BREAKING
ರಾಜ್ಯ
ದೇಶ
ವಿದೇಶ
ಕ್ರೀಡೆ
ಸಿನಿಮಾ
ಉಡುಪಿ
ದೇಶ

Bengaluru ಮೋಸ್ಟ್ ವಾಂಟೆಡ್ ಉಗ್ರನ ಪಾಸ್‌ಪೋರ್ಟ್‌ಗಾಗಿ ನಕಲಿ ದಾಖಲೆ ಸೃಷ್ಟಿ, ಟ್ರಾವೆಲ್‌ ಏಜೆಂಟ್‌ ಮೇಲಿನ ಪ್ರಕರಣ ರದ್ದತಿಗೆ ಹೈಕೋರ್ಟ್ ನಕಾರ

ಬೆಂಗಳೂರು, ಜುಲೈ 01 :   ಮೋಸ್ಟ್ ವಾಂಟೆಡ್ ಉಗ್ರ ಇಬ್ರಾಹಿಂ ಖಲೀಲ್ ಸೇರಿ ಸುಮಾರು 15 ಮಂದಿಗೆ ನಕಲಿ ದಾಖಲೆಗಳನ್ನು ಸೃಷ್ಟಿಸಿ, ಪಾಸ್‌ಪೋರ್ಟ್ ನವೀಕರಿಸಲು ನೆರವು ನೀಡಿದ ಆರೋಪಿ  ಟ್ರಾವೆಲ್ ಏಜೆಂಟ್ ವಿರುದ್ಧದ ಕ್ರಿಮಿನಲ್ ಪ್ರಕರಣ ರದ್ದತಿಗೆ ಕರ್ನಾಟಕ ಉಚ್ಚ ನ್ಯಾಯಾಲಯ ನಿರಾಕರಿಸಿದೆ.



ಮಂಗಳೂರು ಪೂರ್ವ ಪೊಲೀಸ್ ಠಾಣೆಯಲ್ಲಿ  ದಾಖಲಾಗಿರುವ ಪ್ರಕರಣ ರದ್ದು ಕೋರಿ ಮಂಗಳೂರಿನ ಯು ಎಂ ಹೈದರ್ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠ ವಜಾಗೊಳಿಸಿದೆ.

ರಾಷ್ಟ್ರೀಯ ಭದ್ರತೆಗೆ ಧಕ್ಕೆ ತರುವ ಇಂತಹ ಗಂಭೀರ ಪ್ರಕರಣಗಳಲ್ಲಿ ಕೇವಲ ಅಂಗವಿಕಲತೆ ಅಥವಾ ಅನಾರೋಗ್ಯದ ಕಾರಣಗಳನ್ನು ನೀಡಿ ಆರೋಪಿಯು ಕಾನೂನಿನ ಕ್ರಮದಿಂದ ನುಣುಚಿಕೊಳ್ಳಲು ಸಾಧ್ಯವಿಲ್ಲ ಎಂದು ಪೀಠ ತೀಕ್ಷ್ಣವಾಗಿ ನುಡಿದಿದೆ. ಜತೆಗೆ, ಅರ್ಜಿದಾರನ ಏಜೆನ್ಸಿಯಿಂದ ಸುಮಾರು 15 ಬೇರೆ ಬೇರೆ ಪಾಸ್‌ಪೋರ್ಟ್ ಅರ್ಜಿಗಳಿಗೆ ಒಂದೇ ವಿಳಾಸ ನೀಡಲಾಗಿದ್ದರೂ ಅವುಗಳ ಬಗ್ಗೆ ಸೂಕ್ತ ಪರಿಶೀಲನೆ ನಡೆಸದ ಪೊಲೀಸ್ ಕಾನ್‌ಸ್ಟೆಬಲ್ ಕಾರ್ಯವೈಖರಿಯನ್ನೂ ಹೈಕೋರ್ಟ್ ತೀವ್ರವಾಗಿ ಖಂಡಿಸಿದೆ.

“ಅರ್ಜಿದಾರರು ಹೊಂದಿರುವ ಅಂಗವೈಕಲ್ಯ ಅಥವಾ ಆರೋಗ್ಯದ ಸಮಸ್ಯೆಗಳು ಮಾನವೀಯ ನೆಲೆಯಲ್ಲಿ ಸಹಾನುಭೂತಿಗೆ ಅರ್ಹವಾಗಿದ್ದರೂ, ದೇಶದ ಹಿತಾಸಕ್ತಿಗೆ ವಿರುದ್ಧವಾದ ಕೃತ್ಯಗಳ ತನಿಖೆಯನ್ನು ತಡೆಯಲು ಇವು ಕಾರಣವಾಗಲಾರವು. ಅರ್ಜಿದಾರರು ಪೂರ್ಣಪ್ರಮಾಣದ ವಿಚಾರಣೆಯನ್ನು ಎದುರಿಸಿ ತಮ್ಮನ್ನು ನಿರಪರಾಧಿ ಎಂದು ಸಾಬೀತುಪಡಿಸಬೇಕಾಗುತ್ತದೆ” ಎಂದು ನ್ಯಾಯಾಲಯ ಆದೇಶದಲ್ಲಿ ಹೇಳಿದೆ. 


“ಟ್ರಾವೆಲ್ ಏಜೆಂಟ್ ಆಗಿರುವ ಅರ್ಜಿದಾರರು ತಾವು ಕೇವಲ ಕ್ಲೆರಿಕಲ್ ಕೆಲಸ ಅಥವಾ ಸಾಮಾನ್ಯ ಸಹಾಯ ಮಾಡಿರುವುದಾಗಿ ಹೇಳಲು ಸಾಧ್ಯವಿಲ್ಲ. ಭಯೋತ್ಪಾದನಾ ಚಟುವಟಿಕೆಯಲ್ಲಿ ಭಾಗಿಯಾಗಿರುವ ಶಂಕಿತ ವ್ಯಕ್ತಿಗೆ ಪಾಸ್‌ಪೋರ್ಟ್ ಪಡೆಯಲು ನಕಲಿ ವಿಳಾಸ ಹಾಗೂ ದಾಖಲೆಗಳನ್ನು ನೀಡಿರುವುದು ಸಾಬೀತಾದರೆ, ಅದು ಕೇವಲ ಕ್ರಿಮಿನಲ್ ಅಪರಾಧವಾಗುವುದಿಲ್ಲ. ಬದಲಿಗೆ ರಾಷ್ಟ್ರದ ಸಾರ್ವಭೌಮತೆ ಮತ್ತು ಭದ್ರತೆಗೆ ಧಕ್ಕೆ ತರುವ ಗಂಭೀರ ಕೃತ್ಯವಾಗಲಿದೆ” ಎಂದು ಪೀಠ ಕಳವಳ ವ್ಯಕ್ತಪಡಿಸಿದೆ.


“ಅರ್ಜಿದಾರ ಹೈದರ್ ಅವರ ಟ್ರಾವೆಲ್ ಏಜೆನ್ಸಿಯಿಂದ ಸಲ್ಲಿಕೆಯಾಗಿದ್ದ ಸುಮಾರು 15 ಪಾಸ್‌ಪೋರ್ಟ್ ಅರ್ಜಿಗಳಿಗೆ ಒಂದೇ ವಿಳಾಸ ನೀಡಲಾಗಿದ್ದರೂ, ಸೂಕ್ತ ಸ್ಥಳ ಪರಿಶೀಲನೆ ನಡೆಸದೆ ಅನುಮೋದನೆ ನೀಡಿದ್ದ ಪೊಲೀಸ್ ಕಾನ್‌ಸ್ಟೆಬಲ್ ಲಕ್ಷ್ಮಣ್ ಅವರ ನಡೆ ತೀವ್ರ ಆಘಾತಕಾರಿಯಾಗಿದೆ. ಇದು ಕೇವಲ ಕರ್ತವ್ಯ ಲೋಪವಲ್ಲ, ಸಾರ್ವಜನಿಕ ನಂಬಿಕೆಗೆ ಬಗೆದ ದ್ರೋಹವಾಗಿದೆ. ಅವರನ್ನು ಸುಮ್ಮನೆ ಬಿಡಲು ಸಾಧ್ಯವಿಲ್ಲ” ಎಂದು ನ್ಯಾಯಾಲಯ ಕಟುವಾಗಿ ಹೇಳಿದೆ.


“ಪಾಸ್‌ಪೋರ್ಟ್‌ ಪ್ರಕ್ರಿಯೆಯ ಭಾಗವಾಗಿ ಪರಿಶೀಲನೆ ನಡೆಸಿದ್ದ ಪೊಲೀಸ್ ಕಾನ್‌ಸ್ಟೆಬಲ್ ಲಕ್ಷ್ಮಣ್ ವಿರುದ್ಧ ಕಾನೂನು ಕ್ರಮ ಜರುಗಿಸಲು ಈಗಾಗಲೇ ಅನುಮತಿ ಕೋರಲಾಗಿದ್ದು, ಸದ್ಯ ಪ್ರಸ್ತಾವನೆಯು ಸಕ್ಷಮ ಪ್ರಾಧಿಕಾರದ ಮುಂದೆ ಪರಿಗಣನೆಗೆ ಬಾಕಿ ಇದೆ ಎಂದು ರಾಜ್ಯ ಸರ್ಕಾರಿ ಅಭಿಯೋಜಕರು ತಿಳಿಸಿದ್ದಾರೆ. ಆ ಪ್ರಸ್ತಾವನೆಯನ್ನು ರಾಜ್ಯ ಸರ್ಕಾರ ಶೀಘ್ರವಾಗಿ ಪರಿಶೀಲಿಸಿ ಸೂಕ್ತ ನಿರ್ಧಾರ ಕೈಗೊಳ್ಳಬೇಕು” ಎಂದು ಆದೇಶಿಸಿರುವ ಹೈಕೋರ್ಟ್, “ರಾಷ್ಟ್ರದ ವಿರುದ್ಧ ನೇರವಾಗಿ ಅಪರಾಧ ಎಸಗುವವರು ಮಾತ್ರವಲ್ಲ, ಅದಕ್ಕೆ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ನೆರವಾಗುವ ಅಥವಾ ಬೇಜವಾಬ್ದಾರಿತನ ತೋರುವ ಪ್ರತಿಯೊಬ್ಬರೂ ಕಾನೂನಿನ ವ್ಯಾಪ್ತಿಗೆ ಬರಬೇಕು” ಎಂಬ ಕಠಿಣ ಎಚ್ಚರಿಕೆಯ ಸಂದೇಶ ರವಾನಿಸಿದೆ.


📢 ಸುದ್ದಿವಾಣಿ WhatsApp — ತಕ್ಷಣದ ಬ್ರೇಕಿಂಗ್ ನ್ಯೂಸ್ ಪಡೆಯಿರಿ!