ಬೆಳಗಾವಿ, ನ.15: ಬೆಳಗಾವಿಯ ಗೋಕಾಕ ತಾಲೂಕಿನ ಮಲದಿನ್ನಿ ಕ್ರಾಸ್ ಬಳಿ ಭಾನುವಾರ ಸಂಭವಿಸಿದ ಕಾರು ಮತ್ತು ಲಾರಿ ನಡುವಿನ ಮುಖಾಮುಖಿ ಡಿಕ್ಕಿಯಲ್ಲಿ ಒಂದೇ ಕುಟುಂಬದ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದು, ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಮಹಾರಾಷ್ಟ್ರದ ಪುಣೆಯಿಂದ ಪ್ರಸಿದ್ಧ ಸವದತ್ತಿ ಯಲ್ಲಮ್ಮ ದೇವಸ್ಥಾನಕ್ಕೆ ಹೊರಟಿದ್ದ ಕಾರು, ಯರಗಟ್ಟಿಯಿಂದ ಗೋಕಾಕ ಕಡೆ ಬರುತ್ತಿದ್ದ ಲಾರಿಗೆ ಡಿಕ್ಕಿ ಹೊಡೆದ ಪರಿಣಾಮ ಈ ದುರಂತ ಸಂಭವಿಸಿದೆ. ಅಪಘಾತದ ತೀವ್ರತೆಗೆ ಕಾರು ಸಂಪೂರ್ಣವಾಗಿ ನಜ್ಜುಗುಜ್ಜಾಗಿದೆ.
ಮೃತರನ್ನು ಓಂಕಾರ್ ಚಂದ್ರಶೇಖರ್ ಮಾಂದ್ರೆ (26), ರೇಷ್ಮಾ ಮಾಂದ್ರೆ (32) ಮತ್ತು 4 ವರ್ಷದ ಬಾಲಕ ದೇವಾಂಶ ಮಾಂದ್ರೆ ಎಂದು ಗುರುತಿಸಲಾಗಿದೆ. ಇನ್ನು ಕಾರಿನಲ್ಲಿದ್ದ ಶ್ರೀಕಾಂತ್ ಮಾಂದ್ರೆ, ವಂದನಾ ಮಾಂದ್ರೆ ಹಾಗೂ ಹರ್ಷದಾ ಮಾಂದ್ರೆ ಅವರಿಗೆ ಗಂಭೀರ ಗಾಯಗಳಾಗಿದ್ದು, ಕೂಡಲೇ ಅವರನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
ಅಪಘಾತಕ್ಕೆ ಕಾರು ಚಾಲಕನ ಅವಸರ ಮತ್ತು ಅತಿಯಾದ ವೇಗವೇ ಕಾರಣ ಎಂದು ಪೊಲೀಸರು ತಿಳಿಸಿದ್ದಾರೆ. ಗೋಕಾಕ್ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ..