂದುವರಿದಿದೆ.