BREAKING
ವಿದೇಶ

Dhaka ಬಾಂಗ್ಲಾದೇಶದಲ್ಲಿ ಭಾರಿ ಕುಸಿತ, 8 ಮಕ್ಕಳು, ಶಿಕ್ಷಕರು ಸೇರಿ 19 ಮಂದಿ ಮೃತ್ಯು

ಢಾಕಾ , ಜುಲೈ 09 : ಬಾಂಗ್ಯಾದೇಶದಲ್ಲಿ ಮಳೆಯ ಕಾರಣ ಭಾರಿ ಭೂಕುಸಿತ ಉಂಟಾಗಿದ್ದು ಇದುವರೆಗಿನ ಮಾಹಿತಿ ಪ್ರಕಾರ 8 ಮಕ್ಕಳು, ಶಿಕ್ಷಕರು ಸೇರಿ 19 ಮಂದಿ ಸಾವನ್ನಪ್ಪಿದ್ದಾರೆ. 



ನಿರಾಶ್ರಿತರ ಶಿಬಿರದ ಒಳಗಿದ್ದ ಬಾಲಕಿಯರ ಶಾಲೆಯೊಂದರ ಮೇಲೆ ಈ  ಭೂಕುಸಿತ ಸಂಭವಿಸಿದ ಪರಿಣಾಮ, 8 ವಿದ್ಯಾರ್ಥಿಗಳು ಮತ್ತು ಒಬ್ಬ ಶಿಕ್ಷಕ ಸ್ಥಳದಲ್ಳೆ ಸಾವಿನ್ನಪ್ಪಿದ್ದಾರೆ.

ಕರಾವಳಿ ನಗರವಾದ ಕಾಕ್ಸ್ ಬಜಾರ್‌ನಲ್ಲಿರುವ ಇಸ್ಲಾಮಿಕ್ ಅಧ್ಯಯನ ಕೇಂದ್ರವು ಮಣ್ಣು ಮತ್ತು ಅವಶೇಷಗಳ ಅಡಿಯಲ್ಲಿ ಸಿಲುಕಿಕೊಂಡಿದ್ದು, ತೀವ್ರ ಹುಡುಕಾಟ ಮತ್ತು ರಕ್ಷಣಾ ಕಾರ್ಯಾಚರಣೆ ಮುಂದುವೆರೆದಿದೆ. ಘಟನೆ ನಡೆದಾಗ ಶಾಲೆಯೊಳಗೆ ಎಷ್ಟು ಜನರಿದ್ದರು ಎಂಬುದು ಇನ್ನು ಸ್ಪಷ್ಟವಾಗಿಲ್ಲ.


ಭಾನುವಾರದಿಂದ ದೇಶದಲ್ಲಿ ಮುಂಗಾರು ಮಳೆ ಆರ್ಭಟಿಸುತ್ತಿದ್ದು, ಕಾಕ್ಸ್ ಬಜಾರ್‌ನಲ್ಲಿ ಹಲವಾರು ಮಾರಣಾಂತಿಕ ಭೂಕುಸಿತಗಳು ವರದಿಯಾಗಿವೆ. ಮ್ಯಾನ್ಮಾರ್‌ನಲ್ಲಿ ನಡೆದ ಮಿಲಿಟರಿ ದೌರ್ಜನ್ಯಕ್ಕೆ ಹೆದರಿ ಓಡಿಬಂದ 10 ಲಕ್ಷಕ್ಕೂ ಹೆಚ್ಚು ರೋಹಿಂಗ್ಯಾ ನಿರಾಶ್ರಿತರು ಇಲ್ಲಿನ ವಿಶ್ವದ ಅತಿ ದೊಡ್ಡ ನಿರಾಶ್ರಿತರ ವಸತಿಯಲ್ಲಿ ವಾಸಿಸುತ್ತಿದ್ದಾರೆ.

ಜುಲೈ 5 ರಿಂದ ಚಟ್ಟೋಗ್ರಾಮ್ ಮತ್ತು ಕಾಕ್ಸ್ ಬಜಾರ್ ಜಿಲ್ಲೆಗಳಲ್ಲಿ ಭಾರಿ ಮಳೆಯಿಂದ ಉಂಟಾದ ಭೂಕುಸಿತದಲ್ಲಿ ರೋಹಿಂಗ್ಯಾಗಳು ಸೇರಿದಂತೆ ಕನಿಷ್ಠ 19 ಜನರು ಸಾವನ್ನಪ್ಪಿದ್ದಾರೆ ಎಂದು ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ.


ಚಟ್ಟೋಗ್ರಾಮ್ ವಿಭಾಗದ ಆರೋಗ್ಯ ನಿರ್ದೇಶಕ ಡಾ. ಶೇಖ್ ಫಜ್ಲೇ ರಬ್ಬಿ ಮಾತನಾಡಿ, ಜುಲೈ 5 ರಿಂದ ಜುಲೈ 9 ರ ಬೆಳಗಿನವರೆಗೆ ವಿಭಾಗದ ಎಲ್ಲಾ 11 ಜಿಲ್ಲೆಗಳ ದತ್ತಾಂಶವನ್ನು ಪರಿಶೀಲಿಸಿದ ನಂತರ ಈ ಅಂಕಿ-ಅಂಶಗಳನ್ನು ಸಂಗ್ರಹಿಸಲಾಗಿದೆ ಎಂದು ಹೇಳಿದರು.

ಭೂಕುಸಿತದಿಂದ ಚಟ್ಟೋಗ್ರಾಮ್‌ನಲ್ಲಿ ನಾಲ್ಕು ಮತ್ತು ಕಾಕ್ಸ್ ಬಜಾರ್‌ನಲ್ಲಿ 15 ಜನರು ಸಾವನ್ನಪ್ಪಿದ್ದಾರೆ ಎಂದು ಅವರು ತಿಳಿಸಿದರು.

ಇದರ ಜೊತೆಗೆ, ಚಟ್ಟೋಗ್ರಾಮ್, ಕಾಕ್ಸ್ ಬಜಾರ್ ಮತ್ತು ರಂಗಮತಿ ಜಿಲ್ಲೆಗಳಲ್ಲಿ ಎಂಟು ಜನರು ಗಾಯಗೊಂಡಿದ್ದು, ಪ್ರಸ್ತುತ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ನಿರಂತರ ಭಾರಿ ಮಳೆಯು ಚಟ್ಟೋಗ್ರಾಮ್ ಮತ್ತು ಚಟ್ಟೋಗ್ರಾಮ್ ಹಿಲ್ ಟ್ರ್ಯಾಕ್ಟ್ಸ್ (ಬೆಟ್ಟ ಪ್ರದೇಶ) ನಾದ್ಯಂತ ವ್ಯಾಪಕ ಜಲಾವೃತ, ಭೂಕುಸಿತ ಮತ್ತು ತೀವ್ರ ಸಾರ್ವಜನಿಕ ಸಂಕಷ್ಟಕ್ಕೆ ಕಾರಣವಾಗಿದೆ.

ಹವಾಮಾನ ಸುಧಾರಿಸುವವರೆಗೆ ಹೆಚ್ಚಿನ ಪ್ರಾಣಹಾನಿ ತಪ್ಪಿಸಲು ಭೂಕುಸಿತದ ಅಪಾಯವಿರುವ ಗುಡ್ಡಗಾಡು ಪ್ರದೇಶಗಳಲ್ಲಿ ವಾಸಿಸುವ ನಿವಾಸಿಗಳು ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಅಧಿಕಾರಿಗಳು ಒತ್ತಾಯಿಸಿದ್ದಾರೆ.



📢 ಸುದ್ದಿವಾಣಿ WhatsApp — ತಕ್ಷಣದ ಬ್ರೇಕಿಂಗ್ ನ್ಯೂಸ್ ಪಡೆಯಿರಿ!