BREAKING
ರಾಜ್ಯ
ದೇಶ
ವಿದೇಶ
ಕ್ರೀಡೆ
ಸಿನಿಮಾ
ಉಡುಪಿ
ದಕ್ಷಿಣ ಕನ್ನಡ

Mangalore SIR ಪ್ರಕ್ರಿಯೆಗೆ ಅಗತ್ಯವಾದ ಎನ್ಯೂಮರೇಷನ್ ಫಾರ್ಮ್‌ಗಳ, BLO ಗಳ ಕೊರತೆ ; ಮತದಾರರಿಗೆ ಅನ್ಯಾಯವಾಗದಂತೆ ಕ್ರಮ ಕೈಗೊಳ್ಳಿ- SDPI

ಮಂಗಳೂರು, ಜುಲೈ 02 : SIR ಪ್ರಕ್ರಿಯೆಗೆ ಅಗತ್ಯವಾದ ಎನ್ಯೂಮರೇಷನ್ ಫಾರ್ಮ್‌ಗಳ, BLO ಗಳ ಕೊರತೆ ಕಂಡು ಬಂದಿದ್ದು ಮತದಾರರಿಗೆ ಅನ್ಯಾಯವಾಗದಂತೆ ಕ್ರಮ ಕೈಗೊಳ್ಳಬೇಕೆಂದು SDPI ಆಗ್ರಹಿಸಿದೆ.



ಕರ್ನಾಟಕ ರಾಜ್ಯದಲ್ಲಿ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆ ಆರಂಭಗೊಂಡಿರುವ ಸಂದರ್ಭದಲ್ಲಿ, ಮತದಾರರಿಗೆ ವಿತರಿಸಬೇಕಾದ ಎನ್ಯೂಮರೇಷನ್ ಫಾರ್ಮ್‌ಗಳು (Enumeration Forms) ಸಾಕಷ್ಟು ಪ್ರಮಾಣದಲ್ಲಿ ಬೂತ್ ಮಟ್ಟದ ಅಧಿಕಾರಿಗಳ (BLO) ಬಳಿ ಲಭ್ಯವಿಲ್ಲ ಎಂಬ ಮಾಹಿತಿ ವಿವಿಧ ಭಾಗಗಳಿಂದ ಕೇಳಿ ಬರುತ್ತಿದೆ. ಹಲವಾರು ಬೂತ್‌ಗಳಲ್ಲಿ ಒಬ್ಬ BLOಗೆ ಶೇ.50 ರಷ್ಟು ಫಾರ್ಮ್‌ಗಳಷ್ಟೇ ನೀಡಲಾಗಿದೆ ಎನ್ನುವುದು ಅತ್ಯಂತ ಆತಂಕಕಾರಿ ಬೆಳವಣಿಗೆಯಾಗಿದೆ. ಇದರಿಂದ ಮನೆ - ಮನೆಗೆ ತೆರಳಿ ಮತದಾರರಿಗೆ ನಮೂನೆಗಳನ್ನು ವಿತರಿಸುವ ಹಾಗೂ ಭರ್ತಿ ಮಾಡಿಸಿಕೊಂಡು ಸಂಗ್ರಹಿಸುವ ಕಾರ್ಯ ತೀವ್ರ ವಿಳಂಬವಾಗಲಿದೆ. ಕೂಡಲೇ ಸಂಬಂಧ ಪಟ್ಟ ಅಧಿಕಾರಿಗಳು ಎಚ್ಚೆತ್ತುಕೊಂಡು ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕು ಎಂದು ಎಸ್ ಡಿ ಪಿ ಐ ಮಂಗಳೂರು ನಗರ ಜಿಲ್ಲಾಧ್ಯಕ್ಷರಾದ ಅಶ್ರಫ್ ಅಡ್ಡೂರು ಆಗ್ರಹಿಸಿದ್ದಾರೆ.


ಪ್ರತಿ BLOಗೆ 100% SIR Kit, ಅಂದರೆ ಸಂಬಂಧಿತ ಮತಗಟ್ಟೆಯ ಸಂಪೂರ್ಣ ಮತದಾರರ ವಿವರಗಳು, ಅಗತ್ಯ ಸಂಖ್ಯೆಯ Enumeration Form ಹಾಗೂ ಇತರ ಅಗತ್ಯ ದಾಖಲೆಗಳನ್ನು ಸಮಯಕ್ಕೆ ಸರಿಯಾಗಿ ಒದಗಿಸುವ ಜವಾಬ್ದಾರಿ ಜಿಲ್ಲಾಡಳಿತ ಮತ್ತು ಚುನಾವಣಾ ಅಧಿಕಾರಿಗಳದ್ದಾಗಿದೆ. ಆದರೆ ಈ ಕರ್ತವ್ಯವನ್ನು ಸಮರ್ಪಕವಾಗಿ ನಿರ್ವಹಿಸುವಲ್ಲಿ ಆಡಳಿತ ಸಂಪೂರ್ಣ ವಿಫಲವಾಗಿದೆ. ಇದರ ಪರಿಣಾಮವಾಗಿ BLOಗಳು ತಮ್ಮ ಕರ್ತವ್ಯವನ್ನು ನಿಗದಿತ ವೇಳಾಪಟ್ಟಿಯಂತೆ ನಿರ್ವಹಿಸಲು ಸಾಧ್ಯವಾಗುತ್ತಿಲ್ಲ.


ಒಬ್ಬ BLO ವ್ಯಾಪ್ತಿಯಲ್ಲಿ ನೂರಾರು ಮತದಾರರಿರುವಾಗ ಇಷ್ಟು ಕಡಿಮೆ ಪ್ರಮಾಣದ ಫಾರ್ಮ್‌ಗಳನ್ನು ಒದಗಿಸಿರುವುದು ಸಂಪೂರ್ಣ ಪ್ರಕ್ರಿಯೆಯ ಮೇಲೆಯೇ ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ. ಈಗಾಗಲೇ SIR ಕುರಿತು ಸಾರ್ವಜನಿಕರಲ್ಲಿ ಹಲವು ಗೊಂದಲಗಳು ಮತ್ತು ಆತಂಕಗಳಿರುವ ಸಂದರ್ಭದಲ್ಲಿ, ಫಾರ್ಮ್‌ಗಳ ಕೊರತೆಯಿಂದ ಪರಿಸ್ಥಿತಿ ಇನ್ನಷ್ಟು ಸಂಕೀರ್ಣವಾಗುವ ಸಾಧ್ಯತೆಯಿದೆ.


ಮತದಾರರಿಗೆ ಸಮಯಕ್ಕೆ ಸರಿಯಾಗಿ ಫಾರ್ಮ್ ದೊರೆಯದಿದ್ದರೆ, ನಿಗದಿತ ಅವಧಿಯೊಳಗೆ ಅದನ್ನು ಭರ್ತಿ ಮಾಡಿ ಅಗತ್ಯ ದಾಖಲೆಗಳೊಂದಿಗೆ ಸಲ್ಲಿಸಲು ಸಾಧ್ಯವಾಗುವುದಿಲ್ಲ. ವಿಶೇಷವಾಗಿ ಗ್ರಾಮೀಣ ಪ್ರದೇಶಗಳು, ವೃದ್ಧರು, ದಿವ್ಯಾಂಗರು, ದಿನಗೂಲಿ ಕಾರ್ಮಿಕರು ಹಾಗೂ ದೂರದ ಪ್ರದೇಶಗಳಲ್ಲಿ ವಾಸಿಸುವ ಮತದಾರರಿಗೆ ಇದು ದೊಡ್ಡ ತೊಂದರೆಯಾಗಲಿದೆ. ಆಡಳಿತಾತ್ಮಕ ಲೋಪದಿಂದ ಯಾವುದೇ ಮತದಾರ ತನ್ನ ಮತದಾನದ ಹಕ್ಕಿನಿಂದ ವಂಚಿತರಾಗಬಾರದು ಎಂಬುದು ನಮ್ಮ ಸ್ಪಷ್ಟ ಅಭಿಪ್ರಾಯವಾಗಿದೆ.


ಇದರ ಜೊತೆಗೆ, ಮಂಗಳೂರು ನಗರದಂತಹ ನಗರ ಪ್ರದೇಶಗಳಲ್ಲಿ ಶಾಲಾ ಶಿಕ್ಷಕರನ್ನು BLOಗಳಾಗಿ ನಿಯೋಜಿಸಿರುವುದು SIR ಪ್ರಕ್ರಿಯೆಗೆ ಮತ್ತೊಂದು ದೊಡ್ಡ ಅಡ್ಡಿಯಾಗಿದೆ. ಶಿಕ್ಷಕರು ಶಾಲಾ ಕರ್ತವ್ಯ ಮುಗಿದ ಬಳಿಕ ಮಾತ್ರ ಕ್ಷೇತ್ರ ಕಾರ್ಯಕ್ಕೆ ತೆರಳಲು ಸಾಧ್ಯವಾಗುತ್ತಿರುವುದರಿಂದ Enumeration Formಗಳ ವಿತರಣೆ ಮತ್ತು ಸಂಗ್ರಹಣೆ ಅತ್ಯಂತ ನಿಧಾನಗತಿಯಲ್ಲಿ ನಡೆಯುತ್ತಿದೆ. ಇದು SIR ಪ್ರಕ್ರಿಯೆಯ ಸಮಯಪಾಲನೆ ಹಾಗೂ ಪರಿಣಾಮಕಾರಿತ್ವಕ್ಕೆ ಧಕ್ಕೆಯುಂಟುಮಾಡಲಿದೆ.


ನಗರ ಪ್ರದೇಶಗಳಲ್ಲಿ ಕಾರ್ಯದಿನದ ಅವಧಿಯಲ್ಲೇ ಕ್ಷೇತ್ರದಲ್ಲಿ ಲಭ್ಯವಿರುವ ಸಿಬ್ಬಂದಿಯನ್ನು BLOಗಳಾಗಿ ನಿಯೋಜಿಸುವುದು ಅಥವಾ ಹೆಚ್ಚುವರಿ BLOಗಳನ್ನು ನೇಮಿಸುವುದು ಅಗತ್ಯವಾಗಿದೆ. ಇಲ್ಲದಿದ್ದರೆ ನಿಗದಿತ ಅವಧಿಯೊಳಗೆ SIR ಪ್ರಕ್ರಿಯೆಯನ್ನು ಪೂರ್ಣಗೊಳಿಸುವುದು ಕಷ್ಟಸಾಧ್ಯವಾಗಲಿದೆ.



ಆದ್ದರಿಂದ ಸಂಬಂಧಪಟ್ಟ ಚುನಾವಣಾ ಅಧಿಕಾರಿಗಳು ಹಾಗೂ ಇಲಾಖೆಗಳು ಈ ವಿಷಯವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿ, ಪ್ರತಿಯೊಬ್ಬ BLOಗೂ ಅಗತ್ಯವಿರುವಷ್ಟು ಎನ್ಯೂಮರೇಷನ್ ಫಾರ್ಮ್‌ಗಳನ್ನು ತಕ್ಷಣವೇ ಒದಗಿಸಬೇಕು. ರಾಜ್ಯದ ಯಾವುದೇ ಭಾಗದಲ್ಲೂ ಫಾರ್ಮ್ ಕೊರತೆಯಾಗದಂತೆ ಸಮರ್ಪಕ ವ್ಯವಸ್ಥೆ ಮಾಡಬೇಕು. ನಗರ ಪ್ರದೇಶಗಳಲ್ಲಿ ಶಾಲಾ ಶಿಕ್ಷಕರ ಬದಲಿಗೆ ಕಾರ್ಯದಿನದ ಅವಧಿಯಲ್ಲಿ ಕ್ಷೇತ್ರ ಕಾರ್ಯ ನಿರ್ವಹಿಸಲು ಸಾಧ್ಯವಾಗುವ ಸಿಬ್ಬಂದಿಯನ್ನು BLOಗಳಾಗಿ ನಿಯೋಜಿಸಬೇಕು ಅಥವಾ ಹೆಚ್ಚುವರಿ ಸಿಬ್ಬಂದಿಯನ್ನು ನೇಮಿಸಬೇಕು.

ಯಾವುದೇ ಅರ್ಹ ಮತದಾರರು SIR ಪ್ರಕ್ರಿಯೆಯಿಂದ ವಂಚಿತರಾಗದಂತೆ ಸಮರ್ಪಕ ಸಮಯ ಮತ್ತು ಅವಕಾಶವನ್ನು ಖಚಿತಪಡಿಸಬೇಕು. ಸಂಪೂರ್ಣ ಪಾರದರ್ಶಕತೆ, ನ್ಯಾಯಸಮ್ಮತತೆ ಹಾಗೂ ಪರಿಣಾಮಕಾರಿ ಆಡಳಿತದೊಂದಿಗೆ SIR ಪ್ರಕ್ರಿಯೆಯನ್ನು ನಡೆಸಬೇಕು ಎಂದು SDPI ಮಂಗಳೂರು ನಗರ ಜಿಲ್ಲಾಧ್ಯಕ್ಷರಾದ ಅಶ್ರಫ್ ಅಡ್ಡೂರು ಆಗ್ರಹಿಸಿದ್ದಾರೆ.

📢 ಸುದ್ದಿವಾಣಿ WhatsApp — ತಕ್ಷಣದ ಬ್ರೇಕಿಂಗ್ ನ್ಯೂಸ್ ಪಡೆಯಿರಿ!