BREAKING
[ಹೋಮ್] ರಾಜ್ಯ
[ಹೋಮ್] ದೇಶ
[ಹೋಮ್] ವಿದೇಶ
[ಹೋಮ್] ಕ್ರೀಡೆ
[ಹೋಮ್] ಸಿನಿಮಾ
[ಹೋಮ್] ಉಡುಪಿ
[ಹೋಮ್] ದಕ್ಷಿಣ ಕನ್ನಡ
ದಕ್ಷಿಣ ಕನ್ನಡ

Mangaluru ಮಾಣಿ-ಸಂಪಾಜೆ ರಸ್ತೆ ದುರಸ್ತಿಗೆ ಕೇಂದ್ರ ಸರ್ಕಾರದಿಂದ 49.22 ಕೋಟಿ ರೂ. ವಿಶೇಷ ಅನುದಾನ ಮಂಜೂರು- ಸಂಸದ ಬ್ರಿಜೇಶ್ ಚೌಟ

ಮಂಗಳೂರು, ಜುಲೈ 08 :ಮಂಗಳೂರು- ಮೈಸೂರು ಪ್ರಮುಖ ರಾಷ್ಟ್ರೀಯ ಹೆದ್ದಾರಿಯ  ಮಾಣಿ-ಸಂಪಾಜೆ ರಸ್ತೆ ದುರಸ್ತಿಗೆ ಕೇಂದ್ರ ಸರ್ಕಾರದಿಂದ 49.22 ಕೋಟಿ ರೂ. ವಿಶೇಷ ಅನುದಾನ ಮಂಜೂರು ಆಗಿದೆ ಎಂದು ಸಂಸದ ಕ್ಯಾ. ಬ್ರಿಜೇಶ್ ಚೌಟ ಹೇಳಿದ್ದಾರೆ.   

 


ದ.ಕ.ಜಿಲ್ಲೆಯ ಪ್ರಮುಖ ಹೆದ್ದಾರಿ ಯೋಜನೆಗಳ ತ್ವರಿತ ಅನುಷ್ಠಾನಕ್ಕೆ ಸಚಿವಾಲಯ ಕಾರ್ಯದರ್ಶಿ ಸಂಸದ ಕ್ಯಾ.ಚೌಟ ಅವರು ಭೇಟಿ ಯಾಗಿ ಮಹತ್ವದ ಚರ್ಚೆ ನಡೆಸಿದ್ದಾರೆ. 


ದಕ್ಷಿಣ ಕನ್ನಡ ಹಾಗೂ ಒಳನಾಡು ಪ್ರದೇಶಗಳ ಸಂಪರ್ಕ ಕೊಂಡಿಯಾಗಿರುವ ರಾ.ಹೆ. 275ರ ಮಾಣಿ-ಸಂಪಾಜೆ ಹೆದ್ದಾರಿಯ ದುರಸ್ತಿ ಕಾಮಗಾರಿಗಳಿಗಾಗಿ ಕೇಂದ್ರ ಸರ್ಕಾರವು 49.22 ಕೋಟಿ ರೂ.ಗಳ ವಿಶೇಷ ಅನುದಾನ ಮಂಜೂರು ಮಾಡಿದೆ. ಇದರ ಬೆನ್ನಲ್ಲೇ ಈ ಹೆದ್ದಾರಿಯನ್ನು ಚತುಷ್ಪಥವಾಗಿ ಮೇಲ್ದರ್ಜೆಗೇರಿಸುವ ಯೋಜನೆಗೆ ಆಡಳಿತಾತ್ಮಕ ಅನುಮೋದನೆ ಪ್ರಕ್ರಿಯೆ ತ್ವರಿತಗೊಳಿಸುವಂತೆ ಕೋರಿ ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್‌ ಚೌಟ ಅವರು ಇಂದು ಹೆದ್ದಾರಿ ಸಚಿವಾಲಯದ ಕಾರ್ಯದರ್ಶಿ ಬಿ. ಉಮಾಶಂಕರ್ ಅವರನ್ನು ಭೇಟಿಯಾಗಿ ಮಹತ್ವದ ಚರ್ಚೆ ನಡೆಸಿದ್ದಾರೆ.


ನವದೆಹಲಿಯಲ್ಲಿ ಸಚಿವಾಲಯದ ಕಾರ್ಯದರ್ಶಿಯವನ್ನು ಮಂಗಳವಾರ ಖುದ್ದು ಭೇಟಿ ಮಾಡಿರುವ ಸಂಸದರು, ದಕ್ಷಿಣ ಕನ್ನಡ ಜಿಲ್ಲೆಯ ಪ್ರಮುಖ ರಸ್ತೆ ಮೂಲಸೌಕರ್ಯಗಳನ್ನು ಮತ್ತಷ್ಟು ಬಲಪಡಿಸಲು ನಿಟ್ಟಿನಲ್ಲಿ ಸುಧೀರ್ಘ ಸಮಾಲೋಚನೆ ನಡೆಸಿದ್ದಾರೆ. ಕರಾವಳಿ ಮತ್ತು ಒಳನಾಡು ಪ್ರದೇಶಗಳ ನಡುವಿನ ಸಂಪರ್ಕವನ್ನು ಸುಧಾರಿಸಿ ವಾಹನ ಸಂಚಾರ ಸುಗಮಗೊಳಿಸುವ ಅತ್ಯಂತ ನಿರ್ಣಾಯಕ ಹಾಗೂ ದೀರ್ಘಕಾಲದಿಂದ ಬಾಕಿ ಉಳಿದಿರುವ NH-275ರ ಮಾಣಿ-ಸಂಪಾಜೆ ರಸ್ತೆಯ ಮೇಲ್ದರ್ಜೀಕರಣ ಯೋಜನೆಗೆ ಶೀಘ್ರದಲ್ಲೇ ಅಲೈನ್‌ಮೆಂಟ್ ಅನುಮೋದನೆ ಮತ್ತು ಹಾಗೂ ಆಡಳಿತಾತ್ಮಕ ಅನುಮೋದನೆ ನೀಡುವಂತೆ ಕಾರ್ಯದರ್ಶಿ ಉಮಾಶಂಕರ್‌ ಅವರನ್ನು ಒತ್ತಾಯಿಸಿದ್ದಾರೆ. ಈ ಮಾರ್ಗದಲ್ಲಿ ಸಂಚಾರ ಸುರಕ್ಷತೆ ಹೆಚ್ಚಿಸಲು ಹಾಗೂ ಸುಗಮ ಸಂಚಾರಕ್ಕೆ ಅನುಕೂಲ ಕಲ್ಪಿಸುವ ಮೂಲಕ ಪ್ರಾದೇಶಿಕ ಆರ್ಥಿಕ ಬೆಳವಣಿಗೆಗೆ ಈ ಯೋಜನೆ ಕಾಲಮಿತಿಯೊಳಗೆ ಅನುಷ್ಠಾನಗೊಳ್ಳಬೇಕಾದ ಅತ್ಯಗತ್ಯತೆಯಿದೆ ಎಂದು ಕ್ಯಾ. ಚೌಟ ಅವರು ಇದೇ ಸಂದರ್ಭದಲ್ಲಿ ಕಾರ್ಯದರ್ಶಿಗಳಿಗೆ ಮನವರಿಕೆ ಮಾಡಿದ್ದಾರೆ.


ಇದೇ ವೇಳೆ, ಮಂಗಳೂರು -ಬೆಂಗಳೂರು ಎಕ್ಸ್‌ಪ್ರೆಸ್‌ ವೇಗೆ ಸಂಬಂಧಿಸಿದಂತೆಯೂ ಚರ್ಚಿಸಿದ್ದು, ಈ ಯೋಜನೆಯ ಮಹತ್ವದ ಭಾಗವಾಗಿರುವ ಶಿರಾಡಿ ಘಾಟ್ ವಿಭಾಗದ ನೂತನ ರಸ್ತೆ ವಿನ್ಯಾಸಕ್ಕೆ ’ಅಲೈನ್‌ಮೆಂಟ್ ಅಪ್ರೂವಲ್ ಕಮಿಟಿ' ಅನುಮೋದನೆಯನ್ನು ಕ್ಯಾ. ಚೌಟ ಶ್ಲಾಘಿಸಿದ್ದಾರೆ. ಪ್ರಸ್ತುತ ಈ ಯೋಜನೆಯು DPR ತಯಾರಿ ಹಂತದಲ್ಲಿದ್ದು, ಇದರೊಂದಿಗೆ ಪರಿಸರ, ಅರಣ್ಯ ಮತ್ತು ವನ್ಯಜೀವಿ ಇಲಾಖೆ ಅನುಮತಿ ಪಡೆಯುವ ಪ್ರಕ್ರಿಯೆಗಳು ಕೂಡ ಪ್ರಗತಿಯಲ್ಲಿವೆ.


ದಕ್ಷಿಣ ಕನ್ನಡದ ರಸ್ತೆಗಳ ಮೂಲಸೌಕರ್ಯ ಅಭಿವೃದ್ದಿಯ ಜೊತೆಗೆ ಮಂಗಳೂರು- ಬೆಂಗಳೂರು ನಡುವಿನ ಸಂಪರ್ಕವನ್ನು ಇನ್ನಷ್ಟು ಬಲಪಡಿಸುವುದು ಪ್ರಮುಖ ಆದ್ಯತೆಗಳಲ್ಲಿ ಒಂದಾಗಿದೆ ಎಂದು ಪುನರುಚ್ಚರಿಸಿದ ಸಂಸದರು, ಜಿಲ್ಲೆಯ ಹಾಗೂ ಕರಾವಳಿ ಪ್ರದೇಶದ ಹಿತದೃಷ್ಟಿಯಿಂದ ಈ ನಿರ್ಣಾಯಕ ಮೂಲಸೌಕರ್ಯ ಯೋಜನೆಗಳನ್ನು ಸಮಯಕ್ಕೆ ಸರಿಯಾಗಿ ಅನುಷ್ಠಾನಗೊಳಿಸಲು ಕೇಂದ್ರ ಸರ್ಕಾರದ ಸಂಬಂಧಪಟ್ಟ ಸಚಿವಾಲಯಗಳ ಜತೆಗೆ ನಿರಂತರ ಫಾಲೋಅಪ್‌ ಮಾಡುವುದಾಗಿ ಭರವಸೆ ನೀಡಿದ್ದಾರೆ.


ಭೇಟಿ ಬಳಿಕ ಪ್ರತಿಕ್ರಿಯಿಸಿದ ಸಂಸದ ಕ್ಯಾ.ಚೌಟ ಅವರು, ಹೆಚ್ಚಿನ ಜನರು "ಬ್ಯಾಕ್ ಟು ಊರಿಗೆ" ಬರಬೇಕಾದರೆ ನಾವು ಮೊತ್ತ ಮೊದಲನೆಯದಾಗಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಿಶ್ವದರ್ಜೆಯ ಸಂಪರ್ಕ ವ್ಯವಸ್ಥೆ ಕಲ್ಪಿಸಬೇಕು. ಉತ್ತಮ ರಸ್ತೆ ಸಂಪರ್ಕವೂ, ಹೂಡಿಕೆ, ಆರ್ಥಿಕ ಮತ್ತು ಉದ್ಯೋಗ ಅವಕಾಶಗಳಿಗೆ ಹೆಬ್ಬಾಗಿಲುಗಳಾಗಿವೆ. ಇವು ದಕ್ಷಿಣ ಕನ್ನಡದಲ್ಲಿ ವಾಸಿಸಲು, ಕೆಲಸ ಮಾಡಲು ಮತ್ತು ಉತ್ತಮ ಭವಿಷ್ಯವನ್ನು ನಿರ್ಮಿಸಲು ಸೂಕ್ತವಾದ ಸ್ಥಳವನ್ನಾಗಿ ಮಾಡುತ್ತವೆ. ಅದಕ್ಕಾಗಿಯೇ ಈ ಯೋಜನೆಗಳು ಸಾಕಾರಗೊಳ್ಳುವವರೆಗೆ ನಾನು ನಿರಂತರವಾಗಿ ಶ್ರಮಿಸಲು ಬದ್ಧನಾಗಿದ್ದೇನೆ" ಎಂಬುದನ್ನು ಅವರು ಒತ್ತಿ ಹೇಳಿದ್ದಾರೆ.


📢 ಸುದ್ದಿವಾಣಿ WhatsApp — ತಕ್ಷಣದ ಬ್ರೇಕಿಂಗ್ ನ್ಯೂಸ್ ಪಡೆಯಿರಿ!