ಬೆಂಗಳೂರು, ನ. 12: ರಾಜ್ಯದ ವಿವಿಧ ತಾಲ್ಲೂಕು ಆಸ್ಪತ್ರೆಗಳು ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ (PHC) ಕರ್ತವ್ಯ ನಿರ್ವಹಿಸುವ ವೈದ್ಯರು ಹಾಗೂ ಇತರ ಸಿಬ್ಬಂದಿ ಕಡ್ಡಾಯವಾಗಿ ಕೇಂದ್ರ ಸ್ಥಾನದಲ್ಲಿಯೇ ವಾಸವಿರುವುದನ್ನು ಖಾತ್ರಿಪಡಿಸಲು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಆಯುಕ್ತಾಲಯ ಕಟ್ಟುನಿಟ್ಟಿನ ಸುತ್ತೋಲೆ ಹೊರಡಿಸಿದೆ.
ನವೆಂಬರ್ 1, 2026ರಿಂದ ಪ್ರಾಯೋಗಿಕವಾಗಿ ಜಾರಿಗೆ ಬಂದಿರುವ ‘ಕರ್ತವ್ಯ ಆ್ಯಪ್’ (Kartavya App) ಮೂಲಕ ಪ್ರತಿದಿನ ರಾತ್ರಿ ವೇಳೆಯ ಹಾಜರಾತಿಯನ್ನು ಕಡ್ಡಾಯವಾಗಿ ದಾಖಲಿಸುವಂತೆ ಸೂಚಿಸಲಾಗಿದೆ. ನವೆಂಬರ್ 11ರಂದು ಆಯುಕ್ತರು ಹೊರಡಿಸಿರುವ ಈ ಸುತ್ತೋಲೆಯಲ್ಲಿ, ಸಾರ್ವಜನಿಕರಿಗೆ ತುರ್ತು ಸಂದರ್ಭಗಳಲ್ಲಿ ಆರೋಗ್ಯ ಸೇವೆ ಲಭ್ಯವಾಗುವಂತೆ ಮಾಡಲು ಈ ಕಠಿಣ ನಿಯಮಗಳನ್ನು ಜಾರಿಗೊಳಿಸಲಾಗಿದೆ.
ರಾತ್ರಿ 9ರ ನಂತರ ಹಾಜರಾತಿ ಕಡ್ಡಾಯ: ತಾಲ್ಲೂಕು ಆಸ್ಪತ್ರೆ ಮತ್ತು ಪಿಎಚ್‌ಸಿಗಳ ಎಲ್ಲಾ ವೈದ್ಯರು, ಶುಶ್ರೂಷಾಧಿಕಾರಿಗಳು, ಫಾರ್ಮಸಿ ಅಧಿಕಾರಿಗಳು, ಪ್ರಯೋಗಶಾಲಾ ತಂತ್ರಜ್ಞರು ಹಾಗೂ ಇತರ ಸಿಬ್ಬಂದಿ ಪ್ರತಿದಿನ ರಾತ್ರಿ 9 ಗಂಟೆಯ ನಂತರ ತಮ್ಮ ಕೇಂದ್ರ ಸ್ಥಾನವಿರುವ ನಗರ, ಪಟ್ಟಣ ಅಥವಾ ಗ್ರಾಮದ ಭೌಗೋಳಿಕ ಮಿತಿಯೊಳಗೆ (Geo-fencing) ‘ಕರ್ತವ್ಯ ಆ್ಯಪ್’ ಮೂಲಕ ರಾತ್ರಿ ಹಾಜರಾತಿಯನ್ನು ದಾಖಲಿಸಬೇಕು.
ವಿನಾಯಿತಿ ಯಾವಾಗ?: ಮಂಜೂರಾದ ರಜೆಯಲ್ಲಿದ್ದಾಗ, ಸಕ್ಷಮ ಪ್ರಾಧಿಕಾರದ ಅನುಮತಿಯೊಂದಿಗೆ ಕೇಂದ್ರ ಸ್ಥಾನದ ಹೊರಗೆ ಕರ್ತವ್ಯದಲ್ಲಿದ್ದಾಗ ಅಥವಾ ಕೇಂದ್ರ ಸ್ಥಾನ ಬಿಡಲು ಲಿಖಿತ ಅನುಮತಿ ಪಡೆದಿದ್ದಾಗ ಮಾತ್ರ ರಾತ್ರಿ ಹಾಜರಾತಿಯಿಂದ ವಿನಾಯಿತಿ ಇರುತ್ತದೆ. ಆದರೆ, ಆ ಕಾರಣವನ್ನು ಆ್ಯಪ್‌ನಲ್ಲಿ ಕಡ್ಡಾಯವಾಗಿ ನಮೂದಿಸಬೇಕು.
ಅನುಮತಿ ಇಲ್ಲದೆ ವಾಸವಿಲ್ಲದಿದ್ದರೆ ಅಕ್ರಮ: ಸಕ್ಷಮ ಪ್ರಾಧಿಕಾರದ ಪೂರ್ವಾನುಮತಿ ಇಲ್ಲದೆ ಕೇಂದ್ರ ಸ್ಥಾನವನ್ನು ಬಿಡುವಂತಿಲ್ಲ. ಅನುಮತಿಯಿಲ್ಲದೆ ಕೇಂದ್ರ ಸ್ಥಾನದ ವ್ಯಾಪ್ತಿಯ ಹೊರಗೆ ವಾಸವಿರುವುದು ಅನಿಯಮಿತವೆಂದು ಪರಿಗಣಿಸಲಾಗುತ್ತದೆ. ಅಧಿಕಾರಿಗಳಿಗೂ ಜವಾಬ್ದಾರಿ, ತಪ್ಪಿದರೆ ಶಿಸ್ತು ಕ್ರಮ:ಟಿಎಚ್‌ಒ / ಡಿಡಿಒಗಳ ಹೊಣೆ: ತಮ್ಮ ವ್ಯಾಪ್ತಿಯ ಎಲ್ಲಾ ವೈದ್ಯರು ಮತ್ತು ಸಿಬ್ಬಂದಿ ಕರ್ತವ್ಯ ಆ್ಯಪ್‌ನಲ್ಲಿ ನೋಂದಣಿಯಾಗಿರುವುದನ್ನು ಮತ್ತು ಜಿಯೋ-ಫೆನ್ಸಿಂಗ್ ಸರಿಯಾಗಿರುವುದನ್ನು ತಾಲ್ಲೂಕು ಆರೋಗ್ಯಾಧಿಕಾರಿಗಳು (THO) ಹಾಗೂ ಡಿಡಿಒಗಳು ಖಾತ್ರಿಪಡಿಸಿಕೊಳ್ಳಬೇಕು. ಹಾಜರಾತಿ ದಾಖಲಿಸದವರ ವಿವರವನ್ನು ವಾರಕ್ಕೊಮ್ಮೆ ಡಿಎಚ್‌ಒ (DHO) ಗಮನಕ್ಕೆ ತರಬೇಕು.
ಡಿಎಚ್‌ಒಗಳ ಹೊಣೆ: ಅನಧಿಕೃತವಾಗಿ ಕೇಂದ್ರ ಸ್ಥಾನದಲ್ಲಿ ವಾಸವಿಲ್ಲದವರ ವಿರುದ್ಧ ನಿಯಮಾನುಸಾರ ಕ್ರಮ ಕೈಗೊಂಡು, ಪ್ರತಿ ತಿಂಗಳ 10ನೇ ತಾರೀಖಿನೊಳಗೆ ಆಯುಕ್ತರ ಕಚೇರಿಗೆ ಕ್ರೋಢೀಕೃತ ವರದಿ ಸಲ್ಲಿಸಬೇಕು.
ಆದೇಶ ಪಾಲನೆಯಲ್ಲಿ ಲೋಪ ಕಂಡುಬಂದಲ್ಲಿ ಸಂಬಂಧಿಸಿದ ವೈದ್ಯರು ಮತ್ತು ಸಿಬ್ಬಂದಿಯ ಜೊತೆಗೆ, ಮೇಲ್ವಿಚಾರಣೆಯಲ್ಲಿ ವಿಫಲರಾದ ಡಿಡಿಒ, ಟಿಎಚ್‌ಒ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳನ್ನೇ (DHO) ವೈಯಕ್ತಿಕವಾಗಿ ಜವಾಬ್ದಾರರನ್ನಾಗಿ ಮಾಡಿ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಆಯುಕ್ತರು ಖಡಕ್ ಎಚ್ಚರಿಕೆ ನೀಡಿದ್ದಾರೆ.
ಬೆಂಗಳೂರು–ಮಂಗಳೂರು–ಮಡಗಾಂವ್ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿಗೆ ಶುಕ್ರವಾರ ಪ್ರಧಾನಿ ಮೋದಿ ಚಾಲನೆ..!