ಮಂಗಳೂರು,ಜುಲೈ 17 : ದಕ್ಷಿಣ ಕನ್ನಡ ಟೆಲಿಕಾಂ ಸಂಸ್ಥೆ BSNL ಯ ಮಾಜಿ ಪ್ರಧಾನ ಪ್ರಬಂಧಕರಾಗಿದ್ದ (Principal General Manager) ಕೆ. ರಾಮ (86) ಅವರು ಬೆಂಗಳೂರಿನ ತಮ್ಮ ನಿವಾಸದಲ್ಲಿ ನಿಧನರಾಗಿದ್ದಾರೆ. ಅವರಿಗೆ 86 ವರ್ಷ ವಯಸ್ಸಾಗಿತ್ತು. ಮೂಲತಃ : ಕೇರಳದ ಕಾಸರಗೋಡು ಜಿಲ್ಲೆಯ ಕಜಂಪಾಡಿ ಗ್ರಾಮದವರಾಗಿದ್ದ ಕೆ ರಾಮ ಅವರು 1998ರಲ್ಲಿ ಬಿಎಸ್‌ಎನ್‌ಎಲ್ ಸೇವೆಯಿಂದ ನಿವೃತ್ತರಾಗಿದ್ದರು. ನಿವೃತ್ತಿಯ ನಂತರದ ದಿನಗಳನ್ನು ಬೆಂಗಳೂರಿನಲ್ಲಿಯೇ ಕಳೆಯುತ್ತಿದ್ದರು.
ಕರಾವಳಿಯಲ್ಲಿ ಅದರಲ್ಲೂ ಅವಿಭಾಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 80 ರ ದಶಕದಲ್ಲಿ ಟೆಲಿಫೋನ್ ಕ್ರಾಂತಿಯನ್ನೇ ಮಾಡಿದ್ದರು. ಜನ ಸಾಮಾನ್ಯರಿಗೆ ಟೆಲಿಫೋನ್ ಸೌಲಭ್ಯ ಗಗನ ಕುಸುಮವಾಗಿದ್ದ ಆ ಕಾಲದಲ್ಲಿ ಅಲ್ಲಲ್ಲಿ ಎಸ್.ಟಿ.ಡಿ(STD) ಬೂತ್ ಗಳನ್ನು ಸ್ಥಾಪನೆ ಮಾಡಿ ಕ್ರಾಂತಿಯನ್ನೇ ಮಾಡಿದ್ದರು. ಇದರಿಂದ ಜನ ಸಾಮಾನ್ಯರಿಗೆ ಟೆಲಿಫೋನ್ ಸೌಲಭ್ಯ ದೊರಕಿದರೆ, ಯುವಕ ಯುವತಿಯರಿಗೆ ಎಸ್‌ಟಿಡಿ ಬೂತ್ ಗಳಿಂದ ಹೊಸ ಉದ್ಯೋಗ, ಆರ್ಥಿಕ ಸಧೃಡತೆ ದೊರಕಿತ್ತು. ಕೆ ರಾಮ ಅವರನ್ನು ಈ ಕಾರಣಕ್ಕಾಗಿ ಕರಾವಳಿ ಭಾಗದ ಜನ ಇಂದಿಗೂ ಅತ್ಯಂತ ಗೌರವದಿಂದ ಸ್ಮರಿಸಲಾಗುತ್ತದೆ. ಕೆ ರಾಮ ಅವರ ನಿಧನಕ್ಕೆ ಕರಾವಳಿಯ ಅನೇಕ ಗಣ್ಯರು, ಜನಸಾಮನ್ಯರು ಸಂತಾಪ ಸೂಚಿಸಿದ್ದಾರೆ.
