ಮಡಗಾಂವ್, ಜುಲೈ18:ಮುಂಬೈ-ಮಂಗಳೂರು ರೈಲಿನಲ್ಲಿ ದರೋಡೆಗೆ ಯತ್ನ ನಡೆದಿದ್ದು, ತಂಡದ ಓರ್ವನನ್ನು ಪ್ರಯಾಣಿಕರು ಹಿಡಿದು ಪೊಲೀಸರಿಗೆ ಒಪ್ಪಿಸಿದ ಘಟನೆ ವರದಿಯಾಗಿದೆ. ಮುಂಬೈ-ಮಂಗಳೂರು ಎಕ್ಸ್‌ಪ್ರೆಸ್ ರೈಲಿನಲ್ಲಿ ಈ ಘಟನೆ ನಡೆದಿದೆ.
ಮಹಾರಾಷ್ಟ್ರದ ಕರ್ಮಾಲಿ ರೈಲು ನಿಲ್ದಾಣ ಮತ್ತು ಗೋವಾದ ರೈಲು ನಿಲ್ದಾಣದ ನಡುವೆ ಈ ಘಟನೆ ನಡೆದಿದೆ. ಯುವಕ ರೈಲಿನೊಳಗೆ ಅನುಮಾನಾಸ್ಪದವಾಗಿ ಓಡಾಡುತ್ತಿರುವುದು ಕಂಡುಬಂದಿದೆ.ರೈಲ್ವೆ ಟಿಕೆಟ್ ಕಲೆಕ್ಟರ್ ಲಕ್ಷ್ಮಣ್ ಪವಾರ್ ಅವರು ಪ್ರಶ್ನಿಸಲು ಪ್ರಯತ್ನಿಸಿದಾಗ, ಶಂಕಿತ ವ್ಯಕ್ತಿ ಇದ್ದಕ್ಕಿದ್ದಂತೆ ಕೋಚ್ ಮೂಲಕ ಓಡಲು ಪ್ರಾರಂಭಿಸಿದ್ದಾನೆ. ಕುಂದಾಪುರದ ನಾಗರಾಜ್ ಪೂಜಾರಿ ಸೇರಿದಂತೆ ಮಂಗಳೂರಿಗೆ ತೆರಳುತ್ತಿದ್ದ ಸಹ ಪ್ರಯಾಣಿಕರಾದ ವಾದಿರಾಜ್ ಸುರತ್ಕಲ್ ಮತ್ತು ಮಂಜುನಾಥ ಶಾಂತಿ ಸೇರಿ ಯುವಕನನ್ನು ಬೆನ್ನಟ್ಟಿ ಹಿಡಿದಿದ್ದಾರೆ.
ನಂತರ ಕಳ್ಳನು ತನ್ನ ಜೇಬಿನಿಂದ ಚಾಕುವನ್ನು ಹೊರತೆಗೆದು ಪ್ರಯಾಣಿಕರಿಗೆ ಬೆದರಿಸಿದ್ದಾನೆ . ಆದರೆ, ಎಚ್ಚೆತ್ತುಕೊಂಡ ಪ್ರಯಾಣಿಕರು ಆತನ ಕೈಯಿಂದ ಚಾಕುವನ್ನು ಕಸಿದುಕೊಂಡಿದ್ದಾರೆ. ನಂತರ ರೈಲ್ವೆ ಸಿಬ್ಬಂದಿ ಆರೋಪಿಯನ್ನು ಗೋವಾ ಪೊಲೀಸರಿಗೆ ಒಪ್ಪಿಸಿದ್ದಾರೆ.
ಸಿಕ್ಕಿಬಿದ್ದ ನಂತರ, ಪ್ರಯಾಣಿಕರು ಯುವಕನನ್ನು ವಿಚಾರಿಸಿದಾಗ,ಮುಂಬೈನ ಮುಂಬ್ರಾದವನೆಂದು ತಿಳಿದು ಬಂದಿದೆ. ಪೊಲೀಸ್ ಮಾಹಿತಿ ಪ್ರಕಾರ, ಯುವಕ ಆರು ಸದಸ್ಯರ ಗ್ಯಾಂಗ್‌ನ ಭಾಗವಾಗಿದ್ದ. ಬೇರೆ ಬೇರೆ ಬೋಗಿಗಳಲ್ಲಿದ್ದ ಇತರ ಐದು ಸದಸ್ಯರು ಘಟನೆಯ ನಂತರ ಪರಾರಿಯಾಗಿದ್ದಾರೆ.ಮುಂಬೈ-ಮಂಗಳೂರು ಎಕ್ಸ್‌ಪ್ರೆಸ್ ಮತ್ತು ಮತ್ಸ್ಯಗಂಧ ಎಕ್ಸ್‌ಪ್ರೆಸ್ ಎರಡರಲ್ಲೂ ಈ ಗ್ಯಾಂಗ್ ಸಕ್ರಿಯವಾಗಿದೆ. ಪೊಲೀಸರು ಪ್ರಕರಣ ದಾಖಲು ಮಾಡಿ ತನಿಖೆ ನಡೆಸುತ್ತಿದ್ದಾರೆ.