BREAKING
[ಹೋಮ್] ರಾಜ್ಯ
[ಹೋಮ್] ದೇಶ
[ಹೋಮ್] ವಿದೇಶ
[ಹೋಮ್] ಕ್ರೀಡೆ
[ಹೋಮ್] ಸಿನಿಮಾ
[ಹೋಮ್] ಉಡುಪಿ
[ಹೋಮ್] ದಕ್ಷಿಣ ಕನ್ನಡ
ದೇಶ

Kasaragod ಉಕ್ರೇನ್‌ನಲ್ಲಿ ಭಾರತೀಯ ನಾವಿಕರಿದ್ದ ಹಡಗಿನ ಮೇಲೆ ರಷ್ಯಾ ಕ್ಷಿಪಣಿ ದಾಳಿ, ಕಾಸರಗೋಡಿನ ಯುವಕ ಸೇರಿ ನಾಲ್ವರು ಭಾರತೀಯರು ಮೃತ್ಯು..!


ಕಾಸರಗೋಡು,ಜುಲೈ21 : ಉಕ್ರೇನ್‌ನ ದಕ್ಷಿಣ ಬಂದರು ನಗರ ಒಡೆಸಾ ಕರಾವಳಿಯಲ್ಲಿ ಸರಕು ಹಡಗಿನ ಮೇಲೆ ರಷ್ಯಾ ನಡೆಸಿದ ಭೀಕರ ಕ್ಷಿಪಣಿ ದಾಳಿಯಲ್ಲಿ ನಾಲ್ವರು ಭಾರತೀಯರು ಸೇರಿದಂತೆ 10 ನಾವಿಕರು ಮೃತಪಟ್ಟಿದ್ದಾರೆ. ಮೃತರಲ್ಲಿ ಕೇರಳ ಕಾಸರಗೋಡಿನ ಯವಕ ಕೂಡ ಸೇರಿದ್ದಾನೆ. ಮೃತ ಭಾರತೀಯರನ್ನು ಕಾಸರಗೋಡಿನ ಅಖಿಲ್ ಜೋಯನ್, ಗುರುಪ್ರೀತ್ ಸಿಂಗ್, ಜಗನ್ ಸಿಂಗ್ ಮತ್ತು ಅಭೀಷೇಕ್ ನಿಶಾದ್ ಎಂದು ಗುರುತ್ತಿಸಲಾಗಿದೆ.  ಉಕ್ರೇನ್‌ನಿಂದ ಜೋಳ ತುಂಬಿಕೊಂಡು ಹೋಗುತ್ತಿದ್ದ ಹಡಗಿನ ಮೇಲೆ ತಡರಾತ್ರಿ ದಾಳಿ ನಡೆದಿದೆ. ಜೋಳದ ಸರಕು ಸಾಗಿಸುತ್ತಿದ್ದ ಟರ್ಕಿಶ್ ಮೂಲದ ಕಂಪನಿಗೆ ಸೇರಿದ ಹಡಗು 'M V  ಗೋಲ್ಡನ್  ಲಿಯೋ' ಮೇಲೆ ರಷ್ಯಾ ಕ್ಷಿಪಣಿಗಳನ್ನು ಹಾರಿಸಿತ್ತು. ಕ್ಷಿಪಣಿಗಳು ನೇರವಾಗಿ ಹಡಗಿನ ಸ್ಟಾರ್‌ಬೋರ್ಡ್ ಬದಿಗೆ ಬಡಿದು ಇಡೀ ಹಡಗಿನಲ್ಲಿ ಭಾರಿ ಬೆಂಕಿಯನ್ನು ಉಂಟು ಮಾಡಿತು. ಹಡಗಿನಲ್ಲಿದ್ದ ಒಟ್ಟು 17 ನಾವಿಕರಲ್ಲಿ 9 ಸಿಬ್ಬಂದಿ ಮತ್ತು ಉಕ್ರೇನ್‌ನ ಒಬ್ಬ ಪೈಲಟ್ ಸೇರಿದಂತೆ ಒಟ್ಟು 10 ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ. ಉಕ್ರೇನಿಯನ್ ಕರಾವಳಿ ಕಾವಲು ಪಡೆ ಇಡೀ ರಾತ್ರಿ ಕಾರ್ಯಾಚರಣೆ ನಡೆಸಿ ಗಂಭೀರವಾಗಿ ಗಾಯಗೊಂಡಿದ್ದ 8 ಮಂದಿಯನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿತು. ಮೃತ ಅಖಿಲ್ ಜೋಯನ್ ಕಾಸರಗೋಡಿನ ವೆಲ್ಲರಿಕುಂಡುವಿರಾಗಿದ್ದು  ಕಳೆದ ಆರು ವರ್ಷಗಳಿಂದ ಮರ್ಚೆಂಟ್ ನೇವಿಯಲ್ಲಿ ಸೇವೆ ಸಲ್ಲಿಸುತ್ತಿದ್ದರು ಎಂದು ತಿಳಿದುಬಂದಿದೆ. ಮದುವೆಗೆ ಸಿದ್ಧತೆ ನಡೆಸುತ್ತಿದ್ದ ಅಖಿಲ್, ಕುಟುಂಬದ ಏಕೈಕ ಆಧಾರಸ್ತಂಭವಾಗಿದ್ದರು. ಕೇವಲ ಮೂರು ತಿಂಗಳ ಹಿಂದೆಯಷ್ಟೇ ಅಖಿಲ್ ಅವರ ನಿಶ್ಚಿತಾರ್ಥ ಅಲೆಪ್ಪಿಯ ಯುವತಿಯೊಂದಿಗೆ ಅದ್ಧೂರಿಯಾಗಿ ನಡೆದಿತ್ತು. ಇನ್ನು ಎರಡು ತಿಂಗಳಲ್ಲಿ ಮದುವೆ ನಿಶ್ಚಯವಾಗಿತ್ತು. ಮದುವೆಗಾಗಿ ಸಿದ್ಧತೆಗಳು ನಡೆಯುತ್ತಿದ್ದವು, ಆದರೆ ವಿಧಿಯ ಆಟವೇ ಬೇರೆಯಾಗಿತ್ತು. ಒಂದು ತಿಂಗಳ ಹಿಂದೆಯಷ್ಟೇ ಅವರು ರಜೆ ಮುಗಿಸಿ ಮತ್ತೆ ಕೆಲಸಕ್ಕೆ ತೆರಳಿದ್ದರು. 

ಅಖಿಲ್ ಅವರ ತಂದೆ ಜೋಯನ್ ಎಲೆಕ್ಟ್ರಿಕಲ್ ಶಾಪ್‌ನಲ್ಲಿ ಕೆಲಸ ಮಾಡುತ್ತಿದ್ದರೆ, ತಾಯಿ ಸ್ಯಾಲಿ ಇನ್ಶೂರೆನ್ಸ್ ಏಜೆಂಟ್ ಆಗಿದ್ದಾರೆ. ಈ ಸಾಮಾನ್ಯ ಕುಟುಂಬಕ್ಕೆ ಅಖಿಲ್ ಏಕೈಕ ಮಗನಾಗಿದ್ದರು. ಕುಟುಂಬದ ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸಲು ಅವರು 19ನೇ ವಯಸ್ಸಿನಲ್ಲೇ ಮರ್ಚೆಂಟ್ ನೇವಿಗೆ ಸೇರಿದ್ದರು. ಇತ್ತೀಚೆಗಷ್ಟೇ ಒಂದು ಹೊಸ ಮನೆಯನ್ನು ಕೂಡ ಕಟ್ಟಿಸಿದ್ದರು. ಶೀಘ್ರದಲ್ಲೇ ಈ ಕೆಲಸ ಬಿಟ್ಟು ಬೇರೆ ಉತ್ತಮ ಕೆಲಸಕ್ಕೆ ಸೇರುವ ಕನಸು ಅವರದ್ದಾಗಿತ್ತು. ಖಿಲ್ ಕೇವಲ ನಾವಿಕನಾಗಿ ಮಾತ್ರವಲ್ಲದೆ, ಸ್ಥಳೀಯವಾಗಿ ಉತ್ತಮ ಕ್ರೀಡಾಪಟುವಾಗಿಯೂ ಗುರುತಿಸಿಕೊಂಡಿದ್ದರು. ಅವರು ಕೇರಳದ ಜನಪ್ರಿಯ ಕ್ರೀಡೆಯಾದ ಹಗ್ಗಜಗ್ಗಾಟ ಪಂದ್ಯದ ಉತ್ತಮ ಆಟಗಾರರಾಗಿದ್ದರು. ಶಿಸ್ತುಬದ್ಧ ಜೀವನ ನಡೆಸುತ್ತಿದ್ದ ಅಖಿಲ್ ಅಕಾಲಿಕ ಮರಣವು ಇಡೀ ಗ್ರಾಮವನ್ನೇ ಶೋಕಸಾಗರದಲ್ಲಿ ಮುಳುಗಿಸಿದೆ. ಭಾರತ ಈ ಕ್ಷಿಪಣಿ ದಾಳಿಯನ್ನು ತೀವ್ರವಾಗಿ ಖಂಡಿಸಿದೆ. 

📢 ಸುದ್ದಿವಾಣಿ WhatsApp — ತಕ್ಷಣದ ಬ್ರೇಕಿಂಗ್ ನ್ಯೂಸ್ ಪಡೆಯಿರಿ!