ಬೆಂಗಳೂರು, ಜುಲೈ 10 :ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ಶುಕ್ರವಾರ ಬೆಂಗಳೂರು ನಗರದ ರಸ್ತೆಗಳಿಗೆ ಇಳಿದು ಸ್ವತಃ ಫುಟ್ಪಾತ್ ಅನಧಿಕೃತ ತೆರವು ಕಾರ್ಯಚಣೆ ವೀಕ್ಷಿಸಿದರು.
"ನಮ್ಮ 'ಸುರಕ್ಷಿತ ಪಾದಚಾರಿ ಮಾರ್ಗ' (Safe Footpath) ಅಭಿಯಾನದ ಪ್ರಗತಿ ಪರಿಶೀಲಿಸಲು ಸಿಎಂ ಸ್ವತಃ ಫೀಲ್ಡಿಗಿಳಿದರು. ಎಚ್ಎಎಲ್ ಏರ್ಪೋರ್ಟ್ ರಸ್ತೆ, ಎಚ್ಎಸ್ಆರ್ ಲೇಔಟ್, ಜಯನಗರ 4ನೇ ಬ್ಲಾಕ್ ಮತ್ತು ಅಶೋಕ ಪಿಲ್ಲರ್ ಪ್ರದೇಶಗಳಿಗೆ ಭೇಟಿ ನೀಡಿ ದುರಸ್ತಿಗೊಂಡಿರುವ ಪಾದಚಾರಿ ಮೂಲಸೌಕರ್ಯಗಳ ಗುಣಮಟ್ಟದ ಕುರಿತು ಬೆಂಗಳೂರು ನಗರಾಭಿವೃದ್ಧಿ ಸಚಿವ ಕೃಷ್ಣ ಬೈರೇ ಗೌಡ ಹಾಗೂ ಅಧಿಕಾರಿಗಳೊಂದಿಗೆ ಪರಮರ್ಶೆ ಮಾಡಿದರು.
ಈ ಸಂದರ್ಭ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿಗಳು ಕಳೆದ ಮೂರು ವರ್ಷಗಳಲ್ಲಿ 900ಕ್ಕೂ ಹೆಚ್ಚು ಪಾದಚಾರಿಗಳು ಜೀವ ಕಳೆದುಕೊಂಡಿರುವುದು, ನಾವು ಇನ್ನು ಮುಂದೆ ಕ್ರಮ ಕೈಗೊಳ್ಳಲು ವಿಳಂಬ ಮಾಡಬಾರದು ಎಂಬುದಕ್ಕೆ ಕಣ್ಣಿಗೆ ಕಟ್ಟುವಂತಿರುವ ಎಚ್ಚರಿಕೆಯಾಗಿದೆ. ಮಾನ್ಯ ಸುಪ್ರೀಂ ಕೋರ್ಟ್ನ ನಿರ್ದೇಶನಗಳ ಪ್ರಕಾರ, ನಾವು ಈ ಅಭಿಯಾನವನ್ನು ಮತ್ತಷ್ಟು ವಿಸ್ತರಿಸಲಿದ್ದೇವೆ. ಫುಟ್ಪಾತ್ಗಳನ್ನು ಆಕ್ರಮಿಸಿಕೊಂಡಿರುವ ಅನಾಥ ವಾಹನಗಳನ್ನು ಹಟಾಯಿಸಲಾಗುವುದು, ಅತಿಕ್ರಮಣಗಳನ್ನು ತೆರವುಗೊಳಿಸಲಾಗುವುದು ಮತ್ತು ನಗರಾದ್ಯಂತ ಹಾನಿಗೊಳಗಾದ ಪಾದಚಾರಿ ಮಾರ್ಗಗಳ ದುರಸ್ತಿ ಕಾರ್ಯವನ್ನು ಮುಂದುವರಿಸಲಾಗುವುದು.
ಜಾಗತಿಕ ಮಟ್ಟದ ಬೆಂಗಳೂರನ್ನು ನಿರ್ಮಿಸಬೇಕಾದರೆ, ಮೊದಲು ಅದು ಪ್ರತಿಯೊಬ್ಬ ನಾಗರಿಕನೂ ಗೌರವದಿಂದ ಮತ್ತು ಸುರಕ್ಷಿತವಾಗಿ ನಡೆಯಬಹುದಾದ ನಗರವಾಗಬೇಕು ಎಂದು ನಾನು ದೃಢವಾಗಿ ನಂಬುತ್ತೇನೆ.
ಈಗಾಗಲೇ 430 ಕಿಲೋಮೀಟರ್ಗಿಂತಲೂ ಹೆಚ್ಚು ಪಾದಚಾರಿ ಮಾರ್ಗಗಳನ್ನು ಸಾರ್ವಜನಿಕರ ಸಂಚಾರಕ್ಕಾಗಿ ಮುಕ್ತಗೊಳಿಸಲಾಗಿದೆ. ಈ ತೆರವು ಕಾರ್ಯಾಚರಣೆಯು ಯಾವುದೇ ಭಯ ಅಥವಾ ತಾರತಮ್ಯವಿಲ್ಲದೆ ನಿರಂತರವಾಗಿ ಮುಂದುವರಿಯಲಿದೆ. ಇದೇ ವೇಳೆ, ಜನರ ಜೀವನೋಪಾಯವನ್ನು ರಕ್ಷಿಸಲು ಕೂಡ ನಾವು ಬದ್ಧರಾಗಿದ್ದೇವೆ. ನೋಂದಾಯಿತ ಬೀದಿಬದಿ ವ್ಯಾಪಾರಿಗಳಿಗೆ ಪ್ರತ್ಯೇಕ ವ್ಯಾಪಾರ ಸ್ಥಳಗಳು ಮತ್ತು ತಳ್ಳುಗಾಡಿಗಳನ್ನು (Push carts) ಒದಗಿಸಲಾಗುವುದು. ಇದರಿಂದ ನಮ್ಮ ಪಾದಚಾರಿ ಮಾರ್ಗಗಳು ಎಲ್ಲರಿಗೂ ಸುಲಭವಾಗಿ ಸಿಗುವಂತಾಗುವುದರ ಜೊತೆಗೆ, ಅವರು ತಮ್ಮ ವ್ಯವಹಾರವನ್ನು ಗೌರವಯುತವಾಗಿ ಮುಂದುವರಿಸಲು ಸಾಧ್ಯವಾಗುತ್ತದೆ.
ಇದುವರೆಗೆ ವಿವಿಧ ರೀತಿಯ 9,878 ಅತಿಕ್ರಮಣಗಳನ್ನು ತೆರವುಗೊಳಿಸಲಾಗಿದೆ ಮತ್ತು ಅಂಗಡಿಗಳ ಮುಂಭಾಗದ ಸಾವಿರಾರು ಅತಿಕ್ರಮಣಗಳನ್ನು ಮುಕ್ತಗೊಳಿಸಲಾಗಿದೆ. ಇದು ಕೇವಲ ಆರಂಭವಷ್ಟೇ.
ನಮ್ಮೊಂದಿಗೆ ಕೈಜೋಡಿಸಿದ ಪ್ರತಿಯೊಬ್ಬ ನಾಗರಿಕರಿಗೆ, ಜನಪ್ರತಿನಿಧಿಗಳಿಗೆ, ಅಧಿಕಾರಿಗಳಿಗೆ ಮತ್ತು ಸ್ವಯಂಸೇವಕರಿಗೆ ನಾನು ಹೃತ್ಪೂರ್ವಕ ಧನ್ಯವಾದಗಳನ್ನು ಅರ್ಪಿಸುತ್ತೇನೆ. ನಾವೆಲ್ಲರೂ ಒಟ್ಟಾಗಿ ನಮ್ಮ ಬೆಂಗಳೂರನ್ನು ಹೆಚ್ಚು ಸ್ವಚ್ಛ, ಸುರಕ್ಷಿತ ಮತ್ತು ಸುಲಭವಾಗಿ ನಡೆದಾಡಬಹುದಾದ 'ನಮ್ಮ ಬೆಂಗಳೂರು' ಆಗಿ ಪರಿವರ್ತಿಸೋಣ - ಭಾರತದ ಹೆಬ್ಬಾಗಿಲು ಎನಿಸಿಕೊಳ್ಳಲು ಅರ್ಹವಾದ ನಗರವನ್ನಾಗಿ ಇದನ್ನು ರೂಪಿಸೋಣ." ಎಂದು ಮನವಿ ಮಾಡಿದರು.