BREAKING
[ಹೋಮ್] ರಾಜ್ಯ
[ಹೋಮ್] ದೇಶ
[ಹೋಮ್] ವಿದೇಶ
[ಹೋಮ್] ಕ್ರೀಡೆ
[ಹೋಮ್] ಸಿನಿಮಾ
[ಹೋಮ್] ಉಡುಪಿ
[ಹೋಮ್] ದಕ್ಷಿಣ ಕನ್ನಡ
ದಕ್ಷಿಣ ಕನ್ನಡ

Mangaluru ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಹೋರಾಡಿ ಪಡೆದ ಹಕ್ಕುಗಳೇ ಹೆಚ್ಚು- ಹೋರಾಟ ಅನಿವಾರ್ಯ: ಪಿಂಚಣಿದಾರರ ಸಮಾವೇಶದಲ್ಲಿ ರವಿ ಡಿ ಚೆಣ್ಣನ್ನನವರ್


ಮಂಗಳೂರು, ಜುಲೈ 28: ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಡರೇಷನ್ ಇದರ ಆಶ್ರಯದಲ್ಲಿ  ಕರ್ನಾಟಕ ಕಟ್ಟಡ ಕಾರ್ಮಿಕ ಕಲ್ಯಾಣ ಮಂಡಳಿಯ ಪಿಂಚಣಿದಾರರ ಪ್ರಥಮ ಸಮಾವೇಶವು ಇಂದು ಮಂಗಳೂರಿನ ಡಾನ್ ಬಾಸ್ಕೋ ಸಭಾಂಗಣದಲ್ಲಿ ನಡೆಯಿತು. ಈ ಪ್ರಥಮ ಸಮಾವೇಶವನ್ನು ನಗಾರಿ ಬಡಿಯುವ ಮೂಲಕ ವಿದ್ಯುಕ್ತವಾಗಿ ಉದ್ಘಾಟಿಸಿದ ಕರ್ನಾಟಕ ರಾಜ್ಯ ಕಲ್ಯಾಣ ಮಂಡಳಿಯ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿಯಾದ ರವಿ ಡಿ ಚೆನ್ನಣ್ಣನವರ್ ಮಾತನಾಡುತ್ತಾ ಹಕ್ಕಿನಿಂದ ವಂಚಿತರಾದವರ ಹಕ್ಕಿಗಾಗಿ ಅನ್ಯಾಯದ ವಿರುದ್ದ, ವ್ಯವಸ್ಥೆಯ ದೌರ್ಜನ್ಯದ ವಿರುದ್ಧ ಹೋರಾಡುವ ಸಂಘಟನೆ ಕಟ್ಟಲು ಬದ್ದತೆ ಬೇಕು.ಅಂತಹ ಬದ್ದತೆ ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಡರೇಷನ್ ಗೆ ಇದೆ. 1996 ರಲ್ಲಿ ಕಾರ್ಮಿಕ ಹೋರಾಟದ ಫಲವಾಗಿ ಕಲ್ಯಾಣ ಮಂಡಳಿಯು ಕಾಯ್ದೆ ರೂಪದಲ್ಲಿ ಬಂತು. ಈ ಹೋರಾಟದ ಪ್ರಯತ್ನದ ಉದ್ದೇಶಗಳು ಪ್ರತೀ ಕಾರ್ಮಿಕನಿಗೂ ಮನವರಿಕೆ ಆಗಬೇಕು. ಕಾರ್ಮಿಕ ತನ್ನ ಹಕ್ಕುಗಳಿಗಾಗಿ ಯಾವುದೇ ಅಧಿಕಾರಿಗಳಿಗೆ ದಂಬಾಲು ಬೀಳದೆ, ನ್ಯಾಯಾಲಯದ ಮೆಟ್ಟಿಲು ಹತ್ತದೆ, ಕಛೇರಿ ಕಚೇರಿಗಳಿಗೆ ಅಲೆದಾಟ ಮಾಡದೆ ಕಾರ್ಮಿಕ ಹಕ್ಕುಗಳು ಕಾರ್ಮಿಕನಿಗೆ ತಲುಪಬೇಕು. ಪ್ರಜಾಪ್ರಭುತ್ವ ಮತ್ತು ನೌಕರಶಾಹಿ ವರ್ಗವು ನೊಂದವರ ಕಣ್ಣೇರು ಒರೆಸಲು, ಸಮಾಜದ ಕಟ್ಟಕಡೆಯ ವ್ಯಕ್ತಿಗೆ ಹಕ್ಕುಗಳನ್ನು ತಲುಪಿಸಲು ಅಧಿಕಾರಿ ವರ್ಗ ಇದೆ ಇದರ ಅರಿವು ವರ್ಗಕ್ಕೆ ಇರಬೇಕು. ಸರಕಾರ ತಂದೆಯಾಗಿದ್ದರೆ ಹಕ್ಕೊತ್ತಾಯ ಸಂಸ್ಥೆಗಳು ತಾಯಿಯಂತೆ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಹೋರಾಡಿ ಪಡೆದ ಹಕ್ಕುಗಳೇ ಹೆಚ್ಚು - ಹೋರಾಟ ಅನಿವಾರ್ಯ ಎಂದು ಹೇಳಿದರು.



 ಮುಂದುವರೆದು ಮಾತನಾಡುತ್ತಾ ಕಲ್ಯಾಣ ಮಂಡಳಿಯು ಆಗಸ್ಟ್ 1 ರಿಂದ ಪ್ರತೀ ಜಿಲ್ಲೆಯಲ್ಲೂ ಜಾಗ್ರತಿ ಸಮಾವೇಶಗಳನ್ನು ನಡೆಸುತ್ತೇವೆ. ಕಾರ್ಮಿಕ ದುಡಿಯುತ್ತಿರುವ ಪ್ರದೇಶಗಳಿಗೆ ಬೇಟಿ ನೀಡುತ್ತೇವೆ. ಶಿಕ್ಷಣದ ಧನ ಸಹಾಯವನ್ನು ಕನಿಷ್ಠ 5 ಸಾವಿರ ಮತ್ತು ಈಗಾಗಲೇ ನೀಡಲಾಗುತ್ತಿರುವ ಉನ್ನತ ವ್ಯಾಸಂಗದ ಧನಸಹಾಯಗಳನ್ನು ದುಪ್ಪಟ್ಟುಗೊಳಿಸುವ ಯೋಜನೆ ಇದೆ. ಸ್ಪರ್ದಾತ್ಮಕ ಪರೀಕ್ಷೆ ಮತ್ತು ತಾಂತ್ರಿಕ ಶಿಕ್ಷಣದ ತರಬೇತಿಗೆ ಕಾಯಂ ಯೋಜನೆಯನ್ನು ತರುವ ಯೋಚನೆ ಕಲ್ಯಾಣ ಮಂಡಳಿಗೆ ಇದೆ. ಕಾರ್ಮಿಕ ಪಿಂಚಣೆಯನ್ನು 3 ಸಾವಿರದಿಂದ 5 ಸಾವಿರಕ್ಕೆ ಹೆಚ್ಚಿಸುವ ಪ್ರಸ್ತಾವವನ್ನು ಸರಕಾರಕ್ಕೆ ನೀಡಲಾಗಿದೆ ಎಂದರು.

ಕಾರ್ಮಿಕ ಇಲಾಖೆಯ ಮಂಗಳೂರು ವಿಭಾಗದ ಸಹಾಯಕ ಕಾರ್ಮಿಕ ಅಯುಕ್ತರಾದ ನಾಝಿಯಾ ಸುಲ್ತಾನ್ ರವರು ಮಾತನಾಡುತ್ತಾ ಕಾರ್ಮಿಕ ಮಂಡಳಿಯು ಕಾರ್ಮಿಕ ಕಲ್ಯಾಣದಲ್ಲಿ ಸಹಕರಿಸುತ್ತಿದೆ ಕಟ್ಟಡ ಕಾರ್ಮಿಕರು ಕೂಡ ತಮ್ಮ ಕನಿಷ್ಠ ಕರ್ತವ್ಯಗಳಾದ ನವೀಕರಣ, ಸೂಕ್ತ ದಾಖಲೆಗಳನ್ನು ಒದಗಿಸುವ ಕೆಲಸವನ್ನು ಮಾಡಬೇಕು.ಸೂಕ್ತ ದಾಖಲೆಗಳಿಲ್ಲದೆ ಕಾರ್ಮಿಕರ  ಸವಲತ್ತುಗಳು ಸಿಗದೇ ಹೋಗುವುದು ನಮಗೂ ನೋವಿನ ವಿಚಾರ ಹಾಗಾಗಿ ಕಾರ್ಮಿಕರು ತಮ್ಮ ಕಲ್ಯಾಣ ಮಂಡಳಿ ಮತ್ತು ತಮ್ಮ ಸಂಘಗಳ ಜೊತೆಗೆ ಸೂಕ್ತವಾಗಿ ಸ್ಪಂದಿಸಬೇಕು ಎಂದರು.



ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಡರೇಷನ್ ಇದರ ರಾಜ್ಯ ಅಧ್ಯಕ್ಷರಾದ ಕೆ ಮಹಂತೇಶ್ ಪ್ರಾಸ್ತಾವಿಕ ನುಡಿಗಳನ್ನಾಡುತ್ತಾ ಕಟ್ಟಡ ಕಾರ್ಮಿಕರಿಗೆ ರಟ್ಟೆಯ ಬಲ ಮತ್ತು ಅವರ ಶ್ರಮ ಹೊರತು ಅವರಲ್ಲಿ ಬೇರೇನೂ ಇಲ್ಲ ಈ ದೇಶದ ಕಟ್ಟಡ,ಅಣೆಕಟ್ಟು, ಮಹಲು, ಮೆಟ್ರೋ, ರೖಲುಹಳಿ, ಫ್ಲೈ ಓವರ್ ಗಳಲ್ಲಿ ನಮ್ಮ ಕಾರ್ಮಿಕರ ರಕ್ತ ಇದೆ.ಕಟ್ಟಡ ವಲಯದಲ್ಲಿ ಕಾರ್ಮಿಕರಿಗೆ ಸುರಕ್ಷತೆ ಇಲ್ಲ ಈ ನಿಟ್ಟಿನಲ್ಲಿ ಕಾರ್ಮಿಕರ ಸುರಕ್ಷತೆ ಮತ್ತು ಬದ್ರತೆಗಾಗಿ ನಾವು ನಡೆಸಿದ ನಮ್ಮ ಹೋರಾಟದ ಫಲವಾಗಿ ಕರ್ನಾಟಕ ರಾಜ್ಯ ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿ ರಚನೆಯಾಗಿದ್ದು ಈ ಕಲ್ಯಾಣ ಮಂಡಳಿಯ ರಚನೆಯಲ್ಲಿ ಕಾರ್ಮಿಕ ಕಲ್ಯಾಣ ಮಂಡಳಿಯ ಶ್ರಮವಿದೆ ಎಂದರು.

ಸಭೆಯ ಅಧ್ಯಕ್ಷತೆಯನ್ನು ಕಟ್ಟಡ ಕಾರ್ಮಿಕರ ಸಂಘಟನೆ ಯ ರಾಜ್ಯಾಧ್ಯಕ್ಷರಾದ ಬಾಲಕೃಷ್ಣ ಶೆಟ್ಟಿ ಯವರು ವಹಿಸಿದ್ದರು. ವೇದಿಕೆಯಲ್ಲಿ ಸಿಐಟಿಯು ದಕ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾದ ಸುನಿಲ್ ಕುಮಾರ್ ಬಜಾಲ್, ರಾಜ್ಯ ಮುಖಂಡರಾದ ವಸಂತ ಆಚಾರಿ, ಲಿಂಗರಾಜು ಬೆಂಗಳೂರು, ಚಂದ್ರಶೇಖರ ಕುಂದಾಪುರ,ಸುರೇಶ್ ಕಲ್ಲಾಗಾರ್, ಜಿಲ್ಲಾ ಅಧ್ಯಕ್ಷರಾದ ಕೆ ಯಾದವ ಶೆಟ್ಟಿ ದ.ಕ ಜಿಲ್ಲಾ ಕೋಶಾಧಿಕಾರಿ ಯೋಗೀಶ್ ಜಪ್ಪಿನ ಮೊಗರು ಮುಂತಾದವರು ಉಪಸ್ಥಿತರಿದ್ದರು.










📢 ಸುದ್ದಿವಾಣಿ WhatsApp — ತಕ್ಷಣದ ಬ್ರೇಕಿಂಗ್ ನ್ಯೂಸ್ ಪಡೆಯಿರಿ!