BREAKING
ದಕ್ಷಿಣ ಕನ್ನಡ

Mangalru ಅಮಾಯಕ ಯುವತಿ ಲಾವಣ್ಯ ಬರ್ಬರ ಹತ್ಯೆ ಪ್ರಕರಣ,ಹಂತಕನ ಶೀಘ್ರ ಬಂಧನಕ್ಕೆ DYFI ಆಗ್ರಹ


ಮಂಗಳೂರು,ಜುಲೈ17:ಬಂಟ್ವಾಳದ ಬಿ. ಸಿ. ರೋಡ್ ಕೆಎಸ್ಆರ್ ಟಿಸಿ ಬಸ್ ನಿಲ್ದಾಣದ ಬಳಿ ಅಮಾಯಕ ಹೆಣ್ಣುಮಗಳು ಲಾವಣ್ಯ ಎಂಬುವವಳನ್ನು ಹಾಡುಹಗಲೇ ಭೀಕರವಾಗಿ ಕೊಲೆ ಮಾಡಿರುವ ಘಟನೆ ಇಡೀ ಜಿಲ್ಲೆಯ ಜನರನ್ನು ಬೆಚ್ಚಿಬೀಳಿಸಿದೆ. ನಾಗರಿಕ ಸಮಾಜವೇ ತಲೆತಗ್ಗಿಸುವಂತಹ ಈ ಅಮಾನವೀಯ ಹಾಗೂ ಕ್ರೂರ ಘಟನೆಯನ್ನು ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಷನ್ (DYFI) ದಕ್ಷಿಣ ಕನ್ನಡ ಜಿಲ್ಲಾ ಸಮಿತಿಯು ತೀವ್ರವಾಗಿ ಖಂಡಿಸಿದೆ. ಜನನಿಬಿಡ ಸಾರ್ವಜನಿಕ ಪ್ರದೇಶದಲ್ಲೇ ಯುವತಿಯೊಬ್ಬಳನ್ನು ಈ ರೀತಿ ಅಮಾನುಷವಾಗಿ ಹತ್ಯೆ ಮಾಡಿರುವುದು ಸಾರ್ವಜನಿಕ ವಲಯದಲ್ಲಿ ತೀವ್ರ ಆತಂಕ ಹಾಗೂ ಅಸುರಕ್ಷತಾ ಭಾವನೆಯನ್ನು ಮೂಡಿಸುವಂತಿದೆ. ಇಂತಹ  ಘಟನೆಗಳು ಮರುಕಳಿಸದಂತೆ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಇಲಾಖೆ ತಕ್ಷಣವೇ ಎಚ್ಚೆತ್ತುಕೊಂಡು, ಸೂಕ್ತ ಕಾನೂನು ಕ್ರಮಗಳನ್ನು ಕೈಗೊಳ್ಳಬೇಕು ಎಂದು ಡಿವೈಎಫ್ಐ ಒತ್ತಾಯಿಸಿದೆ. ಈ ಘಟನೆಗೆ ಸಂಬಂಧಿಸಿದಂತೆ ಸಾರ್ವಜನಿಕ ವಲಯದಲ್ಲಿ ಹರಿದಾಡುತ್ತಿರುವ ವಿಡಿಯೋ ತುಣು ಕುಗಳು ಮತ್ತು ಘಟನಾ ಸ್ಥಳದಲ್ಲಿದ್ದ ಪ್ರತ್ಯಕ್ಷದರ್ಶಿಗಳು ನೀಡುತ್ತಿರುವ ವಿವರಗಳನ್ನು ಗಮನಿಸುವಾಗ ಇದೊಂದು ವ್ಯವಸ್ಥಿತವಾಗಿ ರೂಪಿಸಲಾದ ಪೂರ್ವಯೋಜಿತ ಕೃತ್ಯ ಎಂಬುದು ಸ್ಪಷ್ಟವಾಗಿ ಗೋಚರಿಸುತ್ತದೆ. ಅಪರಾಧಿಯು ಯುವತಿಯ ಹತ್ಯೆಗಾಗಿ ಬಸ್ ನಿಲ್ದಾಣಕ್ಕೆ ತಲವಾರಿನಂತಹ ಮಾರಕಾಸ್ತ್ರವನ್ನು ಮೊದಲೇ ಸಿದ್ಧಪಡಿಸಿಕೊಂಡು ತಂದಿರುವುದು ಆತನ ಪೂರ್ವ ಯೋಜನೆಯನ್ನು ಮತ್ತು ಕ್ರೂರ ಮನಸ್ಥಿತಿಯನ್ನು ದೃಢಪಡಿಸುತ್ತದೆ ಎಂದು ಡಿವೈಎಫ್ಐ ಕಳವಳ ವ್ಯಕ್ತಪಡಿಸಿದೆ. 

ಪೊಲೀಸ್ ಇಲಾಖೆ ಈ ಕೂಡಲೇ ಯುವತಿಯನ್ನು ಕೊಲೆಗೈದ ಆರೋಪಿಯನ್ನು ಬಂಧಿಸಿ, ಕಾನೂನಿನಡಿಯಲ್ಲಿ ಕಠಿಣಾತಿ ಕಠಿಣ ಶಿಕ್ಷೆಗೆ ಒಳಪಡಿಸಬೇಕು. ಅಲ್ಲದೆ, ಈ ಕೊಲೆ ಪ್ರಕರಣದ ಹಿಂದೆ ಯಾವುದೇ ಇತರ ಕಾರಣಗಳಿವೆಯೇ ಎಂಬ ಬಗ್ಗೆ ಕೂಲಂಕಷ ಹಾಗೂ ಸಮಗ್ರ ತನಿಖೆ ನಡೆಸಬೇಕು ಎಂದು ಸಂಘಟನೆಯು  ಪೊಲೀಸ್ ಇಲಾಖೆಯನ್ನು ಆಗ್ರಹಿಸಿದೆ. ದುಷ್ಕರ್ಮಿಯ ಕ್ರೌರ್ಯಕ್ಕೆ ಬಲಿಯಾದ ಸಂತ್ರಸ್ತ ಯುವತಿ ಲಾವಣ್ಯಳ ಕುಟುಂಬಕ್ಕೆ ರಾಜ್ಯ ಸರ್ಕಾರವು ತಕ್ಷಣವೇ ಗರಿಷ್ಠ ಪ್ರಮಾಣದ ಸೂಕ್ತ ಆರ್ಥಿಕ ಪರಿಹಾರವನ್ನು ಘೋಷಿಸಬೇಕೆಂದು ಡಿವೈಎಫ್ಐ ದಕ್ಷಿಣ ಕನ್ನಡ ಜಿಲ್ಲಾ ಸಮಿತಿಯು ರಾಜ್ಯ ಸರಕಾರವನ್ನು ಬಲವಾಗಿ ಒತ್ತಾಯಿಸಿದೆ ಎಂದು ಡಿವೈಎಫ್ಐ ದ.ಕ ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ. 


📢 ಸುದ್ದಿವಾಣಿ WhatsApp — ತಕ್ಷಣದ ಬ್ರೇಕಿಂಗ್ ನ್ಯೂಸ್ ಪಡೆಯಿರಿ!