ನವದೆಹಲಿ, ಜುಲೈ 11: ಸರ್ಕಾರಿ ಕಾರ್ಯಕ್ರಮಗಳಲ್ಲಿ ಮೊದಲು ವಂದೇ ಮಾತರಂ ನಂತರವೇ ರಾಷ್ಟ್ರಗೀತೆ ಹಾಡಬೇಕು ಎಂದು ಕೇಂದ್ರ ಸರ್ಕಾರ ಎಲ್ಲಾ ರಾಜ್ಯಗಳಿಗೆ ಮಹತ್ವದ ಆದೇಶ ಹೊರಡಿಸಿದೆ.
ಸರ್ಕಾರಿ ಅಧಿಕೃತ ಕಾರ್ಯಕ್ರಮಗಳಲ್ಲಿ ಮೊದಲು ವಂದೇ ಮಾತರಂ ಹಾಡಬೇಕು ಅಥವಾ ಪ್ಲೇ ಮಾಡಬೇಕು. ಅದರ ನಂತರ ರಾಷ್ಟ್ರಗೀತೆಯಾದ 'ಜನಗಣಮನ' ಗೀತೆಯನ್ನು ಹಾಡಬೇಕು ಅಥವಾ ಪ್ಲೇ ಮಾಡಬೇಕು ಎಂದು ಆದೇಶಿಸಿದೆ. ರಾಜ್ಯ ಸರ್ಕಾರದ ಕಾರ್ಯಕ್ರಮಗಳಲ್ಲಿ ಮೊದಲು ರಾಜ್ಯ ಗೀತೆಯನ್ನು ಹಾಡಿ, ನಂತರ ರಾಷ್ಟ್ರೀಯ ಗೀತೆ ಮತ್ತು ರಾಷ್ಟ್ರಗೀತೆಯನ್ನು ಹಾಡಬೇಕು. ಕರ್ನಾಟಕದಲ್ಲಾದರೆ ಜೈ ಭಾರತ ಜನನಿಯ ತನುಜಾತೆ ಹಾಡಿದ ಬಳಿಕವೇ ವಂದೇ ಮಾತರಂ ಆದಾದ ಬಳಿಕ ಜನಗಣಮನ ಗೀತೆಯನ್ನು ಹಾಡಬೇಕು ಎಂದು ಸೂಚಿಸಲಾಗಿದೆ.
ಕೇಂದ್ರ ಗೃಹ ಸಚಿವಾಲಯದ ಈ ನೂತನ ಆದೇಶವನ್ನು ಎಲ್ಲಾ ರಾಜ್ಯ ಸರ್ಕಾರಗಳು, ಕೇಂದ್ರಾಡಳಿತ ಪ್ರದೇಶಗಳು (UT) ಮತ್ತು ಕೇಂದ್ರ ಸಚಿವಾಲಯಗಳಿಗೆ ಕಳುಹಿಸಲಾಗಿದೆ. ಮತ್ತು ಈ ನಿಯಮವನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಸೂಚಿಸಲಾಗಿದೆ. ಇದರ ಜೊತೆಗೆ ರಾಷ್ಟ್ರಗೀತೆಯನ್ನು ಹಾಡುವಾಗ ಅನುಸರಿಸಬೇಕಾದ ಕೆಲವು ನಿಯಮಗಳನ್ನು ಕೂಡ ಸೂಚಿಸಲಾಗಿದೆ.ಕೇಂದ್ರ ಸರ್ಕಾರವು ಈ ಆದೇಶದಲ್ಲಿ ಕೇವಲ ಕ್ರಮವನ್ನು ಮಾತ್ರವಲ್ಲದೆ, ಗೀತೆಗಳನ್ನು ಹಾಡುವ ಗುಣಮಟ್ಟದ ಕಡೆಗೂ ಗಮನ ಹರಿಸಿದೆ. ರಾಷ್ಟ್ರೀಯ ಗೀತೆ ಮತ್ತು ರಾಷ್ಟ್ರಗೀತೆಯನ್ನು ಹಾಡುವಾಗ ಅಥವಾ ನುಡಿಸುವಾಗ ಅದರ ಮೂಲ ಸಾಹಿತ್ಯ ಹಾಗೂ ಉಚ್ಚಾರಣೆಯನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಇದರಲ್ಲಿ ಯಾವುದೇ ತಪ್ಪುಗಳಾಗಬಾರದು ಎಂದು ಸರ್ಕಾರ ಸ್ಪಷ್ಟಪಡಿಸಿದೆ.
