ಟೊರೊಂಟೊ, ಜುಲೈ 12: ಕೆನಡಾದ ಅತ್ಯಂತ ಜನಪ್ರಿಯ ಬೀದಿ ಉತ್ಸವದಲ್ಲಿ ಭೀಕರ ಗುಂಡಿನ ದಾಳಿ ನಡೆದಿದೆ. ಟೊರೊಂಟೊ ನಗರದ ಮಿಡ್‌ಟೌನ್‌ನಲ್ಲಿ ಈ ಗುಂಡಿನ ದಾಳಿ ನಡೆದಿದ್ದು ದಾಳಿಯಲ್ಲಿ ಈಗಾಗಲೇ ಇಬ್ಬರು ಸಾವನ್ನಪ್ಪಿದ್ದು ನಾಲ್ವರು ಗಂಭೀರ ಗಾಯಗೊಂಡಿದ್ದಾರೆ.
ಟೊರೊಂಟೊ ನಗರದ ಮಿಡ್‌ಟೌನ್‌ನಲ್ಲಿ ವಾರ್ಷಿಕ ಉತ್ಸವ ‘ಸಾಲ್ಸಾ ಆನ್ ಸೇಂಟ್ ಕ್ಲೇರ್’ ವೇಳೆ ದುಷ್ಕರ್ಮಿಯೊಬ್ಬ ಜನರ ಮೇಲೆ ಮನಬಂದಂತೆ ಗುಂಡಿನ ಮಳೆಗರೆದಿದ್ದಾನೆ. ಶನಿವಾರ ಸ್ಥಳೀಯ ಕಾಲಮಾನ ರಾತ್ರಿ 8.12 ರ ವೇಳೆಗೆ ಈ ಕ್ರೂರ ಘಟನೆ ನಡೆದಿದೆ.
ಈ ಹರ್ಷೋಲ್ಲಾಸದ ನಡುವೆ ಹಠಾತ್ತಾಗಿ ಬಂದೂಕುಧಾರಿಯೊಬ್ಬ ಸಾರ್ವಜನಿಕರ ಮೇಲೆ ಸರಣಿ ಗುಂಡಿನ ದಾಳಿ ನಡೆಸಿದ್ದಾನೆ. ಕೂಡಲೇ ಟೊರೊಂಟೊ ಪೊಲೀಸರು ತಕ್ಷಣವೇ ಇಡೀ ಪ್ರದೇಶವನ್ನು ತಮ್ಮ ಸುಪರ್ದಿಗೆ ಪಡೆದುಕೊಂಡರು.
ಪೊಲೀಸ್ ಅಧಿಕಾರಿಗಳು ಮತ್ತು ತುರ್ತು ರಕ್ಷಣಾ ಪಡೆಗಳು ಸ್ಥಳಕ್ಕೆ ಧಾವಿಸಿದಾಗ ಒಟ್ಟು ಆರು ಜನರು ರಕ್ತದ ಮಡುವಿನಲ್ಲಿ ಬಿದ್ದಿರುವುದು ಕಂಡುಬಂದಿದೆ. ಅವರಲ್ಲಿ ಇಬ್ಬರು ತೀವ್ರ ರಕ್ತಸ್ರಾವದಿಂದ ಸ್ಥಳದಲ್ಲೇ ಸಾವನ್ನಪ್ಪಿದ್ದರು. ಉಳಿದ ನಾಲ್ಕು ಮಂದಿ ಗಾಯಾಳುಗಳನ್ನು ತಕ್ಷಣವೇ ಹತ್ತಿರದ ಆಸ್ಪತ್ರೆಗಳಿಗೆ ದಾಖಲಿಸಲಾಗಿದ್ದು, ಅವರ ಸ್ಥಿತಿಯ ಬಗ್ಗೆ ಪೊಲೀಸರು ಸದ್ಯಕ್ಕೆ ಯಾವುದೇ ಹೆಚ್ಚಿನ ವಿವರಗಳನ್ನು ಬಿಡುಗಡೆ ಮಾಡಿಲ್ಲ.
ಭೀಕರ ಕೃತ್ಯ ಎಸಗಿದ ಬಳಿಕ ದುಷ್ಕರ್ಮಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ. ಸದ್ಯ ಇಡೀ ಟೊರೊಂಟೊ ನಗರದಲ್ಲಿ ಹೈ ಅಲರ್ಟ್ ಘೋಷಿಸಲಾಗಿದ್ದು, ತನಿಖೆ ಮುಂದುವರಿದಿದೆ.
ದಾಳಿ ನಡೆದ ಪ್ರದೇಶದಲ್ಲಿ ಭಾರಿ ಪ್ರಮಾಣದ ಸಶಸ್ತ್ರ ಪೊಲೀಸ್ ಭದ್ರತೆಯನ್ನು ನಿಯೋಜಿಸಲಾಗಿದ್ದು, ಸಾರ್ವಜನಿಕರು ಯಾವುದೇ ಕಾರಣಕ್ಕೂ ಘಟನಾ ಸ್ಥಳದ ಆಸುಪಾಸಿಗೆ ಬರದಂತೆ ಮತ್ತು ಸುರಕ್ಷಿತವಾಗಿ ಮನೆಗಳಲ್ಲೇ ಇರುವಂತೆ ಪೊಲೀಸರು ‘ಎಕ್ಸ್’ ಮೂಲಕ ಕಠಿಣ ಎಚ್ಚರಿಕೆ ನೀಡಿದ್ದಾರೆ.