BREAKING
ದಕ್ಷಿಣ ಕನ್ನಡ

Mangaluru ಸಾರ್ವಜನಿಕರಿಗೆ ಎಚ್ಚರಿಕೆ, ಹಾವು ಕಡಿತ ಔಷಧಿ- ಸಾಮಾಜಿಕ ಜಾಲತಾಣದಲ್ಲಿ ತಪ್ಪು ಸಂದೇಶ ರವಾನೆ


ಮಂಗಳೂರು,ಜುಲೈ20:  ಹಾವು ಕಡಿತಕ್ಕೆ ಈ ಔಷಧಿ ಲಭ್ಯವಿದೆ ಎಂಬ ಶೀರ್ಷಿಕೆಯಡಿಯಲ್ಲಿ Snake Venom Antiserum I.P ಎಂಬ ಲಸಿಕೆಯ ಫೋಟೋದೊಂದಿಗೆ, “ನಿಮ್ಮಲ್ಲಿ ಯಾರಿಗಾದರೂ ಹಾವು ಕಚ್ಚಿದರೆ 108 ಕ್ಕೆ ಕರೆ ಮಾಡಿ ಅವರು ನಿಮ್ಮ ಮನೆಗೆ ಬಂದು ಈ ಇಂಜೆಕ್ಷನ್ ನೀಡುತ್ತಾರೆ. ನೀವು ಅಪಾಯದಿಂದ ಪಾರಾಗುತ್ತೀರಿ. ಈ ಮಾಹಿತಿಗಳನ್ನು ಎಲ್ಲಾ ಗುಂಪುಗಳಿಗೆ ಹಂಚಿಕೊಳ್ಳಿ” ಎಂಬ ವರದಿ ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರವಾಗುತ್ತಿದೆ. ಈ ವರದಿ ತಪ್ಪು ಮಾಹಿತಿಯನ್ನು ಸಾಮಾಜಿಕ ಜಾಲತಾಣಗಳ ಮೂಲಕ ಜನಸಾಮಾನ್ಯರಿಗೆ ನೀಡುತ್ತಿದೆ, ಆದ್ದರಿಂದ ಸಾರ್ವಜನಿಕರು ಈ ಮಾಹಿತಿಯ ಬಗ್ಗೆ ಎಚ್ಚರ ವಹಿಸಬೇಕು.

       ವಿಷಕಾರಿ ಹಾವು ಕಡಿತದ ಚುಚ್ಚುಮದ್ದು ಲಸಿಕೆಯನ್ನು ಕಡ್ಡಾಯವಾಗಿ ಆಸ್ಪತ್ರೆಯಲ್ಲಿ ನುರಿತ ವೈದ್ಯರ ಮೂಲಕ ನೀಡಲಾಗುತ್ತಿದೆ. ಈ ಲಸಿಕೆಯಿಂದ ಅಡ್ಡ ಪರಿಣಾಮ ಉಂಟಾಗುವುದರಿಂದ ಅತ್ಯಂತ ಎಚ್ಚರಿಕೆಯಿಂದ ನೇರ ನಿಗಾವಣೆಯ ಮೂಲಕ ನೀಡಲಾಗುತ್ತಿದೆ. ಈ ಲಸಿಕೆ ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಮಾತ್ರ ಉಚಿತವಾಗಿ ನೀಡಲಾಗುತ್ತಿದೆ. 108 ವಾಹನ ಕೇವಲ ರೋಗಿಗಳನ್ನು ಆಸ್ಪತ್ರೆಗಳಿಗೆ ಕೊಂಡೊಯ್ಯಲು ಇರುವ ಸರ್ಕಾರಿ ಸೇವಾ ವಾಹನ. ಆದ್ದರಿಂದ ಸಾರ್ವಜನಿಕರು ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರವಾಗಿರುವ ತಪ್ಪು ಸಂದೇಶಗಳ ಬಗ್ಗೆ ಗಮನ ನೀಡಬಾರದೆಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

📢 ಸುದ್ದಿವಾಣಿ WhatsApp — ತಕ್ಷಣದ ಬ್ರೇಕಿಂಗ್ ನ್ಯೂಸ್ ಪಡೆಯಿರಿ!