ಸುಳ್ಯ, ಜುಲೈ18 : ದಕ್ಷಿಣ ಕನ್ನಡದ ಸುಳ್ಯ ತಾಲೂಕಿನ ಯುವಕ ಮತ್ತು ಅಮೇರಿಕದ ಯುವತಿ ಹಿಂದೂ ಸಂಪ್ರದಾಯದಂತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಕೃಷ್ಣ ಭಕ್ತಿಯೇ ಈ ಜೋಡಿಯನ್ನು ಒಂದಾಗಿಸಿದ್ದು ಸುಳ್ಯ ಸಂಪಾಜೆಯ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ವಿವಾಹ ಸಮಾರಂಭ ನಡೆದಿದೆ. ಸಂಪಾಜೆ ಗ್ರಾಮದ ಗೂನಡ್ಕ ಬೀಜದಕಟ್ಟೆಯ ಬಿ.ಕೆ. ಕೇಶವ ಅವರ ಪುತ್ರ ಸಾಯಿ ಸಂಕೇತ್ ಅವರು ಅಮೆರಿಕದ ಚಿಕಾಗೋ ನಿವಾಸಿ ಡಾ. ಚಾರ್ಲ್ಸ್ ಅವರ ಪುತ್ರಿ ಶಾನೋನ್ ಅವರು ಹಿಂದೂ ಸಂಪ್ರದಾಯದಂತೆ ವಿವಾಹವಾಗಿ ಸತಿಪತಿಯಾಗಿದ್ದಾರೆ.
ಸಾಯಿ ಸಂಕೇತ್ ಅವರು ಮಡಿಕೇರಿ ಹಾಗೂ ಮೈಸೂರಿನಲ್ಲಿ ವಿದ್ಯಾಭ್ಯಾಸ ಮುಗಿಸಿ, ಚೆನ್ನೈ ಐಐಟಿಯಲ್ಲಿ ಉನ್ನತ ಶಿಕ್ಷಣ ಪಡೆದಿದ್ದರು. ಶಿಕ್ಷಣದ ಬಳಿಕ ಬೆಂಗಳೂರಿನಲ್ಲಿ ಎರಡು ವರ್ಷ ಉದ್ಯೋಗ ನಿರ್ವಹಿಸಿ, ಪಶ್ಚಿಮ ಬಂಗಾಳದ ಮಾಯಾಪುರದಲ್ಲಿ ಅಗರಬತ್ತಿ ತಯಾರಿಕೆ ಮತ್ತು ರಫ್ತು ಉದ್ಯಮ ಆರಂಭಿಸಿದ್ದರು. ಇದೇ ಸಂದರ್ಭ ಭಾರತೀಯ ಸಂಸ್ಕೃತಿ ಮತ್ತು ಆಧ್ಯಾತ್ಮದ ಬಗ್ಗೆ ಅಪಾರ ಆಸಕ್ತಿ ಹೊಂದಿದ್ದ ಅಮೆರಿಕದ ಶಾನೋನ್, ಮಾಯಾಪುರದಲ್ಲಿ ನೆಲೆಸಿ ಆನ್‌ಲೈನ್ ವೃತ್ತಿ ನಡೆಸುತ್ತಿದ್ದರು. ಸಂಕೇತ್ ಅವರ ಉದ್ಯಮ ಮಳಿಗೆಗೆ ಭೇಟಿ ನೀಡುತ್ತಿದ್ದ ಸಂದರ್ಭದಲ್ಲಿ ಇಬ್ಬರ ನಡುವೆ ಪರಿಚಯ ಬೆಳೆದು, ಪ್ರೇಮಾಂಕುರವಾಗಿದೆ. ವಿಶೇಷ ಅಂದ್ರೆ ಇಬ್ಬರೂ ಇಸ್ಕಾನ್ ಪರಂಪರೆಯ ಕೃಷ್ಣ ಭಕ್ತರಾಗಿದ್ದು, ಆಧ್ಯಾತ್ಮಿಕ ಚಿಂತನೆ, ಭಾರತೀಯ ಸಂಸ್ಕೃತಿಯ ಮೇಲಿನ ಅಭಿಮಾನ ಹಾಗೂ ಒಂದೇ ರೀತಿಯ ಜೀವನ ಮೌಲ್ಯಗಳು ಇವರನ್ನು ಮತ್ತಷ್ಟು ಹತ್ತಿರ ತಂದವು. ಸುಮಾರು ಎರಡು ವರ್ಷಗಳ ಕಾಲ ಪರಸ್ಪರ ಅರ್ಥ ಮಾಡಿಕೊಂಡ ಬಳಿಕ ಇದೀಗ ಸತಿ-ಪತಿಯಾಗಿದ್ದಾರೆ. ಶಾನೋನ್ ಈಗ ಕನ್ನಡ ಕಲಿಕೆ ಆರಂಭಿಸಿದ್ದಾರೆ. 'ಈಗಾಗಲೇ ಕನ್ನಡದ ಅಲ್ಪಸ್ವಲ್ಪ ಜ್ಞಾನವೂ ಇದೆ. ದಕ್ಷಿಣ ಕನ್ನಡದ ಸಾಂಪ್ರದಾಯಿಕ ಆಹಾರ ಹಾಗೂ ಭಾರತೀಯ ಜೀವನಶೈಲಿ ತಮ್ಮನ್ನು ಆಕರ್ಷಿಸಿದೆ' "ಭಾರತೀಯನನ್ನು ವಿವಾಹವಾಗಿರುವುದರಲ್ಲಿ ನನಗೆ ತುಂಬಾ ಹೆಮ್ಮೆ ಮತ್ತು ಸಂತೋಷವಿದೆ. ಭಾರತೀಯ ಸಂಸ್ಕೃತಿ, ಆಧ್ಯಾತ್ಮ ಮತ್ತು ಕುಟುಂಬ ವ್ಯವಸ್ಥೆ ನನ್ನನ್ನು ತುಂಬಾ ಸೆಳೆದಿವೆ" ಎಂದಿದ್ದಾರೆ ವಧು ಶಾನೋನ್.