BREAKING
ದಕ್ಷಿಣ ಕನ್ನಡ

Mangaluru ಕುಪ್ಪೆಪದವಿನಲ್ಲಿ ಬೀಡಿ ಕಾರ್ಮಿಕರ ಭವಿಷ್ಯ ನಿಧಿ ಪಿಂಚಣಿದಾರರ ಸಮಾವೇಶ, ಪ್ರಮುಖ ಎರಡು ನಿರ್ಣಯಗಳ ಮಂಡನೆ


ಮಂಗಳೂರು,ಜುಲೈ22 : ಬೀಡಿ ಕಾರ್ಮಿಕರಾಗಿ ನಿವೃತ್ತರಾದ ಕುಪ್ಪೆಪದವು ವ್ಯಾಪ್ತಿಯ ಭವಿಷ್ಯ ನಿಧಿ ಪಿಂಚಣಿದಾರರ ಸಮಾವೇಶವು ಕುಪ್ಪೆಪದವು ಅನಂತರಾಜ ಸಭಾ ಭವನದಲ್ಲಿ ನಡೆಯಿತು. ಭವಿಷ್ಯ ನಿಧಿ ಪಿಂಚಣಿದಾರರ ಸಂಘದ ದ.ಕ. ಜಿಲ್ಲಾ ಕಾರ್ಯದರ್ಶಿ ಸುಕುಮಾರ್ ತೊಕ್ಕೊಟ್ಟು ಸಮಾವೇಶವನ್ನು ಉದ್ಘಾಟಿಸಿದರು. ಅವರು ಮಾತನಾಡುತ್ತಾ, ಬೀಡಿ ಮತ್ತಿತರ ಅಸಂಘಟಿತ ವಲಯದಲ್ಲಿ ಕಾರ್ಮಿಕರಾಗಿ ದುಡಿದು ನಿವೃತ್ತರಾದವರಿಗೆ ಭವಿಷ್ಯ ನಿಧಿ ಪಿಂಚಣಿ ವೃದ್ಧಾಪ್ಯದಲ್ಲಿ ಸಣ್ಣ ಆಸರೆಯಾಗಿದೆ. ಅವರ ಔಷಧಿ, ಚಕಿತ್ಸೆ ಮುಂತಾದ ಅಗತ್ಯಗಳಿಗೆ ಈ ಪಿಂಚಣಿಯ ಹಣವನ್ನೆ ಆಶ್ರಯಿಸಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಿವೃತ್ತರಾದ ಬೀಡಿ ಕಾರ್ಮಿಕರು ಸಾವಿರಾರು ಸಂಖ್ಯೆಯಲ್ಲಿ ಇದ್ದಾರೆ. ಕುಪ್ಪೆಪದವು ಹಾಗು ಸುತ್ತಲಿನ ಗ್ರಾಮಗಳಲ್ಲಿ ಎರಡು ಸಾವಿರಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಪಿಂಚಣಿದಾರರಿದ್ದಾರೆ. ಹಲವು ವರ್ಷಗಳಿಂದ ಬೇಡಿಕೆ ಮುಂದಿಡುತ್ತಿದ್ದರೂ ಪಿಂಚಣಿಯ ಮೊತ್ತವನ್ನು ಏರಿಸಲು ಸರಕಾರ ಮುಂದಾಗುತ್ತಿಲ್ಲ. ಈಗಿನ ಬೆಲೆ ಏರಿಕೆಗೆ ತಕ್ಕುದಾಗಿ ಪಿಂಚಣಿಯ ಮೊತ್ತ ಏರಿಸಲು ಸಂಘಟಿತ ಹೋರಾಟ ಅನಿವಾರ್ಯವಾಗಿದೆ ಎಂದು ಹೇಳಿದರು. 

 ಎರಡು ನಿರ್ಣಯಗಳ ಮಂಡನೆ

ಗುರುಪುರ ಹೋಬಳಿಗೆ ಸಮುದಾಯ ಆಸ್ಪತ್ರೆ ಮಂಜೂರು ಮಾಡಬೇಕು, ಜಿಲ್ಲೆಯಲ್ಲಿ ಕಿದ್ವಾಯಿ ಕ್ಯಾನ್ಸರ್ ಆಸ್ಪತ್ರೆ, ಜಯದೇವ ಹೃದಯದ ಆಸ್ಪತ್ರೆಯ ಘಟಕಗಳನ್ನು ಸ್ಥಾಪಿಸಬೇಕು. ಹಾಗೂ, ಕುಪ್ಪೆಪದವು, ಇರುವೈಲು, ಮುಚ್ಚೂರು ಮುಂತಾದ ಗ್ರಾಮಾಂತರ ಪ್ರದೇಶಗಳಿಗೆ ಸರಕಾರಿ ಬಸ್ಸು ಸಂಚಾರ ಆರಂಭಿಸಬೇಕು ಎಂಬ ಬೇಡಿಕೆಯ ಮೇಲೆ ಎರಡು ನಿರ್ಣಯಗಳನ್ನು ಸಮಾವೇಶದಲ್ಲಿ ಅಂಗೀಕರಿಸಲಾಯಿತು.

 ಭವಿಷ್ಯ ನಿಧಿ ಪಿಂಚಣಿದಾರರ ಸಂಘದ ಜಿಲ್ಲಾಧ್ಯಕ್ಷರಾದ ಜೆ ಬಾಲಕೃಷ್ಣ ಶೆಟ್ಟಿ, ಸಿಐಟಿಯು ಗುರುಪುರ ವಲಯ ಕಾರ್ಯದರ್ಶಿ ನೋಣಯ್ಯ ಗೌಡ ಶುಭಕೋರಿ ಮಾತನಾಡಿದರು.

 ಸಮಾವೇಶದಲ್ಲಿ 19 ಜನರನ್ನು ಒಳಗೊಂಡ ಕುಪ್ಪೆಪದವು ವಲಯ ಭವಿಷ್ಯ ನಿಧಿ ಪಿಂಚಣಿದಾರರ ಸಂಘವನ್ನು ರಚಿಸಲಾಯಿತು. ಭಾರತಿ ಮಂಗ್ಲುಚಾರ್ ಅಧ್ಯಕ್ಷರಾಗಿ, ಸದಾಶಿವ ದಾಸ್ ಕಾರ್ಯದರ್ಶಿಯಾಗಿ ವೇದಾವತಿ ಮುಚ್ಚೂರು ಕೋಶಾಧಿಕಾರಿಯಾಗಿ ಆಯ್ಕೆಯಾದರು. ವಸಂತಿ ಕುಪ್ಪೆಪದವು ಸ್ವಾಗತಿಸಿ ಕೊನೆಯಲ್ಲಿ ಧನ್ಯವಾದ ಸಮರ್ಪಿಸಿದರು.

📢 ಸುದ್ದಿವಾಣಿ WhatsApp — ತಕ್ಷಣದ ಬ್ರೇಕಿಂಗ್ ನ್ಯೂಸ್ ಪಡೆಯಿರಿ!