ಸುಳ್ಯ, ಜುಲೈ 23: ದಕ್ಷಿಣ ಕನ್ನಡದ ಸುಳ್ಯ ತಾಲೂಕಿನಲ್ಲಿ ನಡೆದ ವಿವಾಹಿತೆ ಫಾತಿಮತ್ ನಿಶಾನ ಳ ಅನುಮಾನಾಸ್ಪದ ಸಾವಿನ ಹಿನ್ನೆಲೆಯಲ್ಲಿ ಆಕೆಯ ಮಾವ, ಅತ್ತೆ ಹಾಗೂ ನಾದಿನಿ ಸೇರಿ ಮೂವರು ಆರೋಪಿಗಳನ್ನು ಸುಳ್ಯ ಠಾಣೆ ಪೊಲೀಸರು ಬಂಧಿಸಿದ್ದಾರೆ. ಕೌಟುಂಬಿಕ ಕಿರುಕುಳ ಹಾಗೂ ಮನಸ್ತಾಪದ ಆರೋಪ ಹಿನ್ನೆಲೆಯಲ್ಲಿ ಈ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ. ಪುತ್ತೂರು ತಾಲೂಕಿನ ಕೆದಂಬಾಡಿ ನಿವಾಸಿ ಜುಬೈದಾ ಎಂಬುವರ ಮಗಳು ಫಾತಿಮತ್ ನಿಶಾನ ಮೃತಯುವ ಮಹಿಳೆಯಾಗಿದ್ದಾಳೆ. ಪ್ರಕರಣಕ್ಕೆ ಸಂಬಂಧಿಸಿ ಮೃತಳ ಮಾವ ಸಿ ಪಿ ಅಲವಿ, ಅತ್ತೆ ಅಯಿಷಾ ಹಾಗೂ ನಾದಿನಿ ಫಸಿಲಾ ಅವರುಗಳನ್ನು ಪೊಲೀಸರು ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ.
ನಾಲ್ಕು ವರ್ಷಗಳ ಹಿಂದೆ ಫಾತಿಮತ್ ನಿಶಾನ ಅವರ ವಿವಾಹ ನೆರವೇರಿತ್ತು. ಇದೇ ಜುಲೈ 18 ರ ರಾತ್ರಿ ನಿಶಾನ ಅವರು ತಮ್ಮ ತಾಯಿ ಜುಬೈದಾ ಅವರಿಗೆ ಫೋನ್ ಮಾಡಿ ಮಾತನಾಡುವಾಗ, ಗಂಡನ ಮನೆಯಲ್ಲಿ ಮಾವ ಅಲವಿ, ಅತ್ತೆ ಆಯಿಷಾ ಹಾಗೂ ನಾದಿನಿ ಫಸೀಲಾ ತನಗೆ ಮಾನಸಿಕ ಮತ್ತು ದೈಹಿಕವಾಗಿ ತೀವ್ರ ಕಿರುಕುಳ ನೀಡುತ್ತಿದ್ದಾರೆಂದು ಅಳಲು ತೋಡಿಕೊಂಡಿದ್ದರು. ತಾಯಿ ಮಗಳ ಸಂಭಾಷಣೆ ನಡೆಯುತ್ತಿದ್ದಂತೆಯೇ ಮಧ್ಯ ಪ್ರವೇಶಿಸಿದ ಮಾವ ಅಲವಿ, ನಿಶಾನ ಅವರ ಕೈಯಿಂದ ಫೋನ್ ಕಸಿದುಕೊಂಡು, "ನಿನ್ನ ಮಗಳನ್ನು ಕೊಲ್ಲುತ್ತೇನೆ" ಎಂದು ತಾಯಿ ಜುಬೈದ ಅವರಿಗೆ ಬಹಿರಂಗವಾಗಿ ಜೀವ ಬೆದರಿಕೆ ಹಾಕಿದ್ದಾರೆ ಎಂದು ಪೊಲೀಸರಿಗೆ ದೂರು ನೀಡಲಾಗಿದೆ.
ಫೋನ್ ಕರೆ ಬೆನ್ನಲ್ಲೇ ಆತಂಕಗೊಂಡ ತಾಯಿ ಜುಬೈದಾ ಅವರು ಮಗಳನ್ನು ನೋಡಲು ಆಕೆಯ ಮನೆಗೆ ಧಾವಿಸುತ್ತಿದ್ದಾಗ, ನಿಶಾನ ಮೃತಪಟ್ಟಿರುವ ಸುದ್ದಿ ತಿಳಿದುಬಂದಿದೆ. ಕೌಟುಂಬಿಕ ಮನಸ್ತಾಪದ ಹಿನ್ನೆಲೆಯಲ್ಲಿ ಆರೋಪಿಗಳಾದ ಮಾವ ಅಲವಿ, ಅತ್ತೆ ಆಯಿಷಾ ಹಾಗೂ ನಾದಿನಿ ಫಸೀಲಾ ಸೇರಿಕೊಂಡೇ ತನ್ನ ಮಗಳನ್ನು ಹತ್ಯೆ ಮಾಡಿದ್ದಾರೆಂದು ತಾಯಿ ಜುಬೈದಾ ಸುಳ್ಯ ಠಾಣೆಗೆ ದೂರು ನೀಡಿದ್ದರು.ದೂರಿನ ಆಧಾರದ ಮೇಲೆ ಸುಳ್ಯ ಪೊಲೀಸ್ ಠಾಣೆಯಲ್ಲಿಕೊಲೆ ಹಾಗೂ ಗೃಹ ಹಿಂಸಾಚಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೆತ್ತಿಕೊಳ್ಳಲಾಗಿತ್ತು. ಬಳಿಕ ಸುಳ್ಯ ಠಾಣಾ ಪೊಲೀಸರು ಜುಲೈ 22ರಂದು ಆರೋಪಿಗಳಾದ ಅಲವಿ, ಅಯಿಷಾ ಹಾಗೂ ಫಸಿಲಾ ಅವರನ್ನು ಬಂಧಿಸಿದ್ದಾರೆ. ಆರೋಪಿಗಳನ್ನು ವಿಚಾರಣೆಗೆ ಒಳಪಡಿಸಲಾಗುತ್ತಿದ್ದು, ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ಫಾತಿಮತ್ ನಿಶಾನಳ ಸಂಶಯಾಸ್ಪದ ಸಾವು ಪ್ರಕರಣ, ಅತ್ತೆ, ಮಾವ ಮತ್ತು ನಾದಿನಿ ಬಂಧನ..!
