BREAKING
ರಾಜ್ಯ

Chamarajanagar ಚಾಮರಾಜನಗರ ನ್ಯಾಯಾಧೀಶರಿಗೆ ಅನಾಮಧೇಯ ಕರೆ, ಆರೋಪಿಗಳಿಗೆ ಜಾಮೀನು ನೀಡದಿದ್ದರೆ ಕೊಲ್ಲುವುದಾಗಿ ಬೆದರಿಕೆ


ಚಾಮರಾಜನಗರ,ಜುಲೈ10 : ಚಾಮರಾಜನಗರ ಜಿಲ್ಲಾ ನ್ಯಾಯಾಧೀಶರಿಗೆ ಅನಾಮಧೇಯ ಕರೆಯೊಂದು ಬಂದಿದ್ದು ಆರೋಪಿಗಳಿಗೆ ಜಾಮೀನು ನೀಡದಿದ್ದರೆ ಕೊಲ್ಲುವುದಾಗಿ ಬೆದರಿಕೆ ನೀಡಲಾಗಿದೆ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಹಿರಿಯ ಪೊಲೀಸ್ ಅಧಿಕಾರಿಗಳು ನ್ಯಾಯಾಧೀಶರಿಗೆ ಹೆಚ್ಚುವರಿ ಭದ್ರತೆ ಒದಗಿಸಿದ್ದಾರೆ. ಈ ಮಧ್ಯೆ ಚಾಮರಾಜನಗರ ಪಟ್ಟಣ ಪೊಲೀಸರು ಪ್ರಕಣ ದಾಖಲು ತನಿಖೆ ತೀವ್ರಗೊಳಿಸಿದ್ದಾರೆ. 

 ಬುಧವಾರ ಅನಾಮಧೇಯ ವ್ಯಕ್ತಿಯೊಬ್ಬ ನ್ಯಾಯಾಧೀಶರ ಮೊಬೈಲ್‌ಗೆ ನೇರ ಕರೆ ಮಾಡಿ ನ್ಯಾಯಾಲಯದಲ್ಲಿ ಸದ್ಯ ವಿಚಾರಣೆಯಲ್ಲಿರುವ ಅಪರಾಧ ಸಂಖ್ಯೆ 144/2026 ಪ್ರಕರಣದ ಆರೋಪಿಗಳಿಗೆ ತಕ್ಷಣವೇ ಜಾಮೀನು (Bail) ಮಂಜೂರು ಮಾಡಬೇಕೆಂದು ಒತ್ತಾಯಿಸಿದ್ದಾನೆ. “ಒಂದು ವೇಳೆ ಜಾಮೀನು ಅರ್ಜಿಯನ್ನು ತಿರಸ್ಕರಿಸಿದ್ದಲ್ಲಿ ಮುಂದಿನ ಟಾರ್ಗೆಟ್ ನೀನೇ, ನಿನ್ನನ್ನು ಬದುಕಲು ಬಿಡುವುದಿಲ್ಲ” ಎಂದು ಅವಾಚ್ಯ ಶಬ್ದ ಬಳಸಿ ಏಕವಚನದಲ್ಲಿ ನ್ಯಾಯಾಧೀಶರಿಗೆ ನಿಂದಿಸಿ ಜೀವ ಬೆದರಿಕೆ ಹಾಕಿದ್ದಾನೆ. 

ನ್ಯಾಯಾಧೀಶರ ಸರ್ಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿ, ಪ್ರಾಣ ಬೆದರಿಕೆ ಹಾಕಿರುವ ಕುರಿತು ಗೌರವಾನ್ವಿತ ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಸಿ.ಜೆ.ಎಂ. ರವರು ಮೌಖಿಕವಾಗಿ ಠಾಣೆಗೆ ಮಾಹಿತಿ ನೀಡಿದ್ದಾರೆ. ತಾಂತ್ರಿಕವಾಗಿ ಈ ಸಂಖ್ಯೆಯನ್ನು ಪತ್ತೆ ಹಚ್ಚಿ, ಆರೋಪಿಯ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ.  ಜಿಲ್ಲಾ ಪ್ರಧಾನ ಮತ್ತು ಹಿರಿಯ ಸಿವಿಲ್ ನ್ಯಾಯಾಧೀಶರ ಜೀವ ಹಾಗೂ ಕರ್ತವ್ಯ ನಿರ್ವಹಣೆಯ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು, ಅವರಿಗೆ ತಕ್ಷಣದಿಂದಲೇ ಜಾರಿಗೆ ಬರುವಂತೆ ಹೆಚ್ಚುವರಿ ಪೊಲೀಸ್ ರಕ್ಷಣೆ ನೀಡಲಾಗಿದೆ.

ಕಳೆದ ಕೆಲ ದಿನಗಳಲ್ಲಿ ಸರಣಿ ಹುಸಿ ಬಾಂಬ್ ಇ-ಮೇಲ್ ಸಂದೇಶಗಳಿಂದ ತಲ್ಲಣಗೊಂಡಿದ್ದ ಚಾಮರಾಜನಗರ ಜಿಲ್ಲಾ ನ್ಯಾಯಾಲಯಕ್ಕೆ ಈ ಬೆದರಿಕೆ ಕರೆ ಬಂದಿರುವುದು ನ್ಯಾಯಾಂಗ ವ್ಯವಸ್ಥೆಯನ್ನೇ ತಲ್ಲಣಗೊಳಿಸಿದೆ. 

📢 ಸುದ್ದಿವಾಣಿ WhatsApp — ತಕ್ಷಣದ ಬ್ರೇಕಿಂಗ್ ನ್ಯೂಸ್ ಪಡೆಯಿರಿ!