ಮಂಗಳೂರು, ನ.02: ಸುರತ್ಕಲ್ ಪೊಲೀಸ್ ಠಾಣೆಯ ಸಿಬ್ಬಂದಿಯ ದೌರ್ಜನ್ಯ ಹಾಗೂ ಮಾನಸಿಕ ಕಿರುಕುಳಕ್ಕೆ ಮನನೊಂದು ಮೊಗವೀರ ಸಮಾಜದ ಮುಗ್ಧ ಮೀನುಗಾರ ಸೋಮನಾಥ ಪುತ್ರನ್ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕರಾವಳಿ ಭಾಗದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಈ ದುರಂತವು ಇಡೀ ಮೀನುಗಾರ ಸಮುದಾಯದಲ್ಲಿ ಭಯ ಹಾಗೂ ಆತಂಕದ ವಾತಾವರಣ ಸೃಷ್ಟಿಸಿದ್ದು, ತಪ್ಪಿತಸ್ಥ ಪೊಲೀಸ್ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಜರುಗಿಸುವಂತೆ ಸರ್ಕಾರವನ್ನು ಮೊಗವೀರ ಸಮಾಜ ಆಗ್ರಹಿಸಿದೆ.
ಮಂಳೂರಿನಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಮೊಗವೀರ ಸಂಯುಕ್ತ ಸಭಾದ ಅಧ್ಯಕ್ಷ ಭರತ್ ಉಳ್ಳಾಲ್ ಕುಟುಂಬದ ಏಕೈಕ ದುಡಿಮೆಗಾರರಾಗಿದ್ದ ಸೋಮನಾಥ ಪುತ್ರನ್ ಯಾವುದೇ ಅಪರಾಧ ಹಿನ್ನೆಲೆ ಇಲ್ಲದ ಸೌಮ್ಯ ಸ್ವಭಾವದ ವ್ಯಕ್ತಿಯಾಗಿದ್ದರು. ಈ ಪ್ರಕರಣದ ಸೂಕ್ತ ನ್ಯಾಯಾಂಗ ತನಿಖೆ ನಡೆಸಲು ಒತ್ತಾಯಿಸಿ ಮುಖ್ಯಮಂತ್ರಿ, ಗೃಹ ಹಾಗೂ ಉಸ್ತುವಾರಿ ಸಚಿವರು, ಹಾಗೂ ಮಾನವ ಹಕ್ಕುಗಳ ಆಯೋಗಕ್ಕೆ ಮನವಿ ಸಲ್ಲಿಸುವುದಾಗಿ ಹೇಳಿದರು.
ಸೋಮನಾಥ ಅವರಿಗೆ ಮಾನಸಿಕ ಹಿಂಸೆ ನೀಡಿ ಆತ್ಮಹತ್ಯೆಗೆ ಪ್ರಚೋದಿಸಿದ ಸಂಬಂಧಪಟ್ಟ ಪೊಲೀಸ್ ಅಧಿಕಾರಿಗಳ ವಿರುದ್ಧ ಬಿಎನ್ಎಸ್ (BNS) ಕಾಯ್ದೆಯಡಿ ತಕ್ಷಣವೇ ಪ್ರಕರಣ ದಾಖಲಿಸಿ, ಸೇವೆಯಿಂದ ಅಮಾನತುಗೊಳಿಸಬೇಕು.
ಮೃತರ ಪತ್ನಿ ನೀಡಿರುವ ದೂರಿನಲ್ಲಿದ್ದ ದೆಹಲಿ ಮೂಲದ ಕಾಜೋಲ್ ಹಾಗೂ ಕೇರಳ ಮೂಲದ ರಿಯಾಜ್ ಎಂಬವರ ಹೆಸರನ್ನು ಎಫ್ಐಆರ್ (FIR) ನಲ್ಲಿ ಸೇರಿಸದಿರುವುದು ಅನುಮಾನಕ್ಕೆ ಕಾರಣವಾಗಿದೆ. ಆದ್ದರಿಂದ ಅವರಿಬ್ಬರನ್ನೂ ಮುಂದಿನ 48 ಗಂಟೆಗಳ ಒಳಗೆ ಬಂಧಿಸಬೇಕು.
ಸ್ಥಳೀಯ ಪೊಲೀಸರಿಂದ ನಿಷ್ಪಕ್ಷಪಾತ ತನಿಖೆ ಸಾಧ್ಯವಿಲ್ಲದಿರುವುದರಿಂದ, ಹಾಲಿ ಅಥವಾ ನಿವೃತ್ತ ಜಿಲ್ಲಾ ನ್ಯಾಯಾಧೀಶರ ನೇತೃತ್ವದಲ್ಲಿ ನ್ಯಾಯಾಂಗ ತನಿಖೆ ಅಥವಾ ಸಿಐಡಿ (CID) ತನಿಖೆಗೆ ಆದೇಶಿಸಬೇಕು ಹಾಗೂ 30 ದಿನಗಳ ಒಳಗೆ ವರದಿಯನ್ನು ಸಾರ್ವಜನಿಕಗೊಳಿಸಬೇಕು.
ಸುರತ್ಕಲ್ ಪೊಲೀಸ್ ಠಾಣೆಯ ಸಿಸಿಟಿವಿ ದೃಶ್ಯಾವಳಿ (CCTV footage), ಜನರಲ್ ಡೈರಿ (GD) ಸೇರಿದಂತೆ ಎಲ್ಲಾ ಮುಖ್ಯ ದಾಖಲೆಗಳನ್ನು ತನಿಖಾಧಿಕಾರಿಗಳು ಕೂಡಲೇ ವಶಪಡಿಸಿಕೊಳ್ಳಬೇಕು.
ಮೃತರ ಕುಟುಂಬಕ್ಕೆ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ₹2 ಕೋಟಿ ನಷ್ಟಪರಿಹಾರ ನೀಡಬೇಕು. ಮೃತರ ಪತ್ನಿಗೆ ಅನುಕಂಪದ ಆಧಾರದ ಮೇಲೆ ಸರ್ಕಾರಿ ಕೆಲಸ ಒದಗಿಸಬೇಕು ಮತ್ತು ಅವರ ಮಕ್ಕಳ ಸಂಪೂರ್ಣ ಶಿಕ್ಷಣದ ವೆಚ್ಚವನ್ನು ಸರ್ಕಾರವೇ ವಹಿಸಿಕೊಳ್ಳಬೇಕು.
‘ಕರಾವಳಿಯ ಭದ್ರತೆಗೆ ಸಂಬಂಧಿಸಿ ಮೀನುಗಾರ ಸಮುದಾಯ ರಕ್ಷಣಾ ಕವಚವಾಗಿ ಕಾರ್ಯ ನಿರ್ವಹಿಸುತ್ತಿದೆ. ಅಂತಹ ಮೀನುಗಾರ ಸಮುದಾಯ ವ್ಯಕ್ತಿಯೊಬ್ಬರಿಗೆ ಪೊಲೀಸರಿಂದ ಅನ್ಯಾಯವಾಗಿದೆ. ಈ ಬಗ್ಗೆ ಸಮರ್ಪಕ ನ್ಯಾಯಾಂಗ ತನಿಖೆ ಆಗಲಿ ಎಂಬುದು ನಮ್ಮ ಆಗ್ರಹ. ಸೋಮನಾಥ ಅವರ ತಪ್ಪಿದ್ದರೆ ನಾವು ಹೋರಾಟ ನಿಲ್ಲಿಸುತ್ತೇವೆ. ಇಲ್ಲವಾದಲ್ಲಿ ಈ ಹೋರಾಟ ಉಗ್ರ ರೂಪದಲ್ಲಿ ಮುಂದುವರಿಯಲಿದೆ’ ಎಂದು ಮೀನುಗಾರ ಮುಖಂಡ ಯತೀಶ್ ಬೈಕಂಪಾಡಿ ಎಚ್ಚರಿಕೆ ನೀಡಿದರು.
ಪೊಲೀಸರ ಅಮಾನತು, ಪ್ರಮುಖ ಆರೋಪಿಗಳ ಬಂಧನ, ಸಿಐಡಿ ತನಿಖೆ ಹಾಗೂ ₹2 ಕೋಟಿ ಪರಿಹಾರದ ಬೇಡಿಕೆಯನ್ನು ಮುಂದಿನ 48 ಗಂಟೆಗಳ ಒಳಗೆ ಈಡೇರಿಸಬೇಕು. ಇಲ್ಲವಾದಲ್ಲಿ ಇಡೀ ಕರಾವಳಿ ಭಾಗದಾದ್ಯಂತ ಮೀನುಗಾರ ಸಮುದಾಯವು ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಿದೆ ಎಂದು ಮೊಗವೀರ ಸಮಾಜದ ಮುಖಂಡರು ಎಚ್ಚರಿಕೆ ನೀಡಿದ್ದಾರೆ.
ಮೀನುಗಾರ ಸಮುದಾಯದ ವಿವಿಧ ಸಂಘಟನೆಗಳ ಮುಖಂಡರಾದ ಜಯ ಸಿ. ಕೋಟ್ಯಾನ್, ಶರಣ್, ಉದಯ್ ಕುಮಾರ್, ಚಂದ್ರಕಾಂತ್, ವಿನಯ್ ಸೇರಿದಂತೆ ಇತರ ಅನೇಕರು ಉಪಸ್ಥಿತರಿದ್ದರು.
ಇದನ್ನೂ ಓದಿ..