ಬೆಂಗಳೂರು,ಜುಲೈ30 : ಕರ್ನಾಟಕ ಲೋಕಸೇವಾ ಆಯೋಗ (KPSC) ನಡೆಸಿರುವ ಪಶು ವೈದ್ಯಾಧಿಕಾರಿ ಹುದ್ದೆಗಳ ನೇಮಕಾತಿ ಪ್ರಕ್ರಿಯೆಯಲ್ಲಿ ಭಾರಿ ಅಕ್ರಮ ಮತ್ತು ಭ್ರಷ್ಟಾಚಾರ ನಡೆದಿದೆ ಎಂಬ ಆರೋಪಗಳ ತನಿಖೆಯನ್ನು ಸಿಬಿಐ ಗೆ ಏಕೆ ವಹಿಸಬಾರದು ಎಂದು ಕರ್ನಾಟಕ ಹೈಕೋರ್ಟ್ ರಾಜ್ಯ ಸರ್ಕಾರವನ್ನು ಪ್ರಶ್ನಿಸಿದೆ.ಪ್ರಕರಣವನ್ನು ಸಿಐಡಿ ತನಿಖೆಗೆ ವಹಿಸಿರುವುದಕ್ಕೆ ಆಶ್ಚರ್ಯ ವ್ಯಕ್ತಪಡಿಸಿರುವ ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠವು ಈವರೆಗೆ ನಡೆಸಿರುವ ಮತ್ತು ಮುಂದೆ ನಡೆಸಲಿರುವ ತನಿಖೆಗೆ ಸಂಬಂಧಿಸಿದ ಸಮಗ್ರ ದಾಖಲೆಗಳನ್ನು ಆಗಸ್ಟ್ 7ರಂದು ನ್ಯಾಯಾಲಯಕ್ಕೆ ಸಲ್ಲಿಸಬೇಕು ಎಂದು ಸರ್ಕಾರಕ್ಕೆ ನಿರ್ದೇಶಿಸಿದೆ.ವಿಚಾರಣೆ ವೇಳೆ ರಾಜ್ಯ ಸರ್ಕಾರಿ ಅಭಿಯೋಜಕ ಬಿ ಎನ್ ಜಗದೀಶ್ ಅವರು “ಈಗಾಗಲೇ ತನಿಖೆ ಕೈಗೆತ್ತಿಕೊಳ್ಳಲಾಗಿದೆ. ಸಿಸಿಟಿವಿ ದೃಶ್ಯಗಳನ್ನು ಸಂಗ್ರಹಿಸಲಾಗಿದೆ. ಜುಲೈ 25ರಂದು ಎಫ್ಐಆರ್ ದಾಖಲಾಗಿದೆ. ಆದರೆ, ಇಷ್ಟರಲ್ಲಾಗಲೇ ಕೋರ್ಟಿಗೆ ಈ ಅರ್ಜಿ ಸಲ್ಲಿಸಲಾಗಿದೆ” ಎಂದು ಆಕ್ಷೇಪಿಸಿದರು.
“ನ್ಯಾಯಾಲಯವು ಸಿಐಡಿ ತನಿಖೆಯ ಮೇಲೆ ಯಾವುದೇ ಅಭಿಪ್ರಾಯ ವ್ಯಕ್ತಪಡಿಸಬಾರದು. ಸಿಐಡಿ ತನಿಖೆ ನಿರ್ಬಂಧಿಸಬಾರದು, ಮುಂದುವರಿಯಲು ಬಿಡಬೇಕು” ಎಂದು ಕೋರಿದರು.“ತನಿಖೆಯನ್ನು ನ್ಯಾಯಾಲಯದ ಮೇಲ್ವಿಚಾರಣೆಯಲ್ಲೇ ನಡೆಸಬಹುದು. ಈ ಹಿಂದೆ ಸಿಐಡಿ ಉನ್ನತ ಶ್ರೇಣಿಯ ಅಧಿಕಾರಿಗಳು ತನಿಖೆ ನಡೆಸಿದ್ದು ಯಶಸ್ವಿಯಾಗಿದ್ದಾರೆ. ತನಿಖೆಯ ಯಾವುದೇ ದಾಖಲೆ ಕೇಳಿದರೂ ಕೊಡಲು ಸರ್ಕಾರ ಬದ್ಧವಾಗಿದೆ” ಎಂದು ಸ್ಪಷ್ಟಪಡಿಸಿದರು.ಇದಕ್ಕೆ ಪೀಠವು “ಅರ್ಜಿದಾರರ ಆರೋಪದಲ್ಲಿ ತಪ್ಪೇನೂ ಕಾಣುತ್ತಿಲ್ಲ. ಇದು ಹಾಡಹಗಲಿನ ವಂಚನೆ. ಸಿಐಡಿ ತನಿಖೆಯನ್ನು ಮುಂದುವರಿಸಲು ಬಿಟ್ಟರೆ ನಡೆದಿದೆ ಎನ್ನಲಾಗಿರುವ ದೊಡ್ಡ ಪ್ರಮಾಣದ ಭ್ರಷ್ಟಾಚಾರ ಬೆಳಕಿಗೆ ಬಾರದೆ ಹೋಗಬಹುದು. ನನ್ನ ಆದೇಶ ಸರಿಯಿಲ್ಲ ಎನ್ನುವುದಾದರೆ ಮೇಲ್ಮನವಿ ಸಲ್ಲಿಸಿಕೊಳ್ಳಿ. ಅದಕ್ಕಾಗಿ ಒಂದು ವಾರ ಕಾಲಾವಕಾಶ ನೀಡುತ್ತಿದ್ದೇನೆ” ಎಂದು ಅಸಮಾಧಾನ ವ್ಯಕ್ತಪಡಿಸಿತು.“ಸಿಐಡಿ ತನಿಖೆಯಲ್ಲಿ ಏನೂ ಆಗುವುದಿಲ್ಲ . ಪ್ರಕರಣವನ್ನು ಸಿಐಡಿ ತನಿಖೆ ನಡೆಸಬೇಕೇ? ಅಥವಾ ಸಿಬಿಐ ತನಿಖೆ ನಡೆಸಬೇಕೇ? ಎಂಬ ಬಗ್ಗೆ ಪೀಠ ನಿರ್ಧರಿಸುವವವರೆಗೆ ಸಿಐಡಿ ತನಿಖೆ ಮುಂದುವರಿಯಬಾರದು. ಈ ಕುರಿತು ಸೂಕ್ತ ಆದೇಶ ಹೊರಡಿಸಲಾಗುವುದು” ಎಂದು ಹೇಳಿತು.ಅಂತಿಮವಾಗಿ “ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಎಫ್ಐಆರ್ ರದ್ದುಪಡಿಸಬೇಕು” ಎಂದು ಕೋರಿ ನೇಮಕಾತಿ ಅಕ್ರಮದಲ್ಲಿ ಭಾಗಿಯಾಗಿರುವ ಆರೋಪ ಎದುರಿಸುತ್ತಿರುವ ಆಯ್ಕೆಯಾಗಿರುವ ಅಭ್ಯರ್ಥಿ ಸಲ್ಲಿಸಿರುವ ಅರ್ಜಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರಕ್ಕೆ ನೋಟಿಸ್ ಜಾರಿಗೊಳಿಸಲು ಆದೇಶಿಸಿತು. “ಆಯ್ಕೆಯಾಗಿರುವ ಅಭ್ಯರ್ಥಿ ವಿರುದ್ಧ ಮುಂದಿನ ವಿಚಾರಣೆವರೆಗೆ ಯಾವುದೇ ಬಲವಂತದ ಕ್ರಮ ಜರುಗಿಸಬಾರದು ಮತ್ತು ಅವರನ್ನು ಬಂಧಿಸಬಾರದು” ಎಂದು ಸಿಐಡಿಗೆ ತಾಕೀತು ಮಾಡಿ ವಿಚಾರಣೆಯನ್ನು ಆಗಸ್ಟ್ 7ಕ್ಕೆ ಮುಂದೂಡಿತು. ಸಿಬಿಐ ಪರ ಪಿ ಪ್ರಸನ್ನ ಕುಮಾರ್ ಹಾಜರಿದ್ದರು.
1998ರ ವರೆಗೂ ಕೆಪಿಎಸ್‌ಸಿ ಚೆನ್ನಾಗಿಯೇ ಕಾರ್ಯ ನಿರ್ವಹಿಸುತ್ತಿತ್ತು. ತದನಂತರದ ದಿನಗಳಲ್ಲಿ ಪ್ರತಿ ನೇಮಕಾತಿಯಲ್ಲೂ ಒಂದಿಲ್ಲೊಂದು ಹಗರಣ, ಭ್ರಷ್ಟಾಚಾರದ ಆರೋಪಗಳು ಕೇಳಿ ಬರುತ್ತಲೇ ಇವೆ.