ಮಂಗಳೂರು,ಜುಲೈ14 :ಮಂಗಳೂರಿನಲ್ಲಿ ಅಕ್ರಮ ಬಾಂಗ್ಲಾದೇಶಿಗರ ಪ್ರಕರಣ ಭಾರಿ ಸುದ್ದಿಯಾಗುತ್ತಿದೆ. ಮಂಗಳೂರು ಪೊಲೀಸರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು ಬಾಂಗ್ಲಾದಿಂದ ಕೊಲ್ಕೊತ್ತಾ ಮೂಲಕ ಭಾರತಕ್ಕೆ ತಂದು ಅಲ್ಲಿಂದ ಮಂಗಳೂರಿಗೆ ರವಾನೆ ಮಾಡುತ್ತಿದ್ದ ಪಶ್ಚಿಮ ಬಂಗಾಳ ಮೂಲದ ಇಬ್ಬರು ದಲ್ಲಾಳಿಗಳನ್ನು ನಗರ ಪೊಲೀಸರು ಬಂಧಿಸಿದ್ದು ಮತ್ತೋರ್ವನನ್ನು ಕೊಲ್ಕೊತ್ತಾದಲ್ಲಿ ಬಂಧಿಸಲಾಗಿದೆ.ಮಂಗಳೂರು ನಗರ ಪೊಲೀಸ್ ಆಯುಕ್ತರಾದ ಸುಧೀರ್ ಕುಮಾರ್ ರೆಡ್ಡಿ ಈ ಮಾಹಿತಿ ನೀಡಿದ್ದಾರೆ. ಪ್ರಕರಣದ ಗಾಂಭೀರ್ಯವನ್ನು ಅರಿತು ಕಾರ್ಯಾಚರಣೆಗೆ ಇಳಿದ ಮಂಗಳೂರು ಪೊಲೀಸರು, ಆರೋಪಿಗಳಾದ ಮೊಯಿದ್ದೀನ್ ಇಸ್ಲಾಂ ಮತ್ತು ದಿಲ್ವಾರ್ ಹುಸೇನ್‌ನನ್ನು ಮಂಗಳೂರಿನಲ್ಲಿಯೇ ಬಂಧಿಸಿ ವಶಕ್ಕೆ ಪಡೆದಿದ್ದಾರೆ. ಇದೇ ವೇಳೆ ತಲೆಮರೆಸಿಕೊಂಡಿದ್ದ ಮತ್ತೊಬ್ಬ ಪ್ರಮುಖ ಆರೋಪಿ ರಸೂಲ್ ಇಸ್ಲಾಂ ಪತ್ತೆಗಾಗಿ ಮಂಗಳೂರು ನಗರ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಡಿಸಿಪಿ (DCP L&O) ಅವರು ಕೋಲ್ಕತ್ತಾ ಪೊಲೀಸರೊಂದಿಗೆ ವಿಶೇಷ ಸಮನ್ವಯತೆ ಸಾಧಿಸಿ ಜಂಟಿ ಕಾರ್ಯಾಚರಣೆ ನಡೆಸಿದ್ದಾರೆ. ಡಿಸಿಪಿ ಅವರ ಕ್ಷಿಪ್ರ ಕಾರ್ಯಾಚರಣೆಯ ಫಲವಾಗಿ ಆರೋಪಿ ರಸೂಲ್ ಇಸ್ಲಾಂನನ್ನು ಕೋಲ್ಕತ್ತಾದಲ್ಲಿ ಬಂಧಿಸಲಾಗಿದೆ.ಬಂಧಿತ ಆರೋಪಿಗಳೆಲ್ಲರೂ ಪಶ್ಚಿಮ ಬಂಗಾಳ ಮೂಲದವರಾಗಿದ್ದಾರೆ. ಇವರು ಉತ್ತರ ಭಾರತದ ವಿವಿಧ ರಾಜ್ಯಗಳಿಂದ ಕಾರ್ಮಿಕರನ್ನು ಮಂಗಳೂರಿಗೆ ಕೆಲಸಕ್ಕಾಗಿ ಕರೆತರುತ್ತಿದ್ದರು. ಇದೇ ನೆಪದಲ್ಲಿ ಭಾರತೀಯ ಕಾರ್ಮಿಕರ ಜೊತೆಯಲ್ಲಿ ಬಾಂಗ್ಲಾದೇಶದ ಅಕ್ರಮ ವಲಸಿಗರನ್ನು ಸಹ ಯಾರಿಗೂ ಸಂಶಯ ಬಾರದ ರೀತಿಯಲ್ಲಿ ಮಂಗಳೂರಿಗೆ ಕರೆತಂದು ಕಟ್ಟಡ ನಿರ್ಮಾಣದ ಕೆಲಸಕ್ಕೆ ಸೇರಿಸುತ್ತಿದ್ದರು ಎಂಬ ಆಘಾತಕಾರಿ ವಿಷಯ ತನಿಖೆಯಿಂದ ಬೆಳಕಿಗೆ ಬಂದಿದೆ.
ಕೋಲ್ಕತ್ತಾದಲ್ಲಿ ವಶಕ್ಕೆ ಪಡೆಯಲಾಗಿರುವ ಆರೋಪಿ ರಸೂಲ್ ಇಸ್ಲಾಂನನ್ನು ಟ್ರಾನ್ಸಿಟ್ ವಾರಂಟ್ ಮುಖಾಂತರ ಮಂಗಳೂರಿಗೆ ಕರೆತರಲು ಮಂಗಳೂರು ನಗರ ಪೊಲೀಸರ ವಿಶೇಷ ತಂಡ ಈಗಾಗಲೇ ಪಶ್ಚಿಮ ಬಂಗಾಳಕ್ಕೆ ರವಾನೆಯಾಗಿದೆ. ಆರೋಪಿಯನ್ನು ಮಂಗಳೂರಿಗೆ ಕರೆತಂದು ತೀವ್ರ ವಿಚಾರಣೆಗೆ ಒಳಪಡಿಸಿದ ಬಳಿಕ ಈ ಜಾಲಾದ ಆಳ ಅಗಲ ತಿಳಿಯಲಿದೆ.