ಬೀಜಿಂಗ್ 09 : ಚೀನಾದ ಪೂರ್ವ ಫುಜಿಯನ್ ಪ್ರಾಂತ್ಯದ ಶೂ ಕಾರ್ಖಾನೆಯೊಂದರಲ್ಲಿ ಗುರುವಾರ ಸಂಭವಿಸಿದ ಭೀಕರ ಅಗ್ನಿ ಅವಘಡದಲ್ಲಿ 28 ಜನರು ಸಾವನ್ನಪ್ಪಿದ್ದಾರೆ .

ಬಲಿಪಶುಗಳನ್ನು ರಕ್ಷಿಸಲು, ಅವರಿಗೆ ಚಿಕಿತ್ಸೆ ನೀಡಲು ಮತ್ತು ಘಟನೆಯ ಬಗ್ಗೆ ತನಿಖೆ ನಡೆಸಲು ಚೀನಾ ಅಧ್ಯಕ್ಷ ಷಿ ಜಿನ್‌ಪಿಂಗ್ ಸಂಪೂರ್ಣ ಪ್ರಯತ್ನಕ್ಕೆ ಆದೇಶಿಸಿದ್ದಾರೆ. ಜಿನ್‌ಜಿಯಾಂಗ್‌ನ ಚೆಂಡೈ ಟೌನ್‌ಶಿಪ್‌ನ ಜಿಯಾಂಗ್ಟೌ ಗ್ರಾಮದ ಕೈಟುವೊ ರೋಡ್ ಈಸ್ಟ್‌ನಲ್ಲಿರುವ 'ಹುಯಿಟೆಂಗ್ ಶೂಸ್' ಕಾರ್ಖಾನೆಯಲ್ಲಿ ಮಧ್ಯಾಹ್ನ 12:04 ಕ್ಕೆ ಬೆಂಕಿ ಕಾಣಿಸಿಕೊಂಡಿರುವುದಾಗಿ ವರದಿಯಾಗಿದೆ.
ಕ್ವಾನ್‌ಝೌ ನಗರದ ಅಗ್ನಿಶಾಮಕ ಅಧಿಕಾರಿಗಳು 183 ಅಗ್ನಿಶಾಮಕ ಸಿಬ್ಬಂದಿ ಮತ್ತು 35 ಅಗ್ನಿಶಾಮಕ ವಾಹನಗಳು ಸೇರಿದಂತೆ ತುರ್ತು ರಕ್ಷಣಾ ತಂಡಗಳನ್ನು ಸ್ಥಳಕ್ಕೆ ಕಳುಹಿಸಿದ್ದಾರೆ ಎಂದು ಸರ್ಕಾರಿ ಪ್ರಸಾರಕ ಸಿಸಿಟಿವಿ (CCTV) ವರದಿ ಮಾಡಿದೆ. ಗುರುವಾರ ತಡಸಂಜೆ ವೇಳೆಗೆ ಬೆಂಕಿಯನ್ನು ಹದೋಟಿಗೆ ತರಲಾಗಿದೆ ಎಂದು ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ.
ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ವೀಡಿಯೊ ತುಣುಕುಗಳು ಕಟ್ಟಡದಿಂದ ಆಕಾಶದೆತ್ತರಕ್ಕೆ ಚಿಮ್ಮುತ್ತಿದ್ದ ಜ್ವಾಲೆಗಳು ಮತ್ತು ದಟ್ಟವಾದ ಕಪ್ಪು ಹೊಗೆಯನ್ನು ತೋರಿಸಿವೆ. ಕಟ್ಟಡದ ಮೇಲ್ಛಾವಣಿಯ ಮೇಲೆ ಸಿಲುಕಿಕೊಂಡಿದ್ದ ಹಲವಾರು ಜನರು ಸಹಾಯಕ್ಕಾಗಿ ಕೈಸಂಜ್ಞೆ ಮಾಡುತ್ತಿರುವುದು ಕಂಡುಬಂದಿದೆ. ರಕ್ಷಣಾ ಕಾರ್ಯಾಚರಣೆಗಾಗಿ ಹೆಲಿಕಾಪ್ಟರ್ ಅನ್ನು ಸಹ ನಿಯೋಜಿಸಲಾಗಿತ್ತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಸಿಲುಕಿರುವವರನ್ನು ರಕ್ಷಿಸಲು, ಗಾಯಾಳುಗಳಿಗೆ ಚಿಕಿತ್ಸೆ ನೀಡಲು ಮತ್ತು ಅವರ ಕುಟುಂಬಗಳಿಗೆ ಸಾಂತ್ವನ ಹಾಗೂ ಮುಂದಿನ ವ್ಯವಸ್ಥೆಗಳನ್ನು ಮಾಡಲು "ಸಂಪೂರ್ಣ ಪ್ರಯತ್ನ" ನಡೆಸುವಂತೆ ಷಿ ಜಿನ್‌ಪಿಂಗ್ ಆದೇಶಿಸಿದ್ದಾರೆ. ಇದರೊಂದಿಗೆ "ಬೆಂಕಿಯ ಕಾರಣದ ಬಗ್ಗೆ ತಕ್ಷಣದ ವಿಚಾರಣೆ ನಡೆಸಿ, ತಪ್ಪಿತಸ್ಥರನ್ನು ಹೊಣೆಗಾರರನ್ನಾಗಿ ಮಾಡಬೇಕು" ಎಂದು ಅವರು ಒತ್ತಾಯಿಸಿದ್ದಾರೆ.
ಚೀನಾದಲ್ಲಿ ಈ ವರ್ಷ ಈಗಾಗಲೇ ಹಲವಾರು ಪ್ರಮುಖ ಉತ್ಪಾದನಾ ಸುರಕ್ಷತಾ ಅಪಘಾತಗಳು ಸಂಭವಿಸಿರುವುದನ್ನು ಉಲ್ಲೇಖಿಸಿದ ಅವರು, ದೇಶದಾದ್ಯಂತದ ಎಲ್ಲಾ ವಲಯಗಳು ಮತ್ತು ಸಂಬಂಧಿತ ಇಲಾಖೆಗಳು ಈ ದುರಂತಗಳಿಂದ ಪಾಠ ಕಲಿಯಬೇಕು, ಅಡಗಿರುವ ಅಪಾಯಗಳನ್ನು ತೊಡೆದುಹಾಕಲು ಸಮಗ್ರ ತಪಾಸಣೆ ನಡೆಸಬೇಕು ಮತ್ತು ಸಾರ್ವಜನಿಕ ಜೀವ ಹಾಗೂ ಆಸ್ತಿಯನ್ನು ರಕ್ಷಿಸಲು ಇಂತಹ ದೊಡ್ಡ ಅಪಘಾತಗಳನ್ನು ತಡೆಯಬೇಕು ಎಂದು ಒತ್ತಾಯಿಸಿದರು.
ಪ್ರಧಾನಿ ಲಿ ಕಿಯಾಂಗ್ ಕೂಡ ನಿರ್ದೇಶನವೊಂದನ್ನು ಹೊರಡಿಸಿದ್ದು, ತಕ್ಷಣದ ಹುಡುಕಾಟ ಮತ್ತು ರಕ್ಷಣಾ ಕಾರ್ಯಾಚರಣೆಗಳು, ದುರಂತದ ನಂತರದ ನಿರ್ವಹಣೆ ಮತ್ತು ಮುಂದಿನ ಅನಾಹುತಗಳನ್ನು ತಡೆಗಟ್ಟಲು ಕ್ರಮಗಳನ್ನು ತೆಗೆದುಕೊಳ್ಳುವಂತೆ ಕರೆ ನೀಡಿದ್ದಾರೆ. ಇಂತಹ ಘೋರ ಘಟನೆಗಳು ಮರುಕಳಿಸದಂತೆ ತಡೆಯಲು ಸ್ಥಳೀಯ ಅಧಿಕಾರಿಗಳಿಗೆ ಮಾರ್ಗದರ್ಶನ ಮತ್ತು ಮೇಲ್ವಿಚಾರಣೆ ನೀಡುವಂತೆ ಲಿ ಕಿಯಾಂಗ್ ಅವರು ರಾಜ್ಯ ಮಂಡಳಿಯ ಕಾರ್ಯಸ್ಥಳ ಸುರಕ್ಷತಾ ಸಮಿತಿಗೆ ತಿಳಿಸಿದ್ದಾರೆ.
ಚೆಂಡೈ ಪ್ರದೇಶವು ಜಿನ್‌ಜಿಯಾಂಗ್‌ನ ಬೃಹತ್ ಪಾದರಕ್ಷೆ ಉದ್ಯಮದ ಕೇಂದ್ರಬಿಂದುವಾಗಿದೆ. ಇಲ್ಲಿನ ತಯಾರಕರು ವಾರ್ಷಿಕವಾಗಿ 1 ಬಿಲಿಯನ್‌ಗಿಂತಲೂ (100 ಕೋಟಿ) ಹೆಚ್ಚು ಜೋಡಿ ಕ್ರೀಡಾ ಶೂಗಳನ್ನು (sports shoes) ಉತ್ಪಾದಿಸುತ್ತಾರೆ. ಪ್ರಪಂಚದಾದ್ಯಂತ ಉತ್ಪಾದನೆಯಾಗುವ ಪ್ರತಿ ಐದು ಜೋಡಿ ಅಥ್ಲೆಟಿಕ್ ಶೂಗಳಲ್ಲಿ ಸರಿಸುಮಾರು ಒಂದು ಜೋಡಿ ಜಿನ್‌ಜಿಯಾಂಗ್‌ನಲ್ಲಿ ತಯಾರಾಗುತ್ತದೆ.