Mumbai ಕ್ರಿಕೆಟ್ ತಂಡಕ್ಕೆ ಆಯ್ಕೆಯಾಗದ್ದಕ್ಕೆ ಬೇಸರ, ಯುವ ಆಟಗಾರ್ತಿ ಜೀವಾಂತ್ಯ..!
ಸುದ್ದಿವಾಣಿ
7/31/2026 12:30:00 PM
ಮುಂಬೈ, ಜುಲೈ 31 : ಕ್ರಿಕೆಟ್ ಆಟಗಾರ್ತಿಯಾಗಬೇಕೆಂಬ ಕನಸು ಹೊತ್ತಿದ್ದ 17 ವರ್ಷದ ಯುವ ಮಹಿಳಾ ಕ್ರಿಕೆಟರ್ ನೇಣಿಗೆ ಶರಣಾಗಿದ್ದಾರೆ. ಮಹಾರಾಷ್ಟ್ರದ ನಾಗಪುರದಲ್ಲಿ ಈ ಘಟನೆ ನಡೆದಿದೆ. ವಿದರ್ಭ ಕ್ರಿಕೆಟ್ ಸಂಸ್ಥೆಯ (VCA) ತಂಡಕ್ಕೆ ಆಯ್ಕೆಯಾಗದಿದ್ದಕ್ಕೆ ತೀವ್ರ ಮನನೊಂದ ಅದಿತಿ ಮೋರೇಶ್ವರ ಚೌಕಂಡೆ (17) ಆತ್ಮಹತ್ಯೆಗೆ ಶರಣಾಗಿದ್ದಾರೆ. ಬುಧವಾರ ಬೆಳಿಗ್ಗೆ 5.30ರ ಸುಮಾರಿಗೆ ನಾಗಪುರದ ಲಕ್ಷ್ಮಿ ನಗರದ ಜೈನ ದೇವಾಲಯ ಸಮೀಪವಿರುವ ಉಮಾಲಕ್ಷ್ಮಿ ಅಪಾರ್ಟ್‌ಮೆಂಟ್‌ನ 4ನೇ ಮಹಡಿಯ ತಮ್ಮ ನಿವಾಸದಲ್ಲಿ ಅದಿತಿ ನೇಣಿಗೆ ಶರಣಾಗಿದ್ದಾಳೆ. ಘಟನಾ ಸ್ಥಳದಲ್ಲಿ ಪತ್ತೆಯಾಗಿರುವ ಡೆತ್ ನೋಟ್‌ನಲ್ಲಿ, ‘ನನ್ನನ್ನು ಆಯ್ಕೆ ಮಾಡಲಿಲ್ಲ…’ ಎಂದು ಅವರು ಬರೆದಿಟ್ಟಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಈ ದುರಂತ ಘಟನೆ ನಗರದ ಜನತೆಯನ್ನು ದಿಗ್ಭ್ರಮೆಗೊಳಿಸಿದೆ. ಮಹಾರಾಷ್ಟ್ರದ ಅಕೋಲಾ ಮೂಲದ ಅದಿತಿ, ಕಳೆದ ಎರಡು ವರ್ಷಗಳಿಂದ ತಮ್ಮ ತಾಯಿಯೊಂದಿಗೆ ನಾಗಪುರದಲ್ಲಿ ನೆಲೆಸಿದ್ದರು. ಇಲ್ಲಿನ ‘ಸರ್ವೆ ಕ್ರಿಕೆಟ್ ಅಕಾಡೆಮಿ’ಯಲ್ಲಿ ತರಬೇತಿ ಪಡೆಯುತ್ತಿದ್ದರು. ರಾಷ್ಟ್ರೀಯ ಮಟ್ಟದಲ್ಲಿ ಕ್ರಿಕೆಟ್ ಆಡಬೇಕು ಎಂದು ಅದಿತಿ ಕನಸು ಕಂಡಿದ್ದರು ಅವರ ಸಹೋದರ ಹೇಳಿದ್ದಾರೆ. ಆದರೆ, ಇತ್ತೀಚೆಗೆ ನಡೆದ ವಿದರ್ಭ ಕ್ರಿಕೆಟ್ ಸಂಸ್ಥೆಯ ಆಯ್ಕೆ ಪ್ರಕ್ರಿಯೆಯಲ್ಲಿ ಅವಕಾಶ ಸಿಗದ ಕಾರಣ ಆಕೆ ತೀವ್ರ ಮಾನಸಿಕ ಖಿನ್ನತೆ ಮತ್ತು ಒತ್ತಡಕ್ಕೆ ಒಳಗಾಗಿದ್ದರು ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ ಎಂದು ಪೊಲೀಸರು ಹೇಳಿದ್ದಾರೆ.ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ತನಿಖೆ ಪೂರ್ಣಗೊಂಡ ನಂತರವೇ ಆತ್ಮಹತ್ಯೆಗೆ ನಿಖರ ಕಾರಣ ತಿಳಿಯಲಿದೆ ಎಂದು ತಿಳಿಸಿದ್ದಾರೆ.