BREAKING
[ಹೋಮ್] ರಾಜ್ಯ
[ಹೋಮ್] ದೇಶ
[ಹೋಮ್] ವಿದೇಶ
[ಹೋಮ್] ಕ್ರೀಡೆ
[ಹೋಮ್] ಸಿನಿಮಾ
[ಹೋಮ್] ಉಡುಪಿ
[ಹೋಮ್] ದಕ್ಷಿಣ ಕನ್ನಡ
ದಕ್ಷಿಣ ಕನ್ನಡ

Mangaluru ಎಂಆರ್‌ಪಿಎಲ್ ಘಟಕದಲ್ಲಿ ಭೀಕರ ಸ್ಫೋಟ: ಏಳು ಮಂದಿಗೆ ಗಾಯ, ಓರ್ವ ಗಂಭೀರ- ಜೋಕಟ್ಟೆಯಲ್ಲಿ ಮನೆಗಳು ಜಖಂ, ಜನ ಆಕ್ರೊಶ


ಮಂಗಳೂರು, ಸೆ 30 : ಮಂಗಳೂರು ರಿಫೈನರಿ ಆಂಡ್ ಪೆಟ್ರೋಕೆಮಿಕಲ್ಸ್ ಲಿಮಿಟೆಡ್ (MRPL) ಆವರಣದಲ್ಲಿ ಬುಧವಾರ ಮಧ್ಯಾಹ್ನ ಭೀಕರ ಸ್ಫೋಟ ಸಂಭವಿಸಿದ್ದು, ಘಟನೆಯಲ್ಲಿ ಏಳು ಮಂದಿಗೆ ಗಾಯಗಳಾಗಿದ್ದು ಓರ್ವನ ಸ್ಥತಿ ಗಂಭೀರವಾಗಿದೆ.ಎಂಆರ್‌ಪಿಎಲ್‌ನ ಸಿಹೆಚ್‌ಟಿ (CHT - Hydro Sulphur Treatment Unit) ಘಟಕದಲ್ಲಿ ಈ ದುರ್ಘಟನೆ ಸಂಭವಿಸಿದ್ದು, ಮಧ್ಯಾಹ್ನ ಭಾರಿ ಪ್ರಮಾಣದ ಬೆಂಕಿ ಕಾಣಿಸಿಕೊಂಡಿತ್ತು. ತಕ್ಷಣವೇ ಕಾರ್ಯಪ್ರವೃತ್ತರಾದ ಆಂತರಿಕ ಅಗ್ನಿಶಾಮಕ ದಳವು ಸತತ ಕಾರ್ಯಾಚರಣೆ ನಡೆಸಿ ಬೆಂಕಿಯನ್ನು ಸಂಪೂರ್ಣ ನಿಯಂತ್ರಣಕ್ಕೆ ತಂದಿದೆ.

ಪೊಲೀಸ್ ಕಮಿಷನರ್ ಭೇಟಿ:

ಸ್ಪೋಟದ ಮಾಹಿತಿ ತಿಳಿಯುತ್ತಿದ್ದಂತೆ ಘಟನಾ ಸ್ಥಳಕ್ಕೆ ನಗರ ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ, ಜಿಲ್ಲಾಧಿಕಾರಿ ಹಾಗೂ ಎಂಆರ್‌ಪಿಎಲ್ ಸಿಇಒ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. "CHT ಘಟಕದಲ್ಲಿ ಸ್ಫೋಟದ ಬಳಿಕ ಬೆಂಕಿ ಕಾಣಿಸಿಕೊಂಡಿತ್ತು, ಸದ್ಯ ಬೆಂಕಿಯನ್ನು ಸಂಪೂರ್ಣವಾಗಿ ನಿಯಂತ್ರಿಸಲಾಗಿದೆ. ಓರ್ವ ವ್ಯಕ್ತಿಗೆ ಶೇ. 35 ಸುಟ್ಟ ಗಾಯಗಳಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಉಳಿದ ಆರು ಮಂದಿಗೆ ಸಣ್ಣ ಗಾಯಗಳಾಗಿವೆ. ಪರಿಸ್ಥಿತಿ ಸಂಪೂರ್ಣ ನಿಯಂತ್ರಣದಲ್ಲಿದ್ದು, ಸಾರ್ವಜನಿಕರು ಆತಂಕಪಡುವ ಅಗತ್ಯವಿಲ್ಲ" ಎಂದು ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ಮಾಹಿತಿ ನೀಡಿದ್ದಾರೆ.  

ಜೋಕಟ್ಟೆಯಲ್ಲಿ ನಡುಗಿದ ಮನೆ-ಶಾಲೆ, ರಸ್ತೆಗಿಳಿದು ಜನರ ಪ್ರತಿಭಟನೆ:

ಸ್ಫೋಟದ ತೀವ್ರತೆಗೆ ಎಂಆರ್‌ಪಿಎಲ್ ಕೂಗಳತೆಯ ದೂರದಲ್ಲಿರುವ ಜೋಕಟ್ಟೆ ಗ್ರಾಮ ಪಂಚಾಯತ್ ಕಚೇರಿ, ಗ್ರಂಥಾಲಯ, ಅಂಗನವಾಡಿ ಹಾಗೂ ಸುತ್ತಮುತ್ತಲಿನ ನೂರಾರು ಮನೆಗಳ ಬಾಗಿಲು-ಕಿಟಕಿ ಗಾಜುಗಳು ಚೂರುಚೂರಾಗಿ ಬಿದ್ದಿವೆ. ಸ್ಫೋಟದ ಸದ್ದು ಹಾಗೂ ಕಂಪನಕ್ಕೆ ಹಲವು ಮನೆಗಳ ಗೋಡೆಗಳು ಬಿರುಕು ಬಿಟ್ಟಿದ್ದು, ಗಾಬರಿಗೊಂಡ ಗ್ರಾಮಸ್ಥರು ಬೀದಿಗಿಳಿದು ಎಂಆರ್‌ಪಿಎಲ್ ಪ್ರವೇಶ ದ್ವಾರದ ಬಳಿ ರಸ್ತೆ ತಡೆದು ಆಕ್ರೋಶ ವ್ಯಕ್ತಪಡಿಸಿದರು.   ಗ್ರಾಮ ಪಂಚಾಯತ್ ಸದಸ್ಯ ಫಯಾಜ್ ಮಾತನಾಡಿ, "ಮಧ್ಯಾಹ್ನ ಸುಮಾರು 12:30ಕ್ಕೆ ಭೂಕಂಪವಾದಂತೆ ಭಾರಿ ಸ್ಫೋಟದ ಸದ್ದು ಕೇಳಿಸಿತು. ಜೋಕಟ್ಟೆಯ ಪಂಚಾಯತ್, ಗ್ರಂಥಾಲಯ, ಶಾಲೆಗಳ ಕಿಟಕಿ ಗಾಜುಗಳು ಪುಡಿಯಾಗಿವೆ. ಕಂಪನಿಯವರು ಸ್ಥಳೀಯರಿಗೆ ಯಾವುದೇ ಮಾಹಿತಿ ನೀಡುತ್ತಿಲ್ಲ. ನಿರಂತರ ಮಾಲಿನ್ಯ ಹಾಗೂ ಅಪಾಯದ ನೆರಳಿನಲ್ಲಿ ಬದುಕುತ್ತಿರುವ ಊರಿನ ಜನರಿಗೆ ರಕ್ಷಣೆ ಇಲ್ಲವಾಗಿದೆ" ಎಂದು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.   

ಇತಿಹಾಸ ಪ್ರಸಿದ್ದ ಪೇಜಾವರ  ಚರ್ಚಿಗೂ ಭಾರಿ ಹಾನಿಯಾಗಿದ್ದು ಅಪಾರ ನಷ್ಟ ಸಂಭವಿಸಿದೆ. ಚರ್ಚಿನ ಮಾಡಿನ ಹೆಂಚುಗಳು ಸ್ಪೋಟಕ್ಕೆ ಹಾರಿ ಹೋಗಿದ್ದು, ಗೋಡೆಗಳು ಬಿರುಕು ಬಿಟ್ಟಿವೆ, ಕಿಟಕಿಗಳ ಗ್ಲಾಸುಗಳು ಓಡೆದುಹೋಗಿದೆ. 


ಸ್ಟೋಟ ಸಂಭವಿಸಿದ್ದ ಸ್ಥಳಕ್ಕೆ  ಮಂಗಳೂರು ಉತ್ತರ ಕ್ಷೇತ್ರದ ಶಾಸಕ ಡಾ. ಭರತ್ ಶೆಟ್ಟಿ ಭೇಟಿ ನೀಡಿ ಪರಿಶೀಲನೆ ನಡೆಸಿದರು ಮತ್ತು ಅಧಿಕಾರಿಗಳಿಂದ ಮಾಹಿತಿ ಪಡೆದರು. 



📢 ಸುದ್ದಿವಾಣಿ WhatsApp — ತಕ್ಷಣದ ಬ್ರೇಕಿಂಗ್ ನ್ಯೂಸ್ ಪಡೆಯಿರಿ!