ಬೆಂಗಳೂರು,ಜುಲೈ 10 : ಈ ಬಾರಿಯ ನಾಡ ಹಬ್ಬ ಮೈಸೂರು ದಸರಾವನ್ನು ಸಂಭ್ರಮದಿಂದ ಆಚರಿಸಲು ಸರ್ಕಾರ ನಿರ್ಧರಿಸಿದೆ. ಈ ಹಿನ್ನೆಲೆಯಲ್ಲಿ ಭರ್ಜರಿ ಸಿದ್ಧತೆಯನ್ನು ಆರಂಭಿಸಲಾಗಿದೆ. ಸಿಎಂ ಡಿ.ಕೆ. ಶಿವಕುಮಾರ್ ನೇತೃತ್ವದಲ್ಲಿ ಶುಕ್ರವಾರ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಮಹತ್ವದ ದಸರಾ ಪೂರ್ವಸಿದ್ಧತಾ ಸಭೆ ನಡೆಯಿತು. ಈ ಸಭೆಯಲ್ಲಿ ದಸರಾ ಮಹೋತ್ಸವದ ದಿನಾಂಕ ಹಾಗೂ ಮುಹೂರ್ತವನ್ನು ಅಂತಿಮಗೊಳಿಸಲಾಯಿತು. ಅಕ್ಟೋಬರ್11ರಂದು ದಸರಾ ಮಹೋತ್ಸವಕ್ಕೆ ಚಾಲನೆ ಮತ್ತುಅ.21ರಂದು ಜಂಬೂಸವಾರಿ ಮೆರವಣಿಗೆ ನಡೆಸಲು ಸಭೆಯಲ್ಲಿ ತೀರ್ಮಾನಿಸಲಾಯಿತು.
ವಿಶ್ವವಿಖ್ಯಾತ ಮೈಸೂರು ದಸರಾದ ಪ್ರಮುಖ ಆಕರ್ಷಣೆ ಜಂಬೂ ಸವಾರಿ. ಈ ಗಜಪಯಣ ಜುಲೈ 26 ರಂದು ಆರಂಭವಾಗಲಿದೆ. ಆಗಸ್ಟ್ 26 ಕ್ಕೆ ಮೈಸೂರು ಅರಮನೆ ಪ್ರವೇಶಿಸುವ ಗಜಪಡೆಗೆ ಸಾಂಪ್ರದಾಯಿಕ ಪೂಜೆ ಸಲ್ಲಿಸಿ, ಬರಮಾಡಿಕೊಳ್ಳಲಾಗುತ್ತದೆ. ಅ.11 ರಂದು ದಸರಾ ಮಹೋತ್ಸವದ ಉದ್ಘಾಟನೆ ನೆರವೇರಲಿದೆ. ಚಾಮುಂಡಿಬೆಟ್ಟದಲ್ಲಿ ಶುಭ ಧನುರ್ ಲಗ್ನದಲ್ಲಿ ದಸರಾ ಮಹೋತ್ಸವಕ್ಕೆ ಅಧಿಕೃತವಾಗಿ ಚಾಲನೆ ಸಿಗಲಿದೆ. ಅ.21 ರಂದು ವಿಜಯದಶಮಿ ಹಬ್ಬದಂದು ಗಜಪಡೆಯ ಸಾರಥ್ಯದಲ್ಲಿ ಜಂಬೂಸವಾರಿ ಮೆರವಣಿಗೆ ಜರುಗಲಿದೆ.
ವಿಜಯದಶಮಿಯ ದಿನವಾದ ಅ.21ರಂದು ಎರಡು ಶುಭ ಮುಹೂರ್ತಗಳಲ್ಲಿ ಧಾರ್ಮಿಕ ವಿಧಿವಿಧಾನಗಳು ನೆರವೇರಲಿವೆ. ಮಧ್ಯಾಹ್ನ 1.36ರಿಂದ 1.56ರ ನಡುವೆ ಶುಭ ಮಕರ ಲಗ್ನದಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ನಂದಿ ಧ್ವಜಕ್ಕೆ ಪೂಜೆ ನೆರವೇರಿಸಲಿದ್ದಾರೆ. ಅದೇ ದಿನ ಸಂಜೆ 4.10ರಿಂದ 4.35ರ ಶುಭ ಮೀನ ಲಗ್ನದಲ್ಲಿ ಚಿನ್ನದ ಅಂಬಾರಿಯಲ್ಲಿ ವಿರಾಜಮಾನಳಾಗಿರುವ ತಾಯಿ ಚಾಮುಂಡೇಶ್ವರಿಗೆ ಮುಖ್ಯಮಂತ್ರಿಗಳು ಹಾಗೂ ಗಣ್ಯರು ಪುಷ್ಪಾರ್ಚನೆ ಮಾಡಲಿದ್ದಾರೆ.
ಪ್ರವಾಸೋದ್ಯಮ ಮತ್ತು ಭದ್ರತೆಗೆ ಆದ್ಯತೆ
ದೇಶ-ವಿದೇಶಿ ಪ್ರವಾಸಿಗರನ್ನು ಹೆಚ್ಚಿನ ಸಂಖ್ಯೆಯಲ್ಲಿ ಆಕರ್ಷಿಸಲು ಪ್ರವಾಸೋದ್ಯಮ ಇಲಾಖೆಯಿಂದ ವಿಶೇಷ ಉತ್ತೇಜನ ನೀಡಲು ನಿರ್ಧರಿಸಲಾಗಿದೆ. ದಸರಾ ಮಹೋತ್ಸವದ ವೇಳೆ ಕಾನೂನು ಸುವ್ಯವಸ್ಥೆ ಮತ್ತು ಭದ್ರತೆ ಕಾಪಾಡುವುದು, ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡುವುದು. ಅಗತ್ಯ ಮೂಲಸೌಕರ್ಯ ಕಲ್ಪಿಸುವ ಬಗ್ಗೆ ಸುದೀರ್ಘ ಸಮಾಲೋಚನೆ ನಡೆಸಲಾಯಿತು.