ಮಂಗಳೂರು, ಜುಲೈ 22 : ಇದೇ ಮೊದಲ ಬಾರಿಗೆ 72ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯಲ್ಲಿ 'ಮಿಥ್ಯ' ಕನ್ನಡ ಸಿನಿಮಾದ ಅದ್ಭುತ ಅಭಿನಯಕ್ಕಾಗಿ ಕರಾವಳಿ ಮೂಲದ ಖ್ಯಾತ ರಂಗಭೂಮಿ ಮತ್ತು ಚಲನಚಿತ್ರ ನಟಿ ರೂಪಶ್ರೀ ವರ್ಕಾಡಿ ಅವರಿಗೆ ರಾಷ್ಟ್ರೀಯ ಪ್ರಶಸ್ತಿ ಒಲಿದು ಬಂದಿದೆ. ದೇಶದ ಅತ್ಯುನ್ನತ ರಾಷ್ಟ್ರ ಪ್ರಶಸ್ತಿ ಪಡೆಯುವ ಮೂಲಕ ರೂಪಶ್ರೀ ಹೊಸ ಇತಿಹಾಸ ನಿರ್ಮಿಸಿದ್ದಾರೆ. ಈ ಗೌರವ ಪಡೆದ ತುಳುನಾಡಿನ ಮೊದಲ ಮಹಿಳೆಯಾಗಿದ್ದು ಇಡೀ ಕರ್ನಾಟಕವೇ ಹೆಮ್ಮೆಪಡುವಂತೆ ಮಾಡಿದ್ದಾರೆ. ಕೇವಲ 500 ರೂಪಾಯಿ ಸಂಭಾವನೆ ಯಿಂದ ವೃತ್ತಿ ಜೀವನ ಆರಂಭಿಸಿದ್ದ ರೂಪಶ್ರೀ ಅವರು ಕಳೆದ 20 ವರ್ಷಗಳ ಸುದೀರ್ಘ ವೃತ್ತಿಜೀವನದಲ್ಲಿ ತುಳು, ಕನ್ನಡ, ಬ್ಯಾರಿ, ಕೊಂಕಣಿ ಹಾಗೂ ಅರೆಭಾಷೆ ಸೇರಿದಂತೆ ಒಟ್ಟು 85ಕ್ಕೂ ಹೆಚ್ಚು ಚಿತ್ರಗಳಲ್ಲಿ ಪೋಷಕ ನಟಿಯಾಗಿ ಬಣ್ಣ ಹಚ್ಚಿದ್ದಾರೆ. 19-20ರ ಹರೆಯದಲ್ಲೇ ನಾಟಕಗಳಲ್ಲಿ ತಾಯಿಯ ಪಾತ್ರಗಳನ್ನು ಮಾಡಲು ಆರಂಭಿಸಿ ಸೈ ಎನಿಸಿಕೊಂಡಿದ್ದ ಇವರು ಕಳೆದ 25 ವರ್ಷಗಳಲ್ಲಿ ಕನ್ನಡ ಮತ್ತು ತುಳು ಭಾಷೆಯ 700ಕ್ಕೂ ಹೆಚ್ಚು ನಾಟಕಗಳಲ್ಲಿ ಬರೋಬ್ಬರಿ 4,000ಕ್ಕೂ ಅಧಿಕ ಪ್ರದರ್ಶನಗಳನ್ನು ನೀಡಿ ದಾಖಲೆ ನಿರ್ಮಾಣ ಮಾಡಿದ್ದಾರೆ. ಇದೀಗ ಸುಮಂತ್ ಭಟ್ ನಿರ್ದೇಶನದ 'ಮಿಥ್ಯ' ಕನ್ನಡ ಚಲನಚಿತ್ರದ ಅತ್ಯುತ್ತಮ ಅಭಿನಯಕ್ಕಾಗಿ 72ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳಲ್ಲಿ ಅತ್ಯುತ್ತಮ ಪೋಷಕ ನಟಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡು ತುಳುನಾಡಿನ ಕೀರ್ತಿಯನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ದಿದ್ದಾರೆ.
