ಅಂಕೋಲಾ , ಜುಲೈ30 : ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನಲ್ಲಿ ಬೃಹತ್ ಕಾಳಿಂಗ ಸರ್ಪ ಪತ್ತೆಯಾಗಿದೆ. ತಾಲೂಕಿನ ಮಾರುಗದ್ದೆ ಗ್ರಾಮದಲ್ಲಿ ಮನೆಯೊಂದರ ಕಟ್ಟಿಗೆ ರಾಶಿಯಲ್ಲಿ ಅಡಗಿದ್ದ ಸುಮಾರು 12 ಅಡಿ ಉದ್ದದ ಕಾಳಿಂಗ ಸರ್ಪವನ್ನು ಸೆರೆ ಹಿಡಿದು ಸುರಕ್ಷಿತವಾಗಿ ಕಾಡಿಗೆ ಬಿಡಲಾಗಿದೆ.
ಮಾರುಗದ್ದೆಯ ನಿವಾಸಿ ಗಣಪ ರಾಮಗೌಡ ಅವರ ಮನೆಯ ಕಟ್ಟಿಗೆ ರಾಶಿಯಲ್ಲಿ ಈ ಬೃಹತ್ ಕಾಳಿಂಗ ಸರ್ಪ ಕಾಣಿಸಿಕೊಂಡಿತ್ತು. ಇದರಿಂದ ಮನೆಯವರು ಆತಂಕಕ್ಕೊಳಗಾದರು. ತಕ್ಷಣವೇ ಉರಗ ರಕ್ಷಕ ಮಹೇಶ್ ನಾಯ್ಕ ಅವರಿಗೆ ದೂರವಾಣಿ ಮೂಲಕ ಮಾಹಿತಿ ನೀಡಿದರು.
ಮಾಹಿತಿ ಪಡೆದ ಮಹೇಶ್ ನಾಯ್ಕ ಅವರು ತಮ್ಮ ಪುತ್ರ ಗಗನ್ ನಾಯ್ಕ ಅವರೊಂದಿಗೆ ಸ್ಥಳಕ್ಕೆ ಆಗಮಿಸಿ, ಕಟ್ಟಿಗೆ ರಾಶಿಯಲ್ಲಿ ಅಡಗಿದ್ದ ಸುಮಾರು 12 ಅಡಿ ಉದ್ದದ ಕಾಳಿಂಗ ಸರ್ಪವನ್ನು ಅತ್ಯಂತ ಎಚ್ಚರಿಕೆಯಿಂದ ಹೊರತೆಗೆದು ಸುರಕ್ಷಿತವಾಗಿ ಹಿಡಿದರು. ಬಳಿಕ ಅರಣ್ಯ ಇಲಾಖೆಯ ಅಧಿಕಾರಿಗಳ ಸಹಕಾರದೊಂದಿಗೆ ಬಳಿಕ ಸರ್ಪವನ್ನು ಸಮೀಪದ ಅಭಯಾರಣ್ಯದಲ್ಲಿ ಸುರಕ್ಷಿತವಾಗಿ ಬಿಡುಗಡೆ ಮಾಡಲಾಯಿತು.
ಮಳೆಗಾಲದಲ್ಲಿ ಆಹಾರ ಅರಸಿ ಕಾಡುಪ್ರಾಣಿಗಳು ಹಾಗೂ ಹಾವುಗಳು ಜನವಸತಿ ಪ್ರದೇಶಗಳಿಗೆ ಬರುವ ಸಾಧ್ಯತೆ ಹೆಚ್ಚಿರುವುದರಿಂದ, ಇಂತಹ ಸಂದರ್ಭಗಳಲ್ಲಿ ಸಾರ್ವಜನಿಕರು ಆತಂಕಕ್ಕೊಳಗಾಗದೇ ಉರಗ ರಕ್ಷಕರು ಅಥವಾ ಅರಣ್ಯ ಇಲಾಖೆಗೆ ಮಾಹಿತಿ ನೀಡುವಂತೆ ಮನವಿ ಮಾಡಲಾಗಿದೆ.