ಬೆಂಗಳೂರು, ಜುಲೈ 01 : ರಾಜ್ಯ ರಾಜಧಾನಿ ಬೆಂಗಳೂರಿನ ಡೇ ಕೇರ್ ಸೆಂಟರ್‌ನಲ್ಲಿ ಅಘಾತಕಾರಿ ಅಂಶವೊಂದು ಬೆಳಕಿಗೆ ಬಂದಿದೆ. ಡೇ ಕೇರ್ ಸೆಂಟರ್‌ನಲ್ಲಿ ಎರಡು ವರ್ಷದ ಪುಟ್ಟ ಮಕ್ಕಳಿಗೆ ಅಮಾನವೀಯವಾಗಿ ಚಿತ್ರಹಿಂಸೆ ನೀಡುತ್ತಿದ್ದು ಈ ಬಗ್ಗೆ 5 ಮಹಿಳಾ ಕೇರ್‌ಟೇಕರ್‌ಗಳ ವಿರುದ್ಧ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ.

ಬೆಂಗಳೂರು ನಗರದ HAL ಆವರಣದಲ್ಲಿರುವ 'ಕ್ಯಾಪ್‌ಜೆಮಿನಿ' (Capegemini) ಕಂಪನಿಯ ಆವರಣದಲ್ಲಿನ ಪುಟ್ಟ ಮಕ್ಕಳ ಡೇ ಕೇರ್ ಸೆಂಟರಿನಲ್ಲಿ ಈ ದೌರ್ಜನ್ಯ ನಡೆದಿದೆ.
ಡೇ ಕೇರ್‌ನಲ್ಲಿ ದಾಖಲಾಗಿರುವ ವಿಡಿಯೋಗಳ ಆಧಾರದ ಮೇಲೆ ದೂರು ನೀಡಲಾಗಿದ್ದು, ಅದರಲ್ಲಿರುವ ದೃಶ್ಯಗಳು ಎದೆಝಲ್ಲೆನಿಸುವಂತಿವೆ. ಐಟಿ ಕಂಪನಿಯಲ್ಲಿ ಕೆಲಸ ಮಾಡುವ ಉದ್ಯೋಗಿಗಳು ತಮ್ಮ ಮಕ್ಕಳನ್ನು ಇಲ್ಲಿ ಬಿಟ್ಟು ಕೆಲಸಕ್ಕೆ ಹೋಗುತ್ತಿದ್ದರು. ಪುಟ್ಟ ಮಕ್ಕಳು ತುಂಟಾಟ ಮಾಡಿದಾಗ, ಅಥವಾ ಅತ್ತಾಗ ಅವರನ್ನು ಸುಮ್ಮನಿರಿಸಲು ಸಿಬ್ಬಂದಿ ಅತ್ಯಂತ ಕ್ರೂರ ಹಾದಿ ಹಿಡಿಯುತ್ತಿದ್ದರು ಎಂದು ಆರೋಪಿಸಲಾಗಿದ್ದು ಈ ಬಗ್ಗೆಗಿನ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಡೇ ಕೇರ್ ಸಿಬ್ಬಂದಿ ಪುಟ್ಟ ಮಕ್ಕಳನ್ನು ಫ್ರಂಟ್ ಲೋಡ್ ವಾಷಿಂಗ್ ಮೆಷಿನ್ ಒಳಗೆ ಕೂರಿಸುತ್ತಿದ್ದರು. ಅಷ್ಟೇ ಅಲ್ಲದೆ, ಮಕ್ಕಳನ್ನು ಬಲವಂತವಾಗಿ ವೆಸ್ಟರ್ನ್ ಶೌಚಾಲಯದ ಮೇಲೆ ಕೂರಿಸಿ, ಅವರ ಬಾಯಿಗೆ ಶೌಚಾಲಯದ ಜೆಟ್ ಸ್ಪ್ರೇ ಮೂಲಕ ನೀರು ಹೊಡೆಯುತ್ತಿದ್ದರು. ಮಕ್ಕಳನ್ನು ಬಾತ್‌ರೂಮ್‌ನಲ್ಲಿ ಕೂಡಿ ಹಾಕಿ ಬೆದರಿಸುವುದು ಮತ್ತು ದೈಹಿಕವಾಗಿ ಹಿಂಸೆ ನೀಡಿರುವುದು ವಿಡಿಯೋದಲ್ಲಿ ಸೆರೆಯಾಗಿದ್ದು ಭಾರಿ ಆಕ್ರೋಶ ವ್ಯಕ್ತವಾಗಿದೆ.
ಮಾಹಿತಿ ಪಡೆದ ಪೊಲೀಸರು ಕೂಡಲೇ ಕಾರ್ಯಪ್ರವೃತ್ತರಾಗಿ ಡೇ ಕೇರ್ ನ ಐವರು ಸಿಬಂದಿಗಳ ಮೇಲೆ FIR ದಾಖಲು ಮಾಡಿದ್ದು ಬಾಲಾಪರಾಧ ನ್ಯಾಯ (ಮಕ್ಕಳ ಆರೈಕೆ ಮತ್ತು ರಕ್ಷಣೆ) ಕಾಯ್ದೆಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. "ಸದ್ಯ ಎಫ್‌ಐಆರ್ ದಾಖಲಾಗಿದ್ದು, ಶೀಘ್ರದಲ್ಲೇ ಆರೋಪಿ ಮಹಿಳೆಯರನ್ನು ವಿಚಾರಣೆಗೆ ಒಳಪಡಿಸಲಾಗುವುದು" ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.