ಹುಬ್ಬಳ್ಳಿ, ಜುಲೈ 02 : ನೈರುತ್ಯ ರೈಲ್ವೆ ವೈದ್ಯಕೀಯ ವಿಭಾಗವು ವೈದ್ಯರ ಸಮರ್ಪಿತ ಸೇವೆಯನ್ನು ಗುರುತಿಸುವ ಮತ್ತು ಆರೋಗ್ಯ ಜಾಗೃತಿಯನ್ನು ಉತ್ತೇಜಿಸುವ ವಿವಿಧ ಕಾರ್ಯಕ್ರಮಗಳೊಂದಿಗೆ 'ರಾಷ್ಟ್ರೀಯ ವೈದ್ಯರ ದಿನಾಚರಣೆ – 2026' ಅನ್ನು ಆಚರಿಸಿತು.
ಹುಬ್ಬಳ್ಳಿಯ ಸೆಂಟ್ರಲ್ ಆಸ್ಪತ್ರೆಯಲ್ಲಿ, ನೈರುತ್ಯ ರೈಲ್ವೆಯ ಪ್ರಧಾನ ಮುಖ್ಯ ವೈದ್ಯಕೀಯ ನಿರ್ದೇಶಕರಾದ (PCMD) ಡಾ. ಶೋಭಾ ಜಾಸ್ಮಿನ್ ಎಸ್. ಅವರು ವೈದ್ಯರೊಂದಿಗೆ ಸಂವಾದ ನಡೆಸಿ, ರೈಲ್ವೆ ಆರೋಗ್ಯ ಸೇವೆಗೆ ಅವರು ಸಲ್ಲಿಸುತ್ತಿರುವ ಸಮರ್ಪಣಾ ಮನೋಭಾವದ ಸೇವೆಯನ್ನು ಶ್ಲಾಘಿಸಿದರು. ಇದೇ ಸಂದರ್ಭದಲ್ಲಿ ಹಿರಿಯ ವೈದ್ಯರನ್ನು ಸನ್ಮಾನಿಸಲಾಯಿತು ಮತ್ತು ನೈತಿಕ ಹಾಗೂ ಸಹಾನುಭೂತಿಯ ವೈದ್ಯಕೀಯ ಸೇವೆಗೆ ತಮ್ಮ ಬದ್ಧತೆಯನ್ನು ಪುನರುಚ್ಚರಿಸಲು ವೈದ್ಯರಿಗೆ 'ವೈದ್ಯರ ಪ್ರತಿಜ್ಞಾವಿಧಿ'ಯನ್ನು ಬೋಧಿಸಲಾಯಿತು. ನಿವೃತ್ತ ರೈಲ್ವೆ ಉದ್ಯೋಗಿಗಳು ಸಹ ಈ ಆಚರಣೆಯಲ್ಲಿ ಪಾಲ್ಗೊಂಡು ವೈದ್ಯರಿಗೆ ತಮ್ಮ ಶುಭ ಹಾರೈಕೆಗಳನ್ನು ತಿಳಿಸಿದರು.
ಈ ದಿನಾಚರಣೆಯ ಭಾಗವಾಗಿ, ಬೆಂಗಳೂರು ವಿಭಾಗೀಯ ರೈಲ್ವೆ ಆಸ್ಪತ್ರೆಯು ಸುಮಾರು 50 ರಷ್ಟು ಹೌಸ್ ಕೀಪಿಂಗ್ (ಸ್ವಚ್ಛತಾ) ಸಿಬ್ಬಂದಿಗಾಗಿ ಆರೋಗ್ಯ ತಪಾಸಣೆ ಮತ್ತು ಜಾಗೃತಿ ಕಾರ್ಯಕ್ರಮವನ್ನು ಆಯೋಜಿಸಿತ್ತು. ಇದರಲ್ಲಿ ಅಧಿಕ ರಕ್ತದೊತ್ತಡ, ಮಧುಮೇಹ ಮತ್ತು ಹೆಚ್.ಐ.ವಿ ತಪಾಸಣೆಗಳನ್ನು ಒಳಗೊಂಡಿತ್ತು. ಇದಲ್ಲದೆ, ಸುಬ್ರಹ್ಮಣ್ಯ ರೋಡ್ ರೈಲ್ವೆ ನಿಲ್ದಾಣದಲ್ಲಿ ಕಬಕಪುತ್ತೂರು ಆರೋಗ್ಯ ಘಟಕದ ವತಿಯಿಂದ ಸಾರ್ವಜನಿಕ ಆರೋಗ್ಯ ಶಿಬಿರವನ್ನು ನಡೆಸಲಾಯಿತು. ಅಲ್ಲಿ ಅಧಿಕ ರಕ್ತದೊತ್ತಡ, ಮಧುಮೇಹ ಹಾಗೂ ಬೊಜ್ಜು ಕುರಿತು ತಪಾಸಣೆ ನಡೆಸಿ, ಸಣ್ಣಪುಟ್ಟ ಕಾಯಿಲೆಗಳಿಗೆ ಚಿಕಿತ್ಸೆ ನೀಡಲಾಯಿತು.
ಇದೇ ವೇಳೆ, ವೈದ್ಯಕೀಯ ವಿಭಾಗವು ಹುಬ್ಬಳ್ಳಿಯ ಕ್ಯಾರೇಜ್ ವರ್ಕ್ಶಾಪ್ನ ಅಧಿಕಾರಿಗಳು ಮತ್ತು ಮೇಲ್ವಿಚಾರಕರಿಗಾಗಿ ಕಾರ್ಡಿಯೋಪಲ್ಮನರಿ ರಿಸಸಿಟೇಶನ್ (CPR) ತರಬೇತಿ ಕಾರ್ಯಕ್ರಮವನ್ನು ಆಯೋಜಿಸಿತ್ತು. ಈ ಕಾರ್ಯಕ್ರಮವು ಬೇಸಿಕ್ ಲೈಫ್ ಸಪೋರ್ಟ್ (BLS) ಮತ್ತು ಸಿ.ಪಿ.ಆರ್. ಕುರಿತಾದ ನೇರ ಪ್ರಾತ್ಯಕ್ಷಿಕೆಯನ್ನು ಒಳಗೊಂಡಿದ್ದು, ಅತ್ಯಗತ್ಯ ಜೀವ ರಕ್ಷಕ ತಂತ್ರಗಳು ಮತ್ತು ತುರ್ತು ಸಂದರ್ಭದ ನಿರ್ವಹಣಾ ವಿಧಾನಗಳ ಬಗ್ಗೆ ಮಾಹಿತಿ ನೀಡಲಾಯಿತು. ವರ್ಕ್ಶಾಪ್ನ ಅಧಿಕಾರಿಗಳು, ಮೇಲ್ವಿಚಾರಕರು ಮತ್ತು ಸಿಬ್ಬಂದಿ ಈ ಪ್ರಾಯೋಗಿಕ ತರಬೇತಿ ಅವಧಿಯಲ್ಲಿ ಉತ್ಸಾಹದಿಂದ ಪಾಲ್ಗೊಂಡರು.

