ಬೆಂಗಳೂರು, ಜುಲೈ 02 : ಕೆಜಿಎಫ್, ಕಾಂತಾರ, ಸಲಾರ್ ನಂತಹ ಸೂಪಾರ್ ಹಿಟ್ ಸಿನಿಮಾಗಳನ್ನು ನೀಡಿದ್ದ ಹೊಂಬಾಳೆ ಫಿಲ್ಮ್ಸ್ ಇದೀಗ ಕಾಲಿವುಡ್ ನತ್ತ ಮುಖ ಮಾಡಿದೆ.
ತಮಿಳು ಸ್ಟಾರ್ ನಟ ಸೂರ್ಯ ಜೊತೆ ಬಿಗ್ ಬಜೆಟ್ ಸಿನಿಮಾವನ್ನು ಘೋಷಣೆ ಮಾಡಿದೆ. ಹೊಂಬಾಳೆ ಫಿಲ್ಮ್ಸ್ ಸಂಸ್ಥೆಯ ಸಂಸ್ಥಾಪಕ ವಿಜಯ್ ಕಿರಗಂದೂರು ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಜೂನ್ 29ರಂದು ಚೆನ್ನೈನಲ್ಲಿ ಚಿತ್ರದ ಮುಹೂರ್ತ ಸಮಾರಂಭ ಅದ್ಧೂರಿಯಾಗಿ ನೆರವೇರಿದೆ. ಚಿತ್ರತಂಡದ ಸದಸ್ಯರು, ಚಿತ್ರರಂಗದ ಗಣ್ಯರು ಹಾಗೂ ವಿಶೇಷ ಅತಿಥಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು ಚಿತ್ರದ ಚಿತ್ರೀಕರಣ ಶೀಘ್ರದಲ್ಲೇ ಆರಂಭವಾಗಲಿದೆ ಎಂದು ತಿಳಿದು ಬಂದಿದೆ.
'ಜೈ ಭೀಮ್' ಖ್ಯಾತಿಯ ನಿರ್ದೇಶಕ ಟಿ ಜೆ ಜ್ಞಾನವೇಲ್ ಈ ಸಿನಿಮಾ ನಿರ್ದೇಸಿಸಲಿದ್ದಾರೆ. ಇದು ಸೂರ್ಯ ಮತ್ತು ಜ್ಞಾನವೇಲ್ ಅವರ ಎರಡನೇ ಸಿನಿಮಾ ಆಗಿದ್ದು, ವಿಮರ್ಶಕರಿಂದ ಮೆಚ್ಚುಗೆ ಪಡೆದ 'ಜೈ ಭೀಮ್' ಬಳಿಕ ಈ ಜೋಡಿ ಮತ್ತೊಮ್ಮೆ ಒಂದಾಗಿರುವುದು ಅಭಿಮಾನಿಗಳಲ್ಲಿ ಭಾರೀ ನಿರೀಕ್ಷೆ ಹುಟ್ಟುಹಾಕಿದೆ. ನಟಿ ಕಯಾಡು ಲೋಹರ್ ಸೂರ್ಯ ಅವರಿಗೆ ನಾಯಕ ನಟಿಯಾಗಿ ಆಯ್ಕೆಯಾಗಿದ್ದಾರೆ. ಈ ಚಿತ್ರ ಭಾವನಾತ್ಮಕ ಕಥಾಹಂದರದ ಜೊತೆಗೆ ವಾಣಿಜ್ಯ ಅಂಶಗಳನ್ನು ಒಳಗೊಂಡಿರುವ ಗಂಭೀರ ಕಥೆಯನ್ನು ಹೊಂದಿರಲಿದೆ ಎಂದು ನಿರ್ಮಾಣ ಸಂಸ್ಥೆ ತಿಳಿಸಿದೆ. ಚಿತ್ರಕ್ಕೆ ಯುವ ಸಂಗೀತ ನಿರ್ದೇಶಕ ಸಾಯಿ ಅಭ್ಯಾಂಕರ್ ಸಂಗೀತ ಸಂಯೋಜನೆ ಮಾಡಲಿದ್ದಾರೆ. ಎಸ್ಆರ್ ಕದಿರ್ ಛಾಯಾಗ್ರಹಣ, ಕೆ ಕದಿರ್ ನಿರ್ಮಾಣ ವಿನ್ಯಾಸ ಹಾಗೂ ಫಿಲೋಮಿನ್ ರಾಜ್ ಸಂಕಲನದ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ಅನುಭವಿ ತಾಂತ್ರಿಕ ತಂಡ ಚಿತ್ರಕ್ಕೆ ಮತ್ತಷ್ಟು ಬಲ ತುಂಬಲಿದೆ.

