ಮಂಗಳೂರು,ಜುಲೈ 31 : ಸಂಸದ್ ಆವರಣದಲ್ಲಿ ಸನಾತನ ಸಂಸ್ಕೃತಿ ಮತ್ತು ಸಂತರ ಅಪಮಾನ ಮಾಡಿದ ಕಾಂಗ್ರೆಸ್ ಪಕ್ಷ ತಿರಸ್ಕರಿಸಲು ವಿಶ್ವ ಹಿಂದೂ ಪರಿಷತ್ ದೇಶದ ಹಿಂದುಗಳಿಗೆ ಕರೆ ನೀಡಿದೆ.
ಈ ಬಗ್ಗೆ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ವಿಶ್ವ ಹಿಂದೂ ಪರಿಷದ್ ಕರ್ನಾಟಕ ದಕ್ಷಿಣ ಪ್ರಾಂತ ಸಹ ಕಾರ್ಯದರ್ಶಿ ಶರಣ್ ಪಂಪುವೆಲ್ ಅವರು ಪ್ರಜಾಪ್ರಭುತ್ವದ ದೇಗುಲವಾದ ಸಂಸತ್ತಿನ ಆವರಣದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಸಮ್ಮುಖದಲ್ಲೇ ಸಾಧು-ಸಂತರ ವೇಷ ಧರಿಸಿ, ತ್ಯಾಗ ಮತ್ತು ಪವಿತ್ರತೆಯ ಸಂಕೇತವಾದ ಕಾವಿ ವಸ್ತ್ರವನ್ನು ಅಣಕಿಸಿರುವುದು ಸನಾತನ ಧರ್ಮ, ಸನಾತನ ಸಂಸ್ಕೃತಿ ಹಾಗೂ ಇಡೀ ಹಿಂದು ಸಮಾಜಕ್ಕೆ ಎಸಗಿದ ಘೋರ ಅಪಚಾರವಾಗಿದೆ. ಇತರ ಮತ ಸಂಪ್ರದಾಯದ ಮೌಲ್ವಿಗಳ ಅಥವಾ ಧರ್ಮಗುರುಗಳ ವೇಷ ಧರಿಸಿ ಈ ರೀತಿ ರಸ್ತೆಯಲ್ಲಿ ನಾಟಕ ಮಾಡುವ ಧೈರ್ಯ ಕಾಂಗ್ರೆಸ್ ಹಾಗೂ ಅದರ ಮಿತ್ರಕೂಟಕ್ಕೆ ಇದೆಯೇ? ಹಿಂದು ಸಮಾಜದ ತಾಳ್ಮೆಯನ್ನು ದುರುಪಯೋಗಪಡಿಸಿಕೊಂಡು, ಸನಾತನ ಧರ್ಮ ಮತ್ತು ಪೂಜ್ಯ ಸಂತರನ್ನು ನಿರಂತರವಾಗಿ ಹಿಯಾಳಿಸುವುದೇ ಕಾಂಗ್ರೆಸ್‌ನ ಮುಖ್ಯ ಚಟುವಟಿಕೆಯಾಗಿದೆ.
ರಾಜಕೀಯ ತೆವಲಿಗಾಗಿ ಕಾವಿ ಧರಿಸಿ ನಾಟಕವಾಡಿ ನಮ್ಮ ಪವಿತ್ರ ಸಂಸ್ಕೃತಿಗೆ ಅಪಮಾನ ಎಸಗಿರುವ ರಾಹುಲ್ ಗಾಂಧಿ ಮತ್ತು ಪಪ್ಪು ಯಾದವ್ ತಕ್ಷಣವೇ ಇಡೀ ದೇಶದ ಸಾಧು-ಸಂತರಲ್ಲಿ ಹಾಗೂ ಹಿಂದು ಸಮಾಜದಲ್ಲಿ ಸಾರ್ವಜನಿಕವಾಗಿ ಕ್ಷಮೆಯಾಚಿಸಬೇಕು. ಸನಾತನ ಧರ್ಮಕ್ಕೆ ನಿರಂತರವಾಗಿ ದ್ರೋಹ ಬಗೆಯುತ್ತಿರುವ ಕಾಂಗ್ರೆಸ್‌ನ ಈ ಹಿಂದು ವಿರೋಧಿ ಮನಸ್ಥಿತಿಯೇ ಅದರ ಮುಂಬರುವ ಸಂಪೂರ್ಣ ಅವನತಿಗೆ ಕಾರಣವಾಗಲಿದೆ. ಇಂತಹ ಧರ್ಮದ್ರೋಹಿ ಹಾಗೂ ಅಪಮಾನಕಾರಿ ನಡೆಗಳನ್ನು ಅನುಸರಿಸುತ್ತಿರುವ ಕಾಂಗ್ರೆಸ್ ನ್ನು ಹಿಂದು ಬಾಂಧವರು ಸಂಪೂರ್ಣವಾಗಿ ತಿರಸ್ಕರಿಸಬೇಕು ಎಂದು ವಿಶ್ವ ಹಿಂದೂ ಪರಿಷತ್ ಕರೆ ನೀಡುತ್ತದೆ ಎಂದು ಪತ್ರಿಕಾ ಹೇಳಿಕೆ ನೀಡಿದ್ದಾರೆ.
