ದುಬೈ, ಜುಲೈ13 : ಭಾರಿ ಪ್ರಯಾಣ ದಟ್ಟನೆಯ ದುಬೈ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಭಾರಿ ಸುಧಾರಣೆಗಳನ್ನು ಜಾರಿಗೆ ತರಲಾಗಿದೆ.ಬೇಸಿಗೆ ರಜೆಯ ಸಂದರ್ಭ ಪ್ರಯಾಣಿಕರ ದಟ್ಟಣೆಯನ್ನು ಸಮರ್ಥವಾಗಿ ನಿರ್ವಹಿಸಲು ದುಬೈ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಭದ್ರತಾ ಹಾಗೂ ಕಸ್ಟಮ್ಸ್ ತಪಾಸಣಾ ವ್ಯವಸ್ಥೆಯನ್ನು ಮತ್ತಷ್ಟು ಆಧುನೀಕರಿಸಲಾಗಿದೆ.
ಪ್ರಯಾಣಿಕರ ದಟ್ಟಣೆಯನ್ನು ಗಮನದಲ್ಲಿಟ್ಟುಕೊಂಡು ಹಸ್ತಚಾಲಿತ ಬ್ಯಾಗೇಜ್ ತಪಾಸಣೆಯ ಸಮಯವನ್ನು ಕೇವಲ 7 ಸೆಕೆಂಡುಗಳಿಗೆ ಇಳಿಸಲಾಗಿದೆ. ಸುರಕ್ಷತೆ ಮತ್ತು ನಿಖರತೆಗೆ ಯಾವುದೇ ಧಕ್ಕೆಯಾಗದಂತೆ ಅತ್ಯಾಧುನಿಕ ಸ್ಮಾರ್ಟ್ ತಂತ್ರಜ್ಞಾನಗಳ ಮೂಲಕ ಈ ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಯಾಣ ಪ್ರಕ್ರಿಯೆಯನ್ನು ಮತ್ತಷ್ಟು ಸುಗಮಗೊಳಿಸಲು ದುಬೈ ಕಸ್ಟಮ್ಸ್, ವಿಮಾನ ನಿಲ್ದಾಣದ ವಿವಿಧ ಟರ್ಮಿನಲ್‌ಗಳಲ್ಲಿ 19 ಅತ್ಯಾಧುನಿಕ ಬ್ಯಾಗೇಜ್ ಸ್ಕ್ರೀನಿಂಗ್ ವ್ಯವಸ್ಥೆಗಳು ಹಾಗೂ 77 ಪತ್ತೆ ಮತ್ತು ತಪಾಸಣಾ ಸಾಧನಗಳನ್ನು ಅಳವಡಿಸಿದೆ.
ಇದಲ್ಲದೆ, ಸಾಕುಪ್ರಾಣಿಗಳೊಂದಿಗೆ ಪ್ರಯಾಣಿಸುವವರ ಅನುಕೂಲಕ್ಕಾಗಿ ಟರ್ಮಿನಲ್ 1, 2 ಮತ್ತು 3ರಲ್ಲಿ ವಿಶೇಷ ಪ್ರಾಣಿ ತಪಾಸಣಾ ಕೊಠಡಿಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಇದರಿಂದ ಪಶುವೈದ್ಯಕೀಯ ತಪಾಸಣೆ ವೇಗವಾಗಿ ಪೂರ್ಣಗೊಳ್ಳಲಿದ್ದು, ಪ್ರಯಾಣಿಕರಿಗೆ ಉತ್ತಮ ಸೇವೆ ದೊರೆಯಲಿದೆ.ಜುಲೈ ಮೊದಲಾರ್ಧದಲ್ಲಿ ಸುಮಾರು 30 ಲಕ್ಷ ಪ್ರಯಾಣಿಕರು ವಿಮಾನ ನಿಲ್ದಾಣದ ಮೂಲಕ ಸಂಚರಿಸುವ ನಿರೀಕ್ಷೆಯಿದೆ. ಬೇಸಿಗೆ ಪ್ರಯಾಣದ ಸಂದರ್ಭದಲ್ಲಿ ಯುಎಇ ಕಸ್ಟಮ್ಸ್ ನಿಯಮಗಳನ್ನು ಪಾಲಿಸುವಂತೆ ಅಧಿಕಾರಿಗಳು ಪ್ರಯಾಣಿಕರಿಗೆ ಮನವಿ ಮಾಡಿದ್ದಾರೆ. ವೈಯಕ್ತಿಕ ಬಳಕೆಗಾಗಿ ತರಲಾಗುವ 3,000 ದಿರ್ಹಮ್ ಮೌಲ್ಯದವರೆಗಿನ ಉಡುಗೊರೆಗಳಿಗೆ ಕಸ್ಟಮ್ಸ್ ಸುಂಕ ಇರುವುದಿಲ್ಲ. ಆದರೆ, ಅವುಗಳನ್ನು ವಾಣಿಜ್ಯ ಉದ್ದೇಶಕ್ಕೆ ಬಳಸಬಾರದು ಎಂದು ಸೂಚಿಸಲಾಗಿದೆ. ಪ್ರಯಾಣಿಕರ ಸುರಕ್ಷತೆ ಮತ್ತು ಸುಗಮ ಸಂಚಾರವನ್ನು ಖಚಿತಪಡಿಸಲು ಸ್ಮಾರ್ಟ್ ತಂತ್ರಜ್ಞಾನ ಹಾಗೂ ಪರಿಣತ ಸಿಬ್ಬಂದಿಯಲ್ಲಿ ಹೆಚ್ಚಿನ ಹೂಡಿಕೆ ಮಾಡಲಾಗಿದೆ ಎಂದು ದುಬೈ ಕಸ್ಟಮ್ಸ್ ತಿಳಿಸಿದೆ.
