ಹುಬ್ಬಳ್ಳಿ, ಜುಲೈ 08 : ಜೂನ್ 2026 ರಲ್ಲಿ 4.18 ಮಿಲಿಯನ್ ಟನ್ ಸರಕು ಸಾಗಣೆ ಮಾಡುವ ಮೂಲಕ ನೈಋತ್ಯ ರೈಲ್ವೇ ಹೊಸ ದಾಖಲೆ ನಿರ್ಮಾಣ ಮಾಡಿದೆ.
ಈ ಬಗ್ಗೆ ಮಾಹಿತಿ ಬಿಡುಗಡೆ ಮಾಡಿರುವ ನೈಋತ್ಯ ರೈಲ್ವೇ ಜೂನ್ 2026ರ ಅವಧಿಯಲ್ಲಿ ಸರಕು ಸಾಗಣೆಯಿಂದ ಒಟ್ಟು ₹402.61 ಕೋಟಿ ಆದಾಯ ಹರಿದುಬಂದಿದೆ. ಜೂನ್ ತಿಂಗಳಲ್ಲಿ 14.85 ಮಿಲಿಯನ್ ಪ್ರಯಾಣಿಕರು ಪ್ರಯಾಣಿಸಿದ್ದು, ಇದರಿಂದ ಬಂದ ಆದಾಯ ₹290.43 ಕೋಟಿಗಳಿಗೆ ಏರಿಕೆಯಾಗಿದೆ. ನೈಋತ್ಯ ವಲಯವು ಜೂನ್ 2026ರಲ್ಲಿ ಎಲ್ಲಾ ಮೂಲಗಳಿಂದ ಒಟ್ಟಾರೆಯಾಗಿ ₹733.23 ಕೋಟಿ ಒಟ್ಟು ಆದಾಯವನ್ನು ಗಳಿಸಿದೆ ಎಂದಿದೆ.
ನೈಋತ್ಯ ರೈಲ್ವೆಯು ಜೂನ್ 2026ರಲ್ಲಿ ಗಮನಾರ್ಹ ಪ್ರಗತಿ ಸಾಧಿಸಿದೆ. ಪ್ರಮುಖ ಆದಾಯ ವಿಭಾಗಗಳಲ್ಲಿ ಸ್ಥಿರ ಬೆಳವಣಿಗೆಯೊಂದಿಗೆ ದಾಖಲೆ ಮಟ್ಟದ ಸರಕು ಸಾಗಣೆ ಮಾಡಲಾಗಿದ್ದು, ಇದು ವಲಯದ ಕಾರ್ಯಾಚರಣೆಯ ದಕ್ಷತೆ ಮತ್ತು ಗ್ರಾಹಕಕೇಂದ್ರಿತ ಸೇವೆಗಳ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ.
ಜೂನ್ 2026ರಲ್ಲಿ ನೈಋತ್ಯ ರೈಲ್ವೆಯು 4.18 ಮಿಲಿಯನ್ ಟನ್ (MT) ಸರಕು ಸಾಗಣೆ ಮಾಡಿದ್ದು, ಇದು ಜೂನ್ 2025ರ ಅವಧಿಯ (3.98 MT) ಸಾಧನೆಗಿಂತ ಶೇ. 5.2ರಷ್ಟು (0.20 MT) ಹೆಚ್ಚಾಗಿದೆ. ಜೂನ್ ತಿಂಗಳ ಇತಿಹಾಸದಲ್ಲೇ ಇದು ಇದುವರೆಗೆ ದಾಖಲಾದ ಅತ್ಯಧಿಕ ಸಾಧನೆಯಾಗಿದೆ. ಇದರೊಂದಿಗೆ, ದೈನಂದಿನ ಸರಾಸರಿ ವ್ಯಾಗನ್ ಲೋಡಿಂಗ್‌ನಲ್ಲೂ ಹೊಸ ದಾಖಲೆ ನಿರ್ಮಾಣವಾಗಿದ್ದು, ಪ್ರತಿದಿನ ಸರಾಸರಿ 2,221 ವ್ಯಾಗನ್‌ಗಳನ್ನು ಲೋಡ್ ಮಾಡಲಾಗಿದೆ. ಇದು ಕಳೆದ ವರ್ಷದ (2,143 ವ್ಯಾಗನ್‌ಗಳು) ಸಾಧನೆಗಿಂತ ಶೇ. 3.6ರಷ್ಟು ಅಧಿಕವಾಗಿದೆ.
ವಿವಿಧ ಸರಕುಗಳ ಪ್ರಗತಿ ವಿವರ:
• ಕಬ್ಬಿಣದ ಅದಿರು: 1.69 MT ಸಾಗಣೆಯಾಗಿದ್ದು, ಶೇ. 6.3 ರಷ್ಟು ಬೆಳವಣಿಗೆ ಕಂಡಿದೆ.
• ಉಕ್ಕು (ಸ್ಟೀಲ್): 0.90 MT ಸಾಗಣೆಯೊಂದಿಗೆ ಶೇ. 7.4 ರಷ್ಟು ಏರಿಕೆಯಾಗಿದೆ.
• ಆರ್‌ಎಂಎಸ್‌ಪಿ (RMSP): ಶೇ. 34.5 ರಷ್ಟು ಭಾರಿ ಹೆಚ್ಚಳ ಕಂಡುಬಂದಿದ್ದು, 0.23 MT ತಲುಪಿದೆ.
• ಖನಿಜ ತೈಲ: 0.21 MT ಸಾಗಣೆಯಾಗಿದ್ದು, ಶೇ. 15.8 ರಷ್ಟು ಪ್ರಗತಿ ಸಾಧಿಸಿದೆ.
• ಸಿಮೆಂಟ್: 0.03 MT ಸಾಗಣೆಯೊಂದಿಗೆ ಶೇ. 32 ರಷ್ಟು ತೇಜಿ ಕಂಡಿದೆ.
• ಕಂಟೇನರ್ ಸಾಗಣೆ: 0.09 MT ತಲುಪಿದ್ದು, ಶೇ. 15.8 ರಷ್ಟು ಏರಿಕೆಯಾಗಿದೆ.
ಜೂನ್ 2026ರಲ್ಲಿ ದಾಖಲಾದ ಒಟ್ಟು ಆದಾಯ ₹733.23 ಕೋಟಿಗಳಾಗಿದ್ದು, ಕಳೆದ ವರ್ಷಕ್ಕೆ ಹೋಲಿಸಿದರೆ ಇದು ಶೇ. 1.55 ರಷ್ಟು (₹11.22 ಕೋಟಿ) ಹೆಚ್ಚಾಗಿದೆ. ಪ್ರಯಾಣಿಕರ ವಿಭಾಗದಿಂದ ಬಂದ ಆದಾಯ ₹290.43 ಕೋಟಿಗಳಾಗಿದ್ದು, ಶೇ. 15.08 ರಷ್ಟು ಗಮನಾರ್ಹ ಬೆಳವಣಿಗೆ ದಾಖಲಿಸಿದೆ. ಪ್ರಯಾಣಿಕರ ಸಂಖ್ಯೆಯಲ್ಲೂ ಶೇ. 4.36 ರಷ್ಟು ಪ್ರಗತಿಯಾಗಿದ್ದು, ಒಟ್ಟು 14.85 ಮಿಲಿಯನ್ ಜನ ಸಂಚರಿಸಿದ್ದಾರೆ.
ರೈಲ್ವೆಯ ಪ್ರಮುಖ ಆದಾಯದ ಮೂಲವಾದ ಸರಕು ಸಾಗಣೆಯಿಂದ ₹402.61 ಕೋಟಿ ಸಂದಾಯವಾಗಿದೆ. ಪಾರ್ಸೆಲ್ ಸೇವೆಗಳ ಮೂಲಕ ₹14.30 ಕೋಟಿ (ಶೇ. 5.30 ಏರಿಕೆ) ಗಳಿಕೆಯಾಗಿದೆ. ಉಳಿದಂತೆ ಇತರ ಕೋಚಿಂಗ್ ಆದಾಯದಿಂದ ₹26.66 ಕೋಟಿ ಹಾಗೂ ಇತರೆ (ಸಂಡ್ರಿ) ಮೂಲಗಳಿಂದ ₹13.53 ಕೋಟಿ ಆದಾಯ ಬಂದಿದೆ. ವಾಣಿಜ್ಯ ಸಂಡ್ರಿ ಆದಾಯವು ₹5.56 ಕೋಟಿಗಳಾಗಿದ್ದು, ಶೇ. 0.36 ರಷ್ಟು ಬೆಳವಣಿಗೆ ತೋರಿದೆ. ಇನ್ನು ಕಾರ್ಯಾಚರಣಾ ವಿಭಾಗದಲ್ಲಿ ಟಿಕೆಟ್ ಪರಿಶೀಲನೆ ತಪಾಸಣೆಯ ಮೂಲಕ 0.58 ಲಕ್ಷ ಪ್ರಕರಣಗಳನ್ನು ಪತ್ತೆ ಹಚ್ಚಲಾಗಿದ್ದು, ₹4.96 ಕೋಟಿ ದಂಡದ ರೂಪದಲ್ಲಿ ಆದಾಯ ಬಂದಿದೆ.
ಸರಕು ಸಾಗಣೆಯಲ್ಲಿನ ಈ ಅಮೋಘ ಸಾಧನೆ ಮತ್ತು ಸ್ಥಿರ ಆದಾಯದ ಬೆಳವಣಿಗೆಯು, ಲಾಜಿಸ್ಟಿಕ್ಸ್ ದಕ್ಷತೆ, ಮೂಲಸೌಕರ್ಯ ಅಭಿವೃದ್ಧಿ ಹಾಗೂ ಗ್ರಾಹಕರ ತೃಪ್ತಿಯನ್ನು ಹೆಚ್ಚಿಸುವಲ್ಲಿ ನೈಋತ್ಯ ರೈಲ್ವೆ ನಡೆಸುತ್ತಿರುವ ನಿರಂತರ ಪ್ರಯತ್ನಗಳನ್ನು ಎತ್ತಿ ತೋರಿಸುತ್ತದೆ. ಭವಿಷ್ಯದಲ್ಲೂ ಇದೇ ರೀತಿ ಮುಂದುವರಿಸಿ, ಈ ಭಾಗದ ಸಾರಿಗೆ ಅಗತ್ಯಗಳನ್ನು ಪರಿಣಾಮಕಾರಿಯಾಗಿ ಪೂರೈಸಲು ನೈಋತ್ಯ ರೈಲ್ವೆ ಸನ್ನದ್ಧವಾಗಿದೆ.