ಬಂಟ್ವಾಳ, ಜುಲೈ 20 : ಮಳೆಯ ಕಾರಣ ಚಾಲಕನ ನಿಯಂತ್ರಣ ತಪ್ಪಿ ಚರಂಡಿಗೆ ಬಿದ್ದ ಕಾರಿನೊಳಗಿದ್ದ ಮಗು, ಮಹಿಳೆ ಚಾಲಕನನ್ನು ಸಮಯಪ್ರಜ್ಞೆ ಮೆರೆದು ರಕ್ಷಿಸಿದ ವಿಟ್ಲ ಠಾಣಾ PSI ರಾಮಕೃಷ್ಣ ಮತ್ತು ತಂಡದ ಕಾರ್ಯಕ್ಕೆ ವ್ಯಾಪಕ ಶ್ಲಾಘನೆ ವ್ಯಕ್ತವಾಗಿದೆ.
ವಿಟ್ಲ ಸೂರಿಕುಮೇರು ಪೆಟ್ರೋಲ್ ಬಂಕ್ ಬಳಿ ಕಾರೊಂದು ನಿಯಂತ್ರಣ ತಪ್ಪಿ ರಸ್ತೆ ಬದಿಯ ಚರಂಡಿಗೆ ಬಿದ್ದು ಕಾರಿನೊಳಗೆ ಮಗು, ಮಹಿಳೆ ಹಾಗೂ ಚಾಲಕ ಸಿಲುಕಿಕೊಂಡಿದ್ದರು. ಈ ವೇಳೆ ಸಮೀಪದಲ್ಲೇ ಇದ್ದ ವಿಟ್ಲ ಠಾಣೆಯ ಎಸ್‌ಐ ರಾಮಕೃಷ್ಣ ಹಾಗೂ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಅವರನ್ನು ರಕ್ಷಿಸಿದ್ದಾರೆ. ಕಾರಿನೊಳಗೆ ಸಿಲುಕಿದ್ದ ಮಗು, ಮಹಿಳೆ ಹಾಗೂ ಚಾಲಕನನ್ನು ಸುರಕ್ಷಿತವಾಗಿ ಹೊರತೆಗೆದು ರಕ್ಷಿಸುವಲ್ಲಿ ಎಸ್‌ಐ ರಾಮಕೃಷ್ಣ ಅವರು ಸಮಯಪ್ರಜ್ಞೆ ಮತ್ತು ಧೈರ್ಯ ಪ್ರದರ್ಶಿಸಿದರು. ಅಳುತ್ತಿದ್ದ ಪುಟ್ಟ ಮಗುವನ್ನು ತಮ್ಮ ಕೈಯಲ್ಲಿ ಎತ್ತಿಕೊಂಡು ಸುರಕ್ಷಿತ ಸ್ಥಳಕ್ಕೆ ಕರೆತಂದ ದೃಶ್ಯ ಸಮೀಪದ ಸಿಸಿ ಟಿವಿಯಲ್ಲಿ ಸೆರೆಯಾಗಿದೆ.
ಸದ್ಯ ಈ ಸಿಸಿ ಟಿವಿ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, "ಇಂತಹ ಅಧಿಕಾರಿಗಳೇ ಪೊಲೀಸ್ ಇಲಾಖೆಯ ಹೆಮ್ಮೆ", "ಕರ್ತವ್ಯಕ್ಕಿಂತ ಮಾನವೀಯತೆಯನ್ನು ಮೊದಲಿಗಾಗಿಟ್ಟ ಅಧಿಕಾರಿ", "ಸಮಯೋಚಿತ ಕಾರ್ಯದಿಂದ ಅಮೂಲ್ಯ ಜೀವಗಳನ್ನು ಉಳಿಸಿದ ನಿಜವಾದ ಜನಸೇವಕ" ಎಂಬ ಪ್ರಶಂಸೆಯ ಮಾತುಗಳು ವ್ಯಾಪಕವಾಗಿ ಹರಿದಾಡುತ್ತಿವೆ.ಎಸ್‌ಐ ರಾಮಕೃಷ್ಣ ಹಾಗೂ ಸಿಬ್ಬಂದಿ ಕರಣಾಕರ ಅವರ ಕರ್ತವ್ಯನಿಷ್ಠೆ, ಮಾನವೀಯತೆ ಮತ್ತು ಕ್ಷಿಪ್ರ ಕಾರ್ಯಾಚರಣೆ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ.
