BREAKING
[ಹೋಮ್] ರಾಜ್ಯ
[ಹೋಮ್] ದೇಶ
[ಹೋಮ್] ವಿದೇಶ
[ಹೋಮ್] ಕ್ರೀಡೆ
[ಹೋಮ್] ಸಿನಿಮಾ
[ಹೋಮ್] ಉಡುಪಿ
[ಹೋಮ್] ದಕ್ಷಿಣ ಕನ್ನಡ
ದೇಶ

Mysuru ತಿಪಟೂರು ರೈಲು ನಿಲ್ದಾಣದಲ್ಲಿ ಹೊಸ ಮೆಮು ವಿಶೇಷ ರೈಲಿಗೆ ಹಸಿರು ನಿಶಾನೆ ತೋರಿದ ಸಚಿವ ವಿ ಸೋಮಣ್ಣ


ಮೈಸೂರು, ಜುಲೈ 13 :  ಕೇಂದ್ರ ರೈಲ್ವೆ ಮತ್ತು ಜಲಶಕ್ತಿ ರಾಜ್ಯ ಸಚಿವರಾದ ವಿ. ಸೋಮಣ್ಣ ಅವರು ಸೋಮವಾರ ತಿಪಟೂರು ರೈಲು ನಿಲ್ದಾಣದಲ್ಲಿ ಹೊಸ ಮೆಮು ಉದ್ಘಾಟನಾ ವಿಶೇಷ ರೈಲಿಗೆ ಹಸಿರು ನಿಶಾನೆ ತೋರಿಸಿದರು. ಇದು ಕರ್ನಾಟಕದಲ್ಲಿ ಪ್ರಾದೇಶಿಕ ರೈಲು ಸಂಪರ್ಕವನ್ನು ಮತ್ತಷ್ಟು ಬಲಪಡಿಸುವ ಮಹತ್ವದ ಹೆಜ್ಜೆಯಾಗಿದೆ.

ಈ ಮೆಮು ಸೇವೆಯ ಪರಿಚಯವು ನೈರುತ್ಯ ರೈಲ್ವೆ, ಮೈಸೂರು ವಿಭಾಗದ ಪ್ರಯತ್ನಗಳ ಭಾಗವಾಗಿದ್ದು, ಪ್ರಯಾಣಿಕರಿಗೆ ವೇಗವಾದ, ಸುರಕ್ಷಿತ ಮತ್ತು ಸುಲಭ ಸಂಚಾರ ವ್ಯವಸ್ಥೆಯನ್ನು ಒದಗಿಸುವ ಉದ್ದೇಶ ಹೊಂದಿದೆ. ಈ ಸೇವೆಯಿಂದ ದೈನಂದಿನ ಪ್ರಯಾಣಿಕರು, ವಿದ್ಯಾರ್ಥಿಗಳು, ನೌಕರರು, ವ್ಯಾಪಾರಿಗಳು ಮತ್ತು ಸಾರ್ವಜನಿಕರಿಗೆ ಹೆಚ್ಚಿನ ಅನುಕೂಲವಾಗಲಿದೆ.

ರೈಲು ಸಂಖ್ಯೆ 66505 ಯಲಹಂಕ–ಅರಸೀಕೆರೆ ಮೆಮು ರೈಲಿನ ದೈನಂದಿನ ಸಂಚಾರವು 14.07.2026ರಿಂದ ಪ್ರಾರಂಭವಾಗಲಿದೆ. ಇದು ಯಲಹಂಕದಿಂದ ಬೆಳಗ್ಗೆ 06:45ಕ್ಕೆ ಹೊರಟು ಅರಸೀಕೆರೆಗೆ 11:00ಕ್ಕೆ ತಲುಪಲಿದೆ. ಹಿಂದಿರುಗುವ ದಿಕ್ಕಿನಲ್ಲಿ ರೈಲು ಸಂಖ್ಯೆ 66506 ಅರಸೀಕೆರೆ–ಯಲಹಂಕ ಮೆಮು ಮಧ್ಯಾಹ್ನ 14:10ಕ್ಕೆ ಹೊರಟು ಯಲಹಂಕಕ್ಕೆ 19:15ಕ್ಕೆ ತಲುಪಲಿದೆ.

ಸಭೆಯನ್ನುದ್ದೇಶಿಸಿ ಮಾತನಾಡಿದ ಮಾನ್ಯ ಸಚಿವರಾದ ಶ್ರೀ ವಿ. ಸೋಮಣ್ಣ ಅವರು, ಭಾರತ ಸರ್ಕಾರ ರೈಲ್ವೆ ಮೂಲಸೌಕರ್ಯವನ್ನು ಬಲಪಡಿಸುವುದರ ಜೊತೆಗೆ ಪ್ರಯಾಣಿಕರ ಸೌಲಭ್ಯಗಳನ್ನು ಹೆಚ್ಚಿಸಲು ಬದ್ಧವಾಗಿದೆ ಎಂದು ತಿಳಿಸಿದರು. ಅಮೃತ ಭಾರತ್ ಸ್ಟೇಷನ್ ಯೋಜನೆಯಡಿ ರೈಲು ನಿಲ್ದಾಣಗಳ ಅಭಿವೃದ್ಧಿ ಮತ್ತು ಹೊಸ ರೈಲು ಸೇವೆಗಳ ಪರಿಚಯವು ಪ್ರಾದೇಶಿಕ ಅಭಿವೃದ್ಧಿಗೆ ಉತ್ತೇಜನ ನೀಡುತ್ತದೆ ಮತ್ತು ಪ್ರಯಾಣಿಕರಿಗೆ ಉತ್ತಮ ಅನುಭವವನ್ನು ಒದಗಿಸುತ್ತದೆ ಎಂದು ಹೇಳಿದರು.

ತಿಪಟೂರು ರೈಲು ನಿಲ್ದಾಣವನ್ನು ಅಮೃತ ಭಾರತ್ ಸ್ಟೇಷನ್ ಯೋಜನೆಯಡಿ ₹23.37 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗುತ್ತಿದೆ. ಈ ಯೋಜನೆಯಡಿ ನಿಲ್ದಾಣ ಕಟ್ಟಡ ವಿಸ್ತರಣೆ, ಹೊಸ ಪ್ಲಾಟ್‌ಫಾರ್ಮ್ ಶೆಲ್ಟರ್‌ಗಳು, 12 ಮೀಟರ್ ಅಗಲದ ಪಾದಚಾರಿ ಮೇಲ್ಸೇತುವೆ (3 ಲಿಫ್ಟ್‌ಗಳು ಮತ್ತು 2 ಎಸ್ಕಲೇಟರ್‌ಗಳೊಂದಿಗೆ), ನಿರೀಕ್ಷಣಾ ಕೊಠಡಿಗಳು ಮತ್ತು ಶೌಚಾಲಯಗಳ ಆಧುನೀಕರಣ, ವಾಹನ ನಿಲುಗಡೆ ಮತ್ತು ಸಂಚಾರ ವ್ಯವಸ್ಥೆ ಸುಧಾರಣೆ, ಲ್ಯಾಂಡ್‌ಸ್ಕೇಪಿಂಗ್, ಎಲ್‌ಇಡಿ ದೀಪ ಮತ್ತು ಪ್ರಯಾಣಿಕ ಮಾಹಿತಿ ವ್ಯವಸ್ಥೆಗಳ ಅಭಿವೃದ್ಧಿ ಒಳಗೊಂಡಿದೆ. ಕೆಲವು ಕಾಮಗಾರಿಗಳು ಪೂರ್ಣಗೊಂಡಿದ್ದು, ಉಳಿದವು ಪ್ರಗತಿಯಲ್ಲಿವೆ.

ಇದಲ್ಲದೆ, ರಸ್ತೆ ಮತ್ತು ರೈಲು ಸಂಪರ್ಕವನ್ನು ಮತ್ತಷ್ಟು ಸುಧಾರಿಸಲು ತಿಪಟೂರು ಪ್ರದೇಶದಲ್ಲಿ ಎರಡು ಪ್ರಮುಖ ರಸ್ತೆ ಮೇಲ್ಸೇತುವೆ ಯೋಜನೆಗಳನ್ನು ಕೈಗೊಳ್ಳಲಾಗಿದೆ. ಶಾರದಾನಗರ ಹಾಲ್ಟ್ ಸಮೀಪದ ಲೆವೆಲ್ ಕ್ರಾಸಿಂಗ್ ಗೇಟ್ ಸಂಖ್ಯೆ 86ರ ಬದಲಿಗೆ ₹89.32 ಕೋಟಿ ವೆಚ್ಚದಲ್ಲಿ ರಸ್ತೆ ಮೇಲುಸೇತುವೆ ನಿರ್ಮಿಸಲಾಗುತ್ತಿದೆ. ಇದು ತಿಪಟೂರು, ಚಿಕ್ಕನಾಯಕನಹಳ್ಳಿ ಮತ್ತು ಹಾಸನ ನಡುವಿನ ಸಂಪರ್ಕವನ್ನು ಸುಧಾರಿಸುತ್ತದೆ. ಹಾಗೆಯೇ ಹೊನ್ನಾವಳ್ಳಿ ಸಮೀಪದ ಲೆವೆಲ್ ಕ್ರಾಸಿಂಗ್ ಗೇಟ್ ಸಂಖ್ಯೆ 88ರ ಬದಲಿಗೆ ₹29.74 ಕೋಟಿ ವೆಚ್ಚದಲ್ಲಿ ರಸ್ತೆ ಮೇಲ್ಸೇತುವೆ ನಿರ್ಮಿಸಲಾಗುತ್ತಿದೆ, ಇದು ತಿಪಟೂರು, ಹೊನ್ನಾವಳ್ಳಿ ಮತ್ತು ಕೊನೇಹಳ್ಳಿ ನಡುವಿನ ಸಂಪರ್ಕವನ್ನು ಬಲಪಡಿಸುತ್ತದೆ. ಈ ಯೋಜನೆಗಳು ಲೆವೆಲ್ ಕ್ರಾಸಿಂಗ್‌ಗಳಲ್ಲಿ ವಿಳಂಬವನ್ನು ನಿವಾರಿಸಿ, ರಸ್ತೆ ಸುರಕ್ಷತೆಯನ್ನು ಹೆಚ್ಚಿಸಿ, ಸುಗಮ ಸಂಚಾರಕ್ಕೆ ಸಹಕಾರಿಯಾಗಲಿದೆ.

ಹೊಸ ರೈಲು ಸೇವೆಗಳ ಪರಿಚಯ, ನಿಲ್ದಾಣಗಳ ಆಧುನೀಕರಣ ಮತ್ತು ಪ್ರಮುಖ ಮೂಲಸೌಕರ್ಯ ಯೋಜನೆಗಳ ಮೂಲಕ  ನೈರುತ್ಯ ರೈಲ್ವೆ, ಮೈಸೂರು ವಿಭಾಗವು ಸುರಕ್ಷಿತ, ಪರಿಣಾಮಕಾರಿ ಮತ್ತು ಪ್ರಯಾಣಿಕ ಸ್ನೇಹಿ ರೈಲು ವ್ಯವಸ್ಥೆಯನ್ನು ನಿರ್ಮಿಸಲು ತನ್ನ ಬದ್ಧತೆಯನ್ನು ಮುಂದುವರಿಸಿದೆ.

ಈ ಕಾರ್ಯಕ್ರಮದಲ್ಲಿ ತಿಪಟೂರು ವಿಧಾನಸಭಾ ಕ್ಷೇತ್ರದ ಮಾನ್ಯ ಶಾಸಕ ಕೆ. ಶಡಾಕ್ಷರಿ, ಮೈಸೂರು ವಿಭಾಗದ ಹೆಚ್ಚುವರಿ ವಿಭಾಗೀಯ ರೈಲ್ವೆ ವ್ಯವಸ್ಥಾಪಕರಾದ ಶಮ್ಮಾಸ್ ಹಮೀದ್, ಇತರ ಜನಪ್ರತಿನಿಧಿಗಳು ಮತ್ತು ರೈಲ್ವೆ ಅಧಿಕಾರಿಗಳು ಉಪಸ್ಥಿತರಿದ್ದರು.

📢 ಸುದ್ದಿವಾಣಿ WhatsApp — ತಕ್ಷಣದ ಬ್ರೇಕಿಂಗ್ ನ್ಯೂಸ್ ಪಡೆಯಿರಿ!