ಭಟ್ಕಳ,ಜುಲೈ 22 : ಅಪ್ರಾಪ್ತ ಬಾಲಕಿಯರ ಅಶ್ಲೀಲ ವಿಡಿಯೊ ಮತ್ತು ಚಿತ್ರಗಳನ್ನು ಇತರರಿಗೆ ರವಾನೆ ಮಾಡುತ್ತಿದ್ದ ಯುವಕನನ್ನು ಶಹರ ಠಾಣಾ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಎಂಜಿನಿಯರಿಂಗ್ ಪದವೀಧರನಾಗಿರುವ ಆರೋಪಿ ಅವಿವಾಹಿತನಾಗಿದ್ದು ಸರ್ಕಾರಿ ಕಚೇರಿಯೊಂದರಲ್ಲಿ ಹೊರಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದಾನೆ ಎಂದು ವಿಚಾರಣೆ ವೇಳೆ ಗೊತ್ತಾಗಿದೆ. ಆತ ವಿವಿಧ ಆನ್‌ಲೈನ್ ಪೋರ್ಟಲ್‌ಗಳಲ್ಲಿ ಈ ಅಶ್ಲೀಲ ವಿಡಯೊಗಳನ್ನು ವೀಕ್ಷಿಸಿ, ಡೌನ್‌ಲೋಡ್ ಮಾಡಿ ಮತ್ತೊಬ್ಬರಿಗೆ ರವಾನಿಸುತ್ತಿದ್ದ ಎನ್ನಲಾಗಿದೆ. ಬಾಲಕಿಯರನ್ನು ಒಳಗೊಂಡ ಅಶ್ಲೀಲ ಚಿತ್ರಗಳು ಹಾಗೂ ವಿಡಿಯೊಗಳನ್ನು ವಿವಿಧ ಆನ್‌ಲೈನ್ ಪೋರ್ಟಲ್‌ಗಳಲ್ಲಿ ಆತ ವೀಕ್ಷಿಸುತ್ತಿದ್ದ. ಜೊತೆಗೆ ಅವುಗಳನ್ನು ತನ್ನ ಮೊಬೈಲ್‌ನಲ್ಲಿ ಡೌನ್‌ಲೋಡ್ ಮಾಡಿಕೊಂಡು ಸಂಗ್ರಹಿಸಿಟ್ಟಿದ್ದಾನೆ ಎಂಬುದು ಪೊಲೀಸ್ ತನಿಖೆಯಿಂದ ಗೊತ್ತಾಗಿದೆ. ಮೊಬೈಲ್‌ನಲ್ಲಿರುವ ಡಿಜಿಟಲ್ ಸಾಕ್ಷ್ಯಗಳನ್ನು ವಿಧಿವಿಜ್ಞಾನ ಪರೀಕ್ಷೆಗೆ ಕಳುಹಿಸಿ, ಅದರ ವರದಿ ಆಧರಿಸಿ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ’ ಎಂದು ಪೊಲೀಸರು ತಿಳಿಸಿದ್ದಾರೆ.