BREAKING
ಸಿನಿಮಾ

Bengaluru 'ಕರಾವಳಿ' ಚಿತ್ರದ ವಿವಾದ ಕುರಿತು ಅಸಲಿ ಕಾರಣ ಬಿಚ್ಚಿಟ್ಟ ನಟ ಪ್ರಜ್ವಲ್ ದೇವರಾಜ್



ಬೆಂಗಳೂರು, ಜುಲೈ 11 : ರಾಜ್ಯಾದ್ಯಾಂತ ಭಾರಿ ವಿವಾದ ಸೃಷ್ಟಿಸಿರುವ ಕರಾವಳಿ ಸಿನಿಮಾದ ಬಗ್ಗೆ ನಟ ಪ್ರಜ್ವಲ್ ದೇವರಾಜ್ ಅಧಿಕೃತ ಹೇಳಿಕೆ ಬಿಡುಗಡೆ ಮಾಡಿದ್ದಾರೆ. ಚಿತ್ರತಂಡವೇ ತಮ್ಮನ್ನು ಪ್ರಚಾರದಿಂದ ಹೊರಗಿಟ್ಟಿದೆ ಎಂದು ಬಹಿರಂಗಪಡಿಸಿದ್ದಾರೆ. ತಮ್ಮ ಅನುಮತಿಯಿಲ್ಲದೆ ಬೇರೆಯವರಿಂದ ಡಬ್ಬಿಂಗ್ ಮಾಡಿಸಿರುವುದು ಮತ್ತು ಸಂಭಾವನೆ ಬಾಕಿ ಉಳಿಸಿಕೊಂಡಿದ್ದೇ ವಿವಾದಕ್ಕೆ ಅಸಲಿ ಕಾರಣ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಕರಾವಳಿ’ ಸಿನಿಮಾದ  ಸುತ್ತ ಸಾಕಷ್ಟು ವಿವಾದ ಎದ್ದಿದೆ. ಚಿತ್ರದ ನಿರ್ಮಾಣ ಸಂಸ್ಥೆ ಹಾಗೂ ನಿರ್ದೇಶಕ ಗುರುದತ್ ಗಾಣಿಗ ಅವರು ಸಾರ್ವಜನಿಕವಾಗಿ ನೀಡುತ್ತಿರುವ ಹೇಳಿಕೆಗಳಿಗೆ ಅರು ಸ್ಪಷ್ಟನೆ ಕೊಟ್ಟಿದ್ದಾರೆ.
‘ಚಿತ್ರದ ಟ್ರೇಲರ್ ಬಿಡುಗಡೆಯಾದಾಗ, ನನ್ನ ಯಾವುದೇ ಪೂರ್ವ ಮಾಹಿತಿ ಅಥವಾ ಅನುಮತಿಯಿಲ್ಲದೆ ನನ್ನ ಪಾತ್ರಕ್ಕೆ ಮತ್ತೊಬ್ಬರಿಂದ ಡಬ್ಬಿಂಗ್ ಮಾಡಿಸಲಾಗಿತ್ತು. ಅಷ್ಟೇ ಅಲ್ಲದೆ, ನನಗೆ ಒಪ್ಪಿಗೆಯಾಗಿದ್ದ ಸಂಭಾವನೆಯೂ ಸಂಪೂರ್ಣವಾಗಿ ಪಾವತಿಯಾಗಿರಲಿಲ್ಲ. ಇದೇ ಕಾರಣಕ್ಕೆ ನಾನು ಟ್ರೈಲರ್ ಬಿಡುಗಡೆ ಕಾರ್ಯಕ್ರಮಕ್ಕೆ ಗೈರಾಗಿದ್ದೆ’ ಎಂದು ಪ್ರಜ್ವಲ್ ಹೇಳಿಕೆಯಲ್ಲಿ ಬರೆದುಕೊಂಡಿದ್ದಾರೆ.
ಪ್ರಜ್ವಲ್ ದೇವರಾಜ್ ಅವರು ಸ್ವಲ್ಪ ತೆಳ್ಳಗಾಗಬೇಕಿತ್ತು, ಆದರೆ ಅವರು ಅದನ್ನು ಮಾಡಿಲ್ಲ ಎಂದು ಚಿತ್ರತಂಡ ಹೇಳಿಕೆ ನೀಡಿತ್ತು. ಆದರೆ ಇದನ್ನು ನಿರಾಕರಿಸಿರುವ ಪ್ರಜ್ವಲ್, ‘ನನ್ನ ಸಿಕ್ಸ್-ಪ್ಯಾಕ್ ಲುಕ್‌ಗೂ ಈ ವಿವಾದಕ್ಕೂ ಯಾವುದೇ ಸಂಬಂಧವಿಲ್ಲ. ಅನುಮತಿಯಿಲ್ಲದ ಡಬ್ಬಿಂಗ್ ಮತ್ತು ಬಾಕಿ ಇದ್ದ ಸಂಭಾವನೆಯೇ ಇದಕ್ಕೆ ಮೂಲ ಕಾರಣ. ಬಾಕಿ ಹಣ ಪಾವತಿಸಿದ ತಕ್ಷಣ ಡಬ್ಬಿಂಗ್ ಮಾಡಲು ಮತ್ತು ಪ್ರಚಾರದಲ್ಲಿ ಭಾಗವಹಿಸಲು ನಾನು ಸಿದ್ಧನಿದ್ದೆ’ ಎಂದಿದ್ದಾರೆ.

ಪ್ರಚಾರದಿಂದ ದೇವರಾಜ್ ಅವರನ್ನು ಹೊರಗಿಟ್ಟಿದ್ದ ಚಿತ್ರತಂಡ

ಟ್ರೇಲರ್ ಬಿಡುಗಡೆಯಾದ ಮರುದಿನ ಜಿಎಸ್‌ಟಿ ಹೊರತುಪಡಿಸಿ ಬಾಕಿ ಸಂಭಾವನೆಯನ್ನು ಪಾವತಿಸಲಾಯಿತು ಎಂದು ಪ್ರಜ್ವಲ್ ಹೇಳಿದ್ದಾರೆ. ‘ಹಣ ಸಂದಾಯವಾದ ಬೆನ್ನಲ್ಲೇ, ಚಿತ್ರತಂಡವು ನನ್ನ ಮ್ಯಾನೇಜರ್‌ಗೆ ಕರೆ ಮಾಡಿ ಇನ್ನು ಮುಂದೆ ಡಬ್ಬಿಂಗ್​​ಗೆ ಬರಬೇಡಿ, ಚಿತ್ರದ ಪ್ರಚಾರದಲ್ಲಿ ಭಾಗವಹಿಸೋದು ಬೇಡ ಎಂದಿದ್ದಾರೆ. ಹೀಗಾಗಿ ಚಿತ್ರದಿಂದ ದೂರ ಉಳಿದಿರುವುದು ನನ್ನ ಸ್ವಂತ ನಿರ್ಧಾರವಲ್ಲ’ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ತಮ್ಮ ಧ್ವನಿ ಈ ಪಾತ್ರಕ್ಕೆ ಸೂಕ್ತವಲ್ಲ ಎಂಬ ಚಿತ್ರತಂಡದ ಸಾರ್ವಜನಿಕ ಹೇಳಿಕೆಗಳ ಬಗ್ಗೆ ಬೇಸರ ವ್ಯಕ್ತಪಡಿಸಿರುವ ನಟ, ‘ನನಗೆ ಡಬ್ಬಿಂಗ್ ಮಾಡಲು ಅವಕಾಶವನ್ನೇ ನೀಡದೆ ಈ ರೀತಿ ಹೇಳಿರುವುದು ನೋವುಂಟು ಮಾಡಿದೆ. ಎರಡು ದಶಕಗಳಿಗೂ ಹೆಚ್ಚು ಕಾಲ ಚಿತ್ರರಂಗದಲ್ಲಿ ನಾನು ಗಳಿಸಿರುವ ವೃತ್ತಿಪರ ಗೌರವ ಮತ್ತು ಪ್ರೇಕ್ಷಕರ ಪ್ರೀತಿಗೆ ಧಕ್ಕೆ ತರುವ ಇಂತಹ ಬೆಳವಣಿಗೆಗಳು ಬೇಸರ ತರಿಸಿವೆ’ ಎಂದಿದ್ದಾರೆ.

📢 ಸುದ್ದಿವಾಣಿ WhatsApp — ತಕ್ಷಣದ ಬ್ರೇಕಿಂಗ್ ನ್ಯೂಸ್ ಪಡೆಯಿರಿ!