BREAKING
ರಾಜ್ಯ
ದೇಶ
ವಿದೇಶ
ಕ್ರೀಡೆ
ಸಿನಿಮಾ
ಉಡುಪಿ
ದಕ್ಷಿಣ ಕನ್ನಡ

Mangalore ಜುಲೈ 5ರಂದು ಪೂಜನೀಯ ಕುದ್ಮುಲ್ ರಂಗರಾವ್ ಜಯಂತಿ

ಮಂಗಳೂರು, ಜುಲೈ 02: ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಸಮಿತಿ (ಪರಿಶಿಷ್ಟ ಜಾತಿ ವಿಭಾಗ)ದ ವತಿಯಿಂದ ಮಹಾನ್ ಸಮಾಜ ಸುಧಾರಕ, ಶಿಕ್ಷಣದ ಹರಿಕಾರ, ದಲಿತೋದ್ಧಾರದ ಮುಂಚೂಣಿ ನಾಯಕ ಹಾಗೂ ಸಾಮಾಜಿಕ ಸಮಾನತೆಯ ಮಹಾನ್ ಚಿಂತಕರಾದ ಪೂಜನೀಯ ಕುದ್ಮುಲ್ ರಂಗರಾವ್ ಅವರ ಜಯಂತಿಯನ್ನು ಅರ್ಥಪೂರ್ಣ ಹಾಗೂ ವೈಭವಯುತವಾಗಿ ಆಚರಿಸುವ ಅಂಗವಾಗಿ 2026ರ ಜುಲೈ 5ರಂದು (ಭಾನುವಾರ) ವಿಶೇಷ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.




ಸಮಾಜದಲ್ಲಿ ಶಿಕ್ಷಣ ಮತ್ತು ಸಾಮಾಜಿಕ ನ್ಯಾಯದ ಬೆಳಕನ್ನು ಹರಡಿದ ಕುದ್ಮುಲ್ ರಂಗರಾವ್ ಅವರ ಆದರ್ಶಗಳನ್ನು ಸ್ಮರಿಸುತ್ತಾ, ಪರಿಶಿಷ್ಟ ಜಾತಿಯ ಕಾಲೇಜು ವಿದ್ಯಾರ್ಥಿಗಳ ಉನ್ನತ ಶಿಕ್ಷಣಕ್ಕೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ಉಚಿತ ಕಾಲೇಜು ಬ್ಯಾಗ್‌ಗಳ ವಿತರಣೆ ನಡೆಯಲಿದೆ. ಇದರೊಂದಿಗೆ ಕಾಂಗ್ರೆಸ್ ಪಕ್ಷ ಹಾಗೂ ಸರ್ಕಾರದಲ್ಲಿ ಮಹತ್ವದ ಜವಾಬ್ದಾರಿಗಳನ್ನು ನಿರ್ವಹಿಸುತ್ತಿರುವ ರಾಷ್ಟ್ರೀಯ ಮತ್ತು ರಾಜ್ಯ ಮಟ್ಟದ ಗಣ್ಯ ನಾಯಕರಿಗೆ ಅಭಿನಂದನಾ ಸಮಾರಂಭವೂ ಜರುಗಲಿದೆ.


ಕಾರ್ಯಕ್ರಮದಲ್ಲಿ ರಾಜೇಂದ್ರ ಪಾಲ್ ಗೌತಮ್ – ರಾಷ್ಟ್ರೀಯ ಅಧ್ಯಕ್ಷರು, ಅಖಿಲ ಭಾರತ ಕಾಂಗ್ರೆಸ್ ಪರಿಶಿಷ್ಟ ಜಾತಿ ವಿಭಾಗ.  ಆರ್. ಧರ್ಮಸೇನ್ – ರಾಜ್ಯಾಧ್ಯಕ್ಷರು, ಕೆಪಿಸಿಸಿ ಪರಿಶಿಷ್ಟ ಜಾತಿ ವಿಭಾಗ, ಯು.ಟಿ. ಖಾದರ್ – ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರು, ಜಕ್ಕಪ್ಪ – ವಿಧಾನ ಪರಿಷತ್ ಸದಸ್ಯರು,ಪಿ.ವಿ. ಮೋಹನ್ – ವಿಧಾನ ಪರಿಷತ್ ಸದಸ್ಯರು ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. 


ಇದರ ಜೊತೆಗೆ ಜಿಲ್ಲೆಯ ಶಾಸಕರು, ಮಾಜಿ ಶಾಸಕರು, ಮಾಜಿ ಸಂಸದರು, ಜಿಲ್ಲಾ ಕಾಂಗ್ರೆಸ್‌ನ ಹಿರಿಯ ನಾಯಕರು, ವಿವಿಧ ನಿಗಮ-ಮಂಡಳಿಗಳ ಅಧ್ಯಕ್ಷರು ಹಾಗೂ ಸದಸ್ಯರು, ಸ್ಥಳೀಯ ಜನಪ್ರತಿನಿಧಿಗಳು, ಪಕ್ಷದ ಪದಾಧಿಕಾರಿಗಳು ಮತ್ತು ಸಾವಿರಾರು ಕಾರ್ಯಕರ್ತರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.


ಈ ಕಾರ್ಯಕ್ರಮವು ಕೇವಲ ಜಯಂತಿ ಆಚರಣೆಯಾಗಿರದೆ, ಶಿಕ್ಷಣ, ಸಾಮಾಜಿಕ ನ್ಯಾಯ, ಸಮಾನ ಅವಕಾಶ ಮತ್ತು ಸಮಾಜದ ಸಬಲೀಕರಣದ ಸಂಕಲ್ಪವನ್ನು ಮತ್ತಷ್ಟು ಬಲಪಡಿಸುವ ಜನಪರ ಅಭಿಯಾನವಾಗಿದ್ದು, ಕುದ್ಮುಲ್ ರಂಗರಾವ್ ಅವರ ಚಿಂತನೆಗಳನ್ನು ಮುಂದಿನ ಪೀಳಿಗೆಗೆ ತಲುಪಿಸುವ ಮಹತ್ವದ ವೇದಿಕೆಯಾಗಲಿದೆ.


ಈ ಐತಿಹಾಸಿಕ ಕಾರ್ಯಕ್ರಮದಲ್ಲಿ ಜಿಲ್ಲೆಯ ಎಲ್ಲಾ ಕಾಂಗ್ರೆಸ್ ಪದಾಧಿಕಾರಿಗಳು, ಬ್ಲಾಕ್ ಅಧ್ಯಕ್ಷರು, ಮುಂಚೂಣಿ ಘಟಕಗಳ ಪದಾಧಿಕಾರಿಗಳು, ನಿಗಮ-ಮಂಡಳಿಗಳ ನಾಮನಿರ್ದೇಶಿತ ಸದಸ್ಯರು, ಗ್ರಾಮ ಪಂಚಾಯಿತಿ ಸದಸ್ಯರು, ಚುನಾವಣಾ ಅಭ್ಯರ್ಥಿಗಳು, ಪಕ್ಷದ ಕಾರ್ಯಕರ್ತರು, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಸಮಿತಿ (ಪರಿಶಿಷ್ಟ ಜಾತಿ ವಿಭಾಗ) ಹೃತ್ಪೂರ್ವಕವಾಗಿ ಮನವಿ ಮಾಡಿದೆ.

📢 ಸುದ್ದಿವಾಣಿ WhatsApp — ತಕ್ಷಣದ ಬ್ರೇಕಿಂಗ್ ನ್ಯೂಸ್ ಪಡೆಯಿರಿ!