BREAKING
ದೇಶ

Hyderabad ಸ್ವಿಟ್ಜರ್ಲೆಂಡ್‌ಗೆ ಟೂರಿಗೆ ಹೋದ ದಂಪತಿ ನಿಗೂಢವಾಗಿ ಕಾಣೆ,ನಾಪತ್ತೆಯ ಹಿಂದೆ 50 ಕೋಟಿ ರೂ. ರಹಸ್ಯ..!!?


ಹೈದ್ರಾಬಾದ್, ಜುಲೈ 12 : ಸ್ವಿಟ್ಜರ್ಲೆಂಡ್‌ಗೆ ಟೂರಿಗೆ ಹೋದ ದಂಪತಿ ನಿಗೂಢವಾಗಿ ಕಾಣೆಯಾಗಿದ್ದು ಹಲವು ಅನುಮಾನಗಳಿಗೆ ಕಾರಣವಾಗಿದೆ. ನಾಪತ್ತೆಯ ಹಿಂದೆ 50 ಕೋಟಿ ರೂಪಾಯಿಗಳ ರಹಸ್ಯ ಕಥೆ ಅಡಗಿದೆ ಎಂಬ ಅನುಮಾನಗಳು ಕಾಡಲಾರಂಭಿಸಿದೆ.

ಹೈದರಾಬಾದ್‌ನ ಉದ್ಯಮಿ ದಂಪತಿ ಸ್ವಿಟ್ಜರ್ಲೆಂಡ್ ಪ್ರವಾಸದಲ್ಲಿದ್ದು ಕಳೆದ ಕೆಲವು ದಿನಗಳಿಂದ ನಿಗೂಢವಾಗಿ ನಾಪತ್ತೆಯಾಗಿದ್ದಾರೆ.  ಮೇಲ್ನೋಟಕ್ಕೆ ಇದೊಂದು ಸಾಧಾರಣ ನಾಪತ್ತೆ ಪ್ರಕರಣದಂತೆ ಕಂಡರೂ, ಇದರ ಹಿಂದೆ ಬರೋಬ್ಬರಿ 50 ಕೋಟಿ ರೂಪಾಯಿಗಳ ಭಾರಿ ಆರ್ಥಿಕ ವಂಚನೆಯ ಕರಾಳ ಹಗರಣ ಅಡಗಿರುವ ಶಂಕೆ ವ್ಯಕ್ತವಾಗಿದೆ.

ಉದ್ಯಮಿ ಪಬ್ಬಾ ಚಂದ್ರಶೇಖರ್ (51) ಹಾಗೂ ಅವರ ಪತ್ನಿ ಸ್ವಪ್ನಾ (42) ನಿಗೂಢವಾಗಿ ನಾಪತ್ತೆಯಾದ ದಂಪತಿಯಾಗಿದ್ದಾರೆ. ಜೂನ್ 22 ರಂದು ರಜೆಗಾಗಿ ವಿದೇಶಕ್ಕೆ ತೆರಳಿದ್ದ ಇವರು ಜುಲೈ 8 ರವರೆಗೆ ತಮ್ಮ ಕುಟುಂಬಸ್ಥರೊಂದಿಗೆ ಸಂಪರ್ಕದಲ್ಲಿದ್ದರು. ಆದರೆ ಅಂದಿನಿಂದ ಇಬ್ಬರ ಮೊಬೈಲ್ ಫೋನ್‌ಗಳು ದಿಢೀರನೆ ಸ್ವಿಚ್ ಆಫ್ ಆಗಿರುವುದು ಹಲವು ಅನುಮಾನಗಳಿಗೆ ದಾರಿ ಮಾಡಿಕೊಟ್ಟಿದೆ.

ತಂದೆ-ತಾಯಿ ಜುಲೈ 8 ರ ನಂತರ ಯಾವುದೇ ಕರೆಗಳಿಗೂ ಸಿಗದೇ ಹೋದಾಗ ಆತಂಕಗೊಂಡ ಅವರ 23 ವರ್ಷದ ಮಗಳು ಶ್ರೇಯಾ ಹೈದರಾಬಾದ್ ಪೊಲೀಸರಿಗೆ ದೂರು ನೀಡಿದ್ದಾರೆ. ಮಗಳ ದೂರಿನ ಆಧಾರದ ಮೇಲೆ ಪೊಲೀಸರು ಸದ್ಯ ನಾಪತ್ತೆ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

ನಾಪತ್ತೆಯ ಹಿಂದೆ 50 ಕೋಟಿ ರೂ. ರಹಸ್ಯ

ಪೊಲೀಸ್ ತನಿಖೆ ಆಳವಾಗುತ್ತಿದ್ದಂತೆ ದಂಪತಿಯ ಮತ್ತೊಂದು ಶಾಕಿಂಗ್ ಮುಖ ಬಯಲಾಗಿದೆ. ಉದ್ಯಮಿ ಚಂದ್ರಶೇಖರ್ ಕಳೆದ ಕೆಲವು ವರ್ಷಗಳಿಂದ ಪರಿಚಯಸ್ಥರು ಹಾಗೂ ಹೂಡಿಕೆದಾರರು ಸೇರಿದಂತೆ ಸುಮಾರು 60 ಕ್ಕೂ ಹೆಚ್ಚು ಜನರಿಂದ ಬರೋಬ್ಬರಿ 50 ಕೋಟಿ ರೂಪಾಯಿ ಹಣವನ್ನು ಸಂಗ್ರಹಿಸಿರುವುದು ಪತ್ತೆಯಾಗಿದೆ.ತಮ್ಮ ವೈಯಕ್ತಿಕ ಮತ್ತು ಬಿಸಿನೆಸ್ ಅಗತ್ಯಗಳ ಹೆಸರಿನಲ್ಲಿ, ಬ್ಯಾಂಕುಗಳಿಗಿಂತ ಹೆಚ್ಚಿನ ಲಾಭ ಅಥವಾ ಬಡ್ಡಿ ನೀಡುವುದಾಗಿ ನಂಬಿಸಿ ಚಂದ್ರಶೇಖರ್ ಜನರಿಂದ ಕೋಟ್ಯಂತರ ರೂಪಾಯಿ ಕೈಗಡ ತಂದಿದ್ದರು.ಹೂಡಿಕೆದಾರರು ಹಣ ವಾಪಸ್ ಕೇಳಲು ಶುರುಮಾಡಿದ ಬೆನ್ನಲ್ಲೇ ದಂಪತಿ ಸ್ವಿಟ್ಜರ್ಲೆಂಡ್ ಪ್ಲಾನ್ ಮಾಡಿದ್ದರು. ಹೀಗಾಗಿ ಇವರು ಉದ್ದೇಶಪೂರ್ವಕವಾಗಿಯೇ ಜನರಿಗೆ ವಂಚಿಸಿ, ವಿದೇಶದಲ್ಲಿ ಹಣ ಅಡಗಿಸಿಟ್ಟು ದೇಶ ಬಿಟ್ಟು ಓಡಿಹೋಗಿದ್ದಾರೆಯೇ ಎಂಬ ಕೋನದಲ್ಲೂ ಹೈದ್ರಾಬಾದ್ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ದಂಪತಿ ಭಾರತದಿಂದ ಹೊರಟ ವಲಸೆ ದಾಖಲೆಗಳು, ವಿಮಾನದ ಟಿಕೆಟ್‌ಗಳು ಹಾಗೂ ಸ್ವಿಟ್ಜರ್ಲೆಂಡ್‌ನಲ್ಲಿ ಅವರ ಕೊನೆಯ ಲೊಕೇಶನ್ ಎಲ್ಲಿದೆ ಎಂಬುದನ್ನು ಪತ್ತೆಹಚ್ಚಲು ಸೈಬರ್ ಕ್ರೈಮ್ ಪೊಲೀಸರು ಇಂಟರ್‌ಪೋಲ್ ನೆರವು ಕೋರಲು ಸಜ್ಜಾಗಿದ್ದಾರೆ.


📢 ಸುದ್ದಿವಾಣಿ WhatsApp — ತಕ್ಷಣದ ಬ್ರೇಕಿಂಗ್ ನ್ಯೂಸ್ ಪಡೆಯಿರಿ!