ಮಂಗಳೂರು, ಜುಲೈ.01: ಭಾರೀ ಮಳೆಯ ಪರಿಣಾಮ ಮಂಗಳೂರು ನಗರದ ಕಂಕನಾಡಿ ಪೊಲೀಸ್ ಠಾಣೆ ವ್ಯಾಪ್ತಿಯ ನಾಗುರಿ ಪ್ರದೇಶದಲ್ಲಿ ಮನೆ ಮೇಲೆ ಪಕ್ಕದ ತಡೆಗೋಡೆ ಕುಸಿದ ಪರಿಣಾಮ ಇಬ್ಬರು ಮಕ್ಕಳು, ಒರ್ವ ಮಹಿಳೆ ಸೇರಿ ಮೂವರು ಮೃತಪಟ್ಟ ದಾರುಣ ಘಟನೆ ನಡೆದಿದೆ.

ಈ ದುರ್ಘಟನೆ ಸಂಭವಿಸಿದ ಸಂದರ್ಭ ಮನೆಯಲ್ಲಿ ಒಟ್ಟು ಆರು ಮಂದಿ ಇದ್ದರು ಎನ್ನಲಾಗಿದೆ. ಘಟನೆಯ ಮಾಹಿತಿ ತಿಳಿದ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (NDRF) ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ನಡೆಸಿದೆ.
ಅವಶೇಷಗಳಡಿ ಸಿಲುಕಿಕೊಂಡಿದ್ದ ಅಲ್ಕಾ (14), ಅನುಷಾ (11) ಹಾಗೂ ಬಾಲಕೃಷ್ಣ (48) ಅವರನ್ನು ಸುರಕ್ಷಿತವಾಗಿ ಹೊರತೆಗೆದ ರಕ್ಷಣಾ ತಂಡ ಅವರನ್ನು ಆಸ್ಪತ್ರೆಗೆ ದಾಖಲಿಸಿದೆ. ಅವಶೇಷಗಳಡಿ ಸಿಲುಕಿದ್ದ ಮೂವರು ದುರ್ಐವಿಗಳು ದಾರುಣ ಅಂತ್ಯ ಕಂಡಿದ್ದಾರೆ. ಮೃತರನ್ನು ಶಾಂತ (46), ಅನಾಮಿಕ ಚೌರಾಸಿಯಾ (8) ಹಾಗೂ ಪರಿ (4) ಎಂದು ಗುರುತ್ತಿಸಲಾಗಿದೆ. ಮೂಲತಃ ಬಿಹಾರ ರಾಜ್ಯದವರಾದ ಬಾಲಕೃಷ್ಣ ಅವರ ಕುಟುಂಬ ಕಳೆದ 20 ವರ್ಷಗಳಿಂದ ಕಂಕನಾಡಿ ಪೊಲೀಸ್ ಠಾಣೆಯ ಹಿಂಭಾಗದ ಈ ಪ್ರದೇಶದಲ್ಲಿ ವಾಸಿಸುತ್ತಿತ್ತು ಎನ್ನಲಾಗಿದೆ. ಘಟನಾ ಸ್ಥಳಕ್ಕೆ ಜಿಲ್ಲಾಧಿಕಾರಿ ದರ್ಶನ್, ಪೊಲೀಸ್ ಹಿರಿಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಸಚಿವ ಖಾದರ್ ದೆಹಲಿ ಪ್ರವಾಸ ಮೊಟಕು
ಮನೆ ಕುಸಿದು ಮೂವರು ಸಾವನ್ನಪ್ಪಿದ ಘಟನೆಯ ಹಿನ್ನಲೆಯಲ್ಲಿ ದೆಹಲಿ ಪ್ರವಾಸದಲ್ಲಿರುವ ಆರೋಗ್ಯ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಯು ಟಿ ಖಾದರ್ ಅವರು ತಮ್ಮ ಭೇಟಿಯನ್ನು ಮೊಟಕುಗೊಳಿಸಿದ್ದಾರೆ.
ಘಟನೆಯ ಮಾಹಿತಿ ತಿಳಿದ ತಕ್ಷಣ ಜಿಲ್ಲಾಧಿಕಾರಿಗಳನ್ನು ಸಂಪರ್ಕಿಸಿದ ಸಚಿವರು, ತ್ವರಿತ ಪರಿಹಾರ ಕ್ರಮಗಳಿಗೆ ಸೂಚಿಸಿದರು.
ಗಾಯಾಳುಗಳಿಗೆ ಸರಕಾರದ ವತಿಯಿಂದಲೇ ಆಸ್ಪತ್ರೆಯಲ್ಲಿ ಚಿಕಿತ್ಸಾ ವೆಚ್ಚ ಭರಿಸಲು ಹಾಗೂ ಮೃತರ ಕುಟುಂಬದವರಿಗೆ ಇಂದೇ ಪರಿಹಾರ ಮೊತ್ತ ನೀಡಲು ಅವರು ನಿರ್ದೇಶಿಸಿದ್ದಾರೆ.
ಸಚಿವರು ಇಂದು ಸಂಜೆ ಮಂಗಳೂರು ತಲುಪಿ ನೇರವಾಗಿ ಘಟನಾ ಸ್ಥಳಕ್ಕೆ ಭೇಟಿ ನೀಡಲಿದ್ದಾರೆ ಎಂದು ತಿಳಿದು ಬಂದಿದೆ. .