ದೋಹಾ ಕತಾರ್,ಜುಲೈ 11 : ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರು ಕತಾರಿಗೆ ಭೇಟಿ ನೀಡಿ ಒಂದು ದಶಕವಾಗಿದೆ. ಕರ್ನಾಟಕ ಸಂಘ ಕತಾರಿನ ವಾರ್ಷಿಕ ವಿಶೇಷ "ಕರ್ನಾಟಕ ರಾಜ್ಯೋತ್ಸವ" ಕಾರ್ಯಕ್ರಮಕ್ಕೆ ಮೊಟ್ಟ ಮೊದಲ ಬಾರಿಗೆ ತಮ್ಮ ಪಾದಾರ್ಪಣೆಯಿಂದ ಕತಾರಿನ ಕನ್ನಡ ಅಭಿಮಾನಿಗಳಿಗೆ ಹರುಷ ನೀಡಿದರು.
ನಂತರ ಲೀಡರ್ ಚಲನಚಿತ್ರೀಕರಣಕ್ಕೆ ಆಗಮಿಸಿ ದೋಹಾದಲ್ಲಿ ಮತ್ತೊಮ್ಮೆ ಕನ್ನಡದ ಹಿರಿಮೆಯನ್ನು ಮೆರೆದಿದ್ದರು. ಶ್ರೀ ಸುಬ್ರಹ್ಮಣ್ಯ ಹೆಬ್ಬಾಗಿಲು ಅವರ ಜನ್ಮದಿನಕ್ಕೆ ಕಾತರಿನಲ್ಲಿರುವ ಅವರ ನಿವಾಸಕ್ಕೆ ಭೇಟಿ ನೀಡಿ ವಿಶೇಷ ಉಡುಗೊರೆಯಂತೆ ತಮ್ಮ ಉಪಸ್ಥಿತಿಯಲ್ಲಿ ಸುಬ್ರಮಣ್ಯ ಅವರಿಗೆ ಮಹದಾನಂದವನ್ನು ಹಂಚಿದರು. ಈ ಮೂಲಕ ತಮ್ಮ ಪ್ರೀತಿ, ವಿಶ್ವಾಸ. ಹಾಗೂ ಸರಳತೆಯನ್ನು ಶಿವಣ್ಣನವರು ಪ್ರತಿಬಿಂಬಿಸಿದರು.
ಅದೇ ಶ್ರೀ ಸುಬ್ರಹ್ಮಣ್ಯ ಹೆಬ್ಬಾಗಿಲು ಅವರು ಇಂದು ಕರ್ನಾಟಕ ಸಂಘ ಕತಾರಿನ ಅಧ್ಯಕ್ಷರಾಗಿ ಕನ್ನಡಿಗರ ಕಣ್ಮಣಿಯಾಗಿರುವ 'ಹ್ಯಾಟ್ರಿಕ್ ಹೀರೋ' ಡಾ. ಶಿವರಾಜ್ ಕುಮಾರ್ ಅವರ 64ನೇ ಜನ್ಮ ದಿನಾಚರಣೆಯ ಸಂಭ್ರಮಕ್ಕೆ ತಮ್ಮ ಅಭಿನಂದನೆಗಳನ್ನು ಸಲ್ಲಿಸುತ್ತ ಕಳೆದ ಒಂದು ದಶಕದ ಸವಿ ನೆನಪುಗಳನ್ನು ಮೆಲಕು ಹಾಕಿದರು.
ನಂತರದ ಕೆಲವು ವರ್ಷಗಳಲ್ಲಿ ಶಿವಣ್ಣನವರು ಹಲವು ಕಾರಣಗಳಿಂದ ತಮ್ಮ ಜನ್ಮ ದಿನಾಚರಣೆಯನ್ನು ಅದ್ಧೂರಿಯಾಗಿ ಆಚರಿಸಲಿಲ್ಲ. ಮಾತೃ ವಿಯೋಗ, ಪ್ರೀತಿಯ ತಮ್ಮನಾದ ಶ್ರೀ. ಪುನೀತ್ ಅವರ ಅಕಾಲಿಕ ಅಗಲಿಕೆ, ತಮ್ಮ ಅನಾರೋಗ್ಯದ ಕಾರಣಗಳಿಂದಾಗಿ ಜನ್ಮದಿನಾಚರಣೆಯು ಅಷ್ಟು ಸಂತಸ ನೀಡುವಂತಿರಲಿಲ್ಲ.
ಈ ಸಂವತ್ಸರ ಕಾರ್ಮೋಡಗಳೆಲ್ಲ ಕಳೆದು ಮತ್ತೆ ತಮ್ಮ ಆರೋಗ್ಯದಲ್ಲಿ ಚೇತರಿಕೆ ಕಂಡು, ಎಂದಿನಂತೆ ಕನ್ನಡಿಗರಿಗೆ ಆನಂದ ಮಳೆಗರೆಯಲು ಶಿವಣ್ಣನವರು ತಮ್ಮ ಜನ್ಮ ದಿನಾಚರಣೆಯನ್ನು ಆಚರಿಸುತ್ತಿರುವುದು ಎಲ್ಲರಿಗೆ ಆನಂದದ ಸಮಾಚಾರ.
ಸಮಸ್ತ ಪ್ರಪಂಚದಲ್ಲಿರುವ ಕನ್ನಡಿಗರ ಹಾರೈಕೆ, ಹಾಗೂ ಆ ಭಗವಂತನ, ಗುರು ಹಿರಿಯರ ಆಶೀರ್ವಾದ ಸದಾ ಶಿವಣ್ಣನವರ ಹಾಗು ಅವರ ಸಮಸ್ತ ಕುಟುಂಬದ ಸದಸ್ಯರ ಮೇಲೆ ಹೂಮಳೆಗರೆಯಲಿ, ಅವರ ಮನ ಮನೆಗಳಲ್ಲಿ ಅವಿರತ ಹರ್ಷೋದ್ಗಾರ ನೆಲೆಸಿರಲಿ ಎಂದು ಹಾರೈಸುವ ಶ್ರೀ ಸುಬ್ರಮಣ್ಯ, ಹೆಬ್ಬಾಗಿಲು, ಅಧ್ಯಕ್ಷರು ಕರ್ನಾಟಕ ಸಂಘ ಕತಾರ್.
