ಬಂಟ್ವಾಳ, ಜುಲೈ20 : ಬಂಟ್ವಾಳ ಬಿಸಿರೋಡ್ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ನಡೆದ ಯುವತಿ ಲಾವಣ್ಯಳ ಕೊಲೆ ಆರೋಪಿ ಚೇತನ್‌ಗೆ ಮಂಗಳೂರಿನ ಸರ್ಕಾರಿ ವೆನ್ಲಾಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದೆ. ಆರೋಪಿ ಸುತ್ತ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. ಲಾವಣ್ಯಳ ಹತ್ಯೆ ಮಾಡಿದ ಬಳಿಕ ತಪ್ಪಿಸಿಕೊಂಡಿದ್ದ ಆರೋಪಿ ಚೇತನ್ ಪೊಲೀಸ್ ಬಂಧನದ ವೇಳೆ ವಿಷ ಸೇವನೆ ಮಾಡಿದ್ದ. ಈ ಹಿನ್ನೆಲೆಯಲ್ಲಿ ಜಿಲ್ಲಾ ಆಸ್ಪತ್ರೆಯ ವೈದ್ಯರು ನೀಡಿರುವ ವೈದ್ಯಕೀಯ ಸಲಹೆಯಂತೆ, ಸುಮಾರು ಐದು ದಿನಗಳ ಕಾಲ ವೈದ್ಯಕೀಯ ನಿಗಾದಲ್ಲಿಟ್ಟು ಆರೋಗ್ಯ ಸ್ಥಿತಿಯನ್ನು ನಿರಂತರವಾಗಿ ಪರಿಶೀಲಿಸಬೇಕಿದೆ. ಇದಕ್ಕಾಗಿ ಐಸಿಯುನಲ್ಲೇ ಚಿಕಿತ್ಸೆ ಮುಂದುವರಿಸಲಾಗಿದೆ.ಆರೋಪಿ ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾನೆ ಎನ್ನಲಾಗಿದೆ. ಸಂಪೂರ್ಣ ಗುಣಮುಖನಾದ ಬಳಿಕ ವೈದ್ಯರು ಆರೋಗ್ಯವನ್ನು ಪ್ರಮಾಣೀಕರಿಸಲಿದ್ದು ಬಳಿಕ, ನ್ಯಾಯಾಲಯದ ಮುಂದೆ ಹಾಜರುಪಡಿಸಿ ಕಾನೂನು ಪ್ರಕ್ರಿಯೆ ಅನುಸರಿಸಲಾಗುತ್ತದೆ. ಪ್ರಕರಣದ ತನಿಖೆಯನ್ನು ಬಂಟ್ವಾಳ ನಗರ ಠಾಣೆ ಪೊಲೀಸರು ಮುಂದುವರಿಸಿದ್ದು, ಆರೋಪಿಯ ವೈದ್ಯಕೀಯ ಚಿಕಿತ್ಸೆ ಪೂರ್ಣಗೊಂಡ ಬಳಿಕ ಮುಂದಿನ ಕಾನೂನು ಕ್ರಮಗಳನ್ನು ಕೈಗೊಳ್ಳಲಿದ್ದಾರೆ.
