
ಮಂಗಳೂರು, ಜುಲೈ 29 : ಚಿನ್ನಾಭರಣದ ಆಸೆಗಾಗಿ ತಾವು ಆರೈಕೆ ಮಾಡುತ್ತಿದ್ದ ವೃದ್ಧೆಯನ್ನೇ ಉಸಿರುಗಟ್ಟಿಸಿ ಕೊಲೆ ಮಾಡಿದ್ದ ಅಮಾನವೀಯ ಪ್ರಕರಣ ಸಂಬಂಧಿಸಿದಂತೆ ಮಂಗಳೂರು ನ್ಯಾಯಾಲಯ ವೃದ್ದೆಯ ಕೇರ್ ಟೇಕರ್ ಸೇರಿ ಮೂವರು ಆರೋಪಿಗಳಿಗೆ ಜೀವಾವಧಿ ಶಿಕ್ಷೆ ಪ್ರಕಟಿಸಿ ಮಹತ್ವದ ತೀರ್ಪು ನೀಡಿದೆ. 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶರಾದ ಜಗದೀಶ್ ವಿ.ಎನ್. ಅವರು ಈ ತೀರ್ಪು ಪ್ರಕಟಿಸಿದ್ದಾರೆ.
ಬಂಟ್ವಾಳದ ಅಮ್ಮುಂಜೆ ನಿವಾಸಿ 73 ವರ್ಷದ ವೃದ್ಧೆ ಬೆನಡಿಕ್ಟ್ ಕಾರ್ಲೋರ ಆರೈಕೆ ಮಾಡಿಕೊಳ್ಳಲು ಅಮ್ಟಾಡಿಯ ಕುಮಾರಿ ಏಲ್ಮಾ ಪ್ರೆಶ್ಚಿತ್ ಬರೆಟ್ರೋ ಎಂಬಾಕೆಯನ್ನು ನೇಮಿಸಲಾಗಿತ್ತು. ಆದರೆ ವೃದ್ಧೆಯ ಬಳಿಯಿದ್ದ ಚಿನ್ನಾಭರಣಗಳ ಮೇಲೆ ಕಣ್ಣುಹಾಕಿದ್ದ ಏಲ್ಮಾ ಅದನ್ನು ಸುಲಿಗೆ ಮಾಡುವ ದುರುದ್ದೇಶದಿಂದ ಸಂಚು ರೂಪಿಸಿದ್ದಳು. ತನ್ನ ಸ್ನೇಹಿತ, ಬಂಟ್ವಾಳ ನರಿಕೊಂಬು ನಿವಾಸಿ ಸತೀಶ ನಾಯಕ್ ಎಂಬಾತನ ಸಹಾಯದಿಂದ ವೃದ್ಧೆ ಸೇವಿಸುವ ಆಹಾರದಲ್ಲಿ ವಿಷ ಬೆರೆಸಿ ಕೊಲ್ಲಲು ಮೊದಲು ಯತ್ನಿಸಿದ್ದಳು. ಆದರೆ ಆ ಪ್ರಯತ್ನದಲ್ಲಿ ಸಫಲರಾಗದಿದ್ದಾಗ ಮತ್ತೋರ್ವ ಆರೋಪಿ ನರಿಕೊಂಬು ನಿವಾಸಿ ಚರಣ್ ಕುಮಾರ್ ಎಂಬಾತನ ಸಹಾಯ ಪಡೆದಿದ್ದಳು. ಎರಡು ಸಾವಿರದ ಇಪ್ಪತ್ತೊಂದು ಜನವರಿ ಇಪ್ಪತ್ತೈದರ ರಾತ್ರಿ ಈ ಮೂವರು ಆರೋಪಿಗಳು ಸೇರಿ ಬೆನಡಿಕ್ಟ್ ಕಾರ್ಲೋ ಅವರನ್ನು ಉಸಿರುಗಟ್ಟಿಸಿ ಅಮಾನುಷವಾಗಿ ಸಾಯಿಸಿದ್ದರು. ಬಳಿಕ ವೃದ್ಧೆಯ ಮೈಮೇಲಿದ್ದ ಒಟ್ಟು 61.70 ಗ್ರಾಂ ತೂಕದ ಚಿನ್ನಾಭರಣಗಳನ್ನು ಸುಲಿಗೆ ಮಾಡಿ, ಸಾಕ್ಷಿ ನಾಶಪಡಿಸಲುಯತ್ನಿಸಿದ್ದರು.
ಘಟನೆಗೆ ಸಂಬಂಧಿಸಿದಂತೆ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಅಂದಿನ ಬಂಟ್ವಾಳ ಗ್ರಾಮಾಂತರ ಠಾಣಾ S I ಪ್ರಸನ್ನ M S ಅವರು ಕಾರ್ಯಾಚರಣೆ ನಡೆಸಿ ಮೂವರೂ ಆರೋಪಿಗಳನ್ನು ಬಂಧಿಸಿದ್ದರು. ಬಳಿಕ ಅಂದಿನ ಬಂಟ್ವಾಳ ಸರ್ಕಲ್ ಇನ್ಸ್‌ಪೆಕ್ಟರ್ ಟಿ ಡಿ ನಾಗರಾಜ್ ಅವರು ಪ್ರಕರಣದ ಸಮಗ್ರ ತನಿಖೆ ನಡೆಸಿ, ಅಗತ್ಯ ಸಾಕ್ಷ್ಯಾಧಾರಗಳನ್ನು ಕಲೆಹಾಕಿ ನ್ಯಾಯಾಲಯಕ್ಕೆ ಚಾರ್ಜ್‌ಶೀಟ್ ಸಲ್ಲಿಸಿದ್ದರು.
ಪ್ರಕರಣದ ಸುದೀರ್ಘ ವಿಚಾರಣೆ ನಡೆಸಿದ ಮಾನ್ಯ ನ್ಯಾಯಾಲಯವು ಸಾಕ್ಷ್ಯಾಧಾರಗಳ ಆಧಾರದ ಮೇಲೆ ಮೂವರೂ ಆರೋಪಿಗಳನ್ನು ದೋಷಿಗಳು ಎಂದು ತೀರ್ಮಾನಿಸಿ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ. ಸರಕಾರದ ಪರವಾಗಿ ಅಭಿಯೋಜಕರಾದ ಜ್ಯೋತಿ ಪ್ರಮೋದ್ ನಾಯಕ್ ಅವರು ನ್ಯಾಯಾಲಯದಲ್ಲಿ ಸಮರ್ಥವಾಗಿ ವಾದ ಮಂಡಿಸಿದ್ದರು.
ಚಿನ್ನಾಭರಣದ ಆಸೆಗಾಗಿ ವೃದ್ಧೆ ಹ*ತ್ಯೆ ಪ್ರಕರಣ ಕೇರ್ ಟೇಕರ್ ಸೇರಿ ಮೂವರಿಗೆ ಜೀವಾವಧಿ ಶಿಕ್ಷೆ