*ರಸ್ತೆ ಬದಿಯಲ್ಲಿ ಕಸ ಸುರಿದ ಪ್ರಕರಣ: ದಂಡ ವಿಧಿಸಿದ ಪಂಚಾಯತ್*
ಉಳ್ಳಾಲ , ಜುಲೈ 01 : ರಸ್ತೆ ಬದಿಯಲ್ಲಿ ಕಸ ಸುರಿದು ಬೆಂಕಿ ಹಚ್ಚಿದ ಹೊಟೇಲು ಮಾಲಿಕರಿಂದ ರೂಪಾಯಿ 2 ಸಾವಿರ ದಂಡ ವಸೂಲಿ ಮಾಡಿದ ವಿದ್ಯಮಾನ ಉಳ್ಳಾಲದಲ್ಲಿ ಸಂಭವಿಸಿದೆ.
ರಸ್ತೆ ಬದಿಯಲ್ಲಿ ಅನಧಿಕೃತವಾಗಿ ಕಸ ಸುರಿಯುವ ಪ್ರಕರಣಗಳಿಗೆ ಸಂಬಂಧಿಸಿದಂತೆ ಕಿನ್ಯಾ, ಬೆಳ್ಮ ಹಾಗೂ ತಲಪಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಸ್ವಚ್ಛ ಭಾರತ್ ಮಿಷನ್ ಜಿಲ್ಲಾ ಸಮನಾಲೋಚಕರ ನೇತೃತ್ವದಲ್ಲಿ ಪರಿಶೀಲನೆ ನಡೆಸಲಾಯಿತು. ಪರಿಶೀಲನೆಯ ಸಂದರ್ಭದಲ್ಲಿ ತಲಪಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿರುವ ಒಂದು ಹೋಟೆಲ್‍ನವರು ಅನಧಿಕೃತವಾಗಿ ರಸ್ತೆ ಬದಿಯಲ್ಲಿ ಅನಧಿಕೃತವಾಗಿ ಕಸ ಸುರಿದು, ಅದಕ್ಕೆ ಬೆಂಕಿ ಹಚ್ಚಿರುವ ಕಾನೂನುಬಾಹಿರ ಚಟುವಟಿಕೆಗಳು ಕಂಡು ಬಂದಿದ್ದು, ಜಿಲ್ಲಾ ಪಂಚಾಯತ್ ಸಿಇಒ ಸೂಚನೆ ಮೇರೆಗೆ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಅವರನ್ನು ಸ್ಥಳಕ್ಕೆ ಕರೆಸಿ ಕ್ರಮ ಕೈಗೊಂಡರು.
ಈ ಕೃತ್ಯವು ಪರಿಸರ ಮಾಲಿನ್ಯ ಉಂಟುಮಾಡುವುದರ ಜೊತೆಗೆ ಸಾರ್ವಜನಿಕ ಆರೋಗ್ಯಕ್ಕೂ ಹಾನಿಕಾರಕವಾಗಿರುವ ಹಿನ್ನೆಲೆಯಲ್ಲಿ ಸಂಬಂಧಿತ ಹೋಟೆಲ್‍ಗೆ ರೂ. 2 ಸಾವಿರ ದಂಡ ವಿಧಿಸಿದ್ದು, ಇಂತಹ ಕೃತ್ಯಗಳು ಮರುಕಳಿಸದಂತೆ ಕಟ್ಟುನಿಟ್ಟಿನ ಎಚ್ಚರಿಕೆ ನೀಡಲಾಯಿತು.ಸ್ಥಳೀಯ ಗ್ರಾಮ ಪಂಚಾಯತ್ ಅಧಿಕಾರಿಗಳಿಗೆ ರಸ್ತೆ ಬದಿಯಲ್ಲಿ ಕಸ ಸುರಿಯುವ ಪ್ರಕರಣಗಳನ್ನು ನಿರಂತರವಾಗಿ ಮೇಲ್ವಿಚಾರಣೆ ನಡೆಸಿ, ನಿಯಮ ಉಲ್ಲಂಘಿಸುವವರ ವಿರುದ್ಧ ತಕ್ಷಣವೇ ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚಿಸಲಾಯಿತು. ಅಲ್ಲದೆ ಸಾರ್ವಜನಿಕರು ಕಸವನ್ನು ನಿಗದಿತ ಸ್ಥಳಗಳಿಗೆ ಮಾತ್ರ ವಿಲೇವಾರಿ ಮಾಡುವಂತೆ ಅರಿವು ಮೂಡಿಸಲು ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವಂತೆ ಜಿಲ್ಲಾ ಪಂಚಾಯತ್ ಸ್ವಚ್ಛ ಭಾರತ್ ಮಿಷನ್ (ಗ್ರಾ) ತಂಡ ಸೂಚಿಸಿದೆ.