ಹೈದರಾಬಾದ್, ಜುಲೈ13: SIR ಸಿಬ್ಬಂದಿ ಸೋಗಿನಲ್ಲಿ ಮನೆಗೆ ಬಂದು ಮಹಿಳೆಯ ಕುತ್ತಿಗೆಯಲ್ಲಿದ್ದ ಚಿನ್ನಾಭರಣ ದೋಚಿದ ಘಟನೆ ಹೈದ್ರಾಬಾದಿನಲ್ಲಿ ನಡೆದಿದೆ. ಘಟನೆ ಸಂಬಂಧ ಬೀಬಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.
ಚಿನ್ನದ ಸರ ವಿಶೇಷ ತೀವ್ರ ಪರಿಷ್ಕರಣೆ (SIR) ಸಿಬ್ಬಂದಿ ಎಂದು ಹೇಳಿಕೊಂಡು ಮನೆಗೆ ಬಂದ ಇಬ್ಬರು ಖದೀಮರು ಮಹಿಳೆಯ ಚಿನ್ನದ ಮಂಗಳಸೂತ್ರ ದೋಚಿ ಪರಾರಿಯಾದ ಘಟನೆ ತೆಲಂಗಾಣದ ಯಾದಾದ್ರಿ ಭುವನಗಿರಿ ಜಿಲ್ಲೆಯ ಬೀಬಿನಗರ ಮಂಡಲದಲ್ಲಿ ನಡೆದಿದೆ.
ಪೊಲೀಸರ ಮಾಹಿತಿ ಪ್ರಕಾರ, ಕೆ. ಅಂಡಾಲು ಎಂಬ ಮಹಿಳೆಯ ಮನೆಗೆ ಬೈಕ್‌ನಲ್ಲಿ ಬಂದ ಇಬ್ಬರು ವ್ಯಕ್ತಿಗಳು, SIR ಪ್ರಕ್ರಿಯೆಗಾಗಿ ಫೋಟೋ ತೆಗೆಯಬೇಕಿದೆ ಎಂದು ತಿಳಿಸಿದ್ದಾರೆ. ಫೋಟೋದಲ್ಲಿ ಮಂಗಳಸೂತ್ರ ಕಾಣಬಾರದು ಎಂದು ಹೇಳಿ ಅದನ್ನು ತೆಗೆದುಹಾಕುವಂತೆ ಮಹಿಳೆಗೆ ಸೂಚಿಸಿದ್ದಾರೆ.
ಇದನ್ನು ನಂಬಿದ ಅಂಡಾಲು ತಮ್ಮ ಮಂಗಳಸೂತ್ರವನ್ನು ಮನೆಯ ಹೊರಗೆ ನಿಂತಿದ್ದ ಪತಿಯ ಕೈಗೆ ನೀಡಿದ್ದಾರೆ. ಬಳಿಕ ಫೋಟೋ ತೆಗೆದ ಆರೋಪಿಗಳು, ಮುಂದಿನ ಪ್ರಕ್ರಿಯೆಗಾಗಿ ಸಮೀಪದ ದೇವಸ್ಥಾನಕ್ಕೆ ಬರಲು ಮಹಿಳೆಯನ್ನು ಕರೆದುಕೊಂಡು ಹೋಗಿದ್ದಾರೆ.
ಸುಮಾರು 200 ಮೀಟರ್ ದೂರ ನಡೆದ ಬಳಿಕ, ಆರೋಪಿಗಳು ಮತ್ತೆ ಮನೆಯತ್ತ ಬಂದು ಮಹಿಳೆಯ ಪತಿಯ ಕೈಯಲ್ಲಿದ್ದ ಚಿನ್ನದ ಮಂಗಳಸೂತ್ರವನ್ನು ಕಸಿದುಕೊಂಡು ಪರಾರಿಯಾಗಿದ್ದಾರೆ. ಘಟನೆ ಸಂಬಂಧ ಬೀಬಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.