ಮೈಸೂರು, ಜುಲೈ 18 :ಮೈಸೂರು ವಿಭಾಗದ ರೈಲ್ವೆ ರಕ್ಷಣಾ ಪಡೆ (ಆರ್‌ಪಿಎಫ್) ಪ್ರಯಾಣಿಕರ ಮತ್ತು ರೈಲ್ವೆ ಆಸ್ತಿಗಳ ಸುರಕ್ಷತೆಗಾಗಿ ಕೈಗೊಂಡ ಸಕ್ರಿಯ ಕ್ರಮಗಳು ಮತ್ತು ವಿಶೇಷ ಕಾರ್ಯಾಚರಣೆಗಳ ಮೂಲಕ ಪ್ರಸಕ್ತ ವರ್ಷದಲ್ಲಿ ಗಮನಾರ್ಹ ಸಾಧನೆಗಳನ್ನು ದಾಖಲಿಸಿದೆ.
ರೈಲ್ವೆ ಸ್ವತ್ತಿನ ಅಧಿನಿಯಮ, 1966 ಅಡಿಯಲ್ಲಿ 08 ಪ್ರಕರಣಗಳು ಪತ್ತೆಯಾಗಿದ್ದು, ₹1,74,979/- ಮೌಲ್ಯದ ಕಳುವಾದ ರೈಲ್ವೆ ಆಸ್ತಿಯನ್ನು ವಶಪಡಿಸಿಕೊಳ್ಳಲಾಗಿದ್ದು, 15 ಆರೋಪಿಗಳನ್ನು ಬಂಧಿಸಲಾಗಿದೆ.
ರೈಲ್ವೆ ಕಾಯ್ದೆ, 1989 ಅಡಿಯಲ್ಲಿ 5,433 ಪ್ರಕರಣಗಳು ದಾಖಲಾಗಿದ್ದು, 5,436 ಆರೋಪಿಗಳನ್ನು ಬಂಧಿಸಿ, ₹15,51,600/- ದಂಡವನ್ನು ವಸೂಲು ಮಾಡಲಾಗಿದೆ.
ಆಪರೇಷನ್ ಅಮಾನತ್ ಅಡಿಯಲ್ಲಿ 108 ಪ್ರಕರಣಗಳಲ್ಲಿ, ₹57,40,437/- ಮೌಲ್ಯದ ಪ್ರಯಾಣಿಕರ ಕಳೆದುಹೋದ ವಸ್ತುಗಳನ್ನು ಪತ್ತೆಹಚ್ಚಿ, ಅವುಗಳ ನಿಜವಾದ ಮಾಲೀಕರಿಗೆ ಹಿಂತಿರುಗಿಸಲಾಗಿದೆ.
ಆಪರೇಷನ್ ನಾನ್ಹೇ ಫರಿಷ್ಠೇ ಅಡಿಯಲ್ಲಿ 38 ಕಾಣೆಯಾದ ಮತ್ತು ಅಸುರಕ್ಷಿತ ಮಕ್ಕಳನ್ನು ರಕ್ಷಿಸಿ, ಮಕ್ಕಳ ಕಲ್ಯಾಣ ಸಮಿತಿಗೆ ಹಸ್ತಾಂತರಿಸಲಾಗಿದೆ.
ಆಪರೇಷನ್ ನಾರ್ಕೋಸ್ ಅಡಿಯಲ್ಲಿ 06 ಮಾದಕ ವಸ್ತು ಪ್ರಕರಣಗಳು ಪತ್ತೆಯಾಗಿದ್ದು, ₹27,06,150/- ಮೌಲ್ಯದ ಮಾದಕ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಹಾಗೂ ಒಬ್ಬ ಆರೋಪಿಯನ್ನು ಬಂಧಿಸಲಾಗಿದೆ. ಜೊತೆಗೆ 13 ನಿಷೇಧಿತ ವಸ್ತುಗಳ ಪ್ರಕರಣ ಪತ್ತೆಯಾಗಿದ್ದು, ₹75,680/- ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಇದಲ್ಲದೆ, ವಿಭಾಗವು ಮಾನವ ಕಳ್ಳಸಾಗಣೆ ವಿರೋಧಿ ಅಭಿಯಾನಗಳು, ಮಹಿಳಾ ಪ್ರಯಾಣಿಕರ ಸುರಕ್ಷತೆಗೆ ಮೇರಿ ಸಹೇಲಿ ಯೋಜನೆ, ರೈಲ್ ಮದದ್ ಮೂಲಕ ದೂರು ಪರಿಹಾರ, ನಿಯಮಿತ ರೈಲು ಎಸ್ಕಾರ್ಟಿಂಗ್ ಹಾಗೂ ವಿಧ್ವಂಸ ತಡೆ ಪರಿಶೀಲನೆಗಳು ನಡೆಸುತ್ತಿದೆ. ಜಿಆರ್‌ಪಿ ಹಾಗೂ ನಾಗರಿಕ ಪೊಲೀಸರೊಂದಿಗೆ ಸಮನ್ವಯ ಸಾಧಿಸುವ ಮೂಲಕ ಭದ್ರತಾ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸಲಾಗಿದೆ.
ಮೈಸೂರು ವಿಭಾಗದ ಆರ್‌ಪಿಎಫ್, ಪ್ರಯಾಣಿಕರಿಗೆ ಸುರಕ್ಷಿತ, ಭದ್ರ ಮತ್ತು ಪ್ರಯಾಣಿಕ ಸ್ನೇಹಿ ರೈಲ್ವೆ ವಾತಾವರಣ ಒದಗಿಸುವ ತನ್ನ ಬದ್ಧತೆಯನ್ನು ಮುಂದುವರೆಸುತ್ತದೆ.


